ಶರಾವತಿ ನೀರು ಬೆಂಗಳೂರಿಗೆ ಒಯ್ಯುವ ಪ್ರಸ್ತಾಪ ಇಲ್ಲ

KannadaprabhaNewsNetwork |  
Published : May 13, 2025, 11:55 PM IST
ಸಚಿವ ಮಂಕಾಳ ವೈದ್ಯ ಸಭೆ ನಡೆಸಿದರು  | Kannada Prabha

ಸಾರಾಂಶ

ಆಸಕ್ತಿ ಇಲ್ಲದ ಅಧಿಕಾರಿಗಳು ಇಲ್ಲಿಂದ ವರ್ಗಾವಣೆ ತೆಗೆದುಕೊಳ್ಳಿ

ಹೊನ್ನಾವರ: ಶರಾವತಿ ನೀರನ್ನು ಬೆಂಗಳೂರಿಗೆ ಒಯ್ಯುವ ಪ್ರಸ್ತಾಪವೇ ಇಲ್ಲ. ಇಲ್ಲಿ ಸಂಘಟನೆ ಮಾಡಿಕೊಂಡು ಏನೇನೋ ಹೇಳುತ್ತಿದ್ದಾರೆ. ಅವರು ಹೇಳುತ್ತಿರುವುದು ಬೋಗಸ್. ಪ್ರಚಾರಕ್ಕಾಗಿ ಅವರು ಈ ವಿಷಯ ಹೇಳಿಕೊಳುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಶರಾವತಿ ಆರತಿ ಸಮಿತಿಯ ನೇತೃತ್ವದ ಹೋರಾಟಕ್ಕೆ ತಿರುಗೇಟು ನೀಡಿದರು.

ತಾಪಂ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.

ತಾಲೂಕಿನ ಅಧಿಕಾರಿಗಳು ಒಳ್ಳೆಯದು ಮಾಡುವುದಕ್ಕಿಂತ ಕೆಟ್ಟದ್ದೇ ಮಾಡುತ್ತಿದ್ದಾರೆ. ಆಸಕ್ತಿ ಇಲ್ಲದ ಅಧಿಕಾರಿಗಳು ಇಲ್ಲಿಂದ ವರ್ಗಾವಣೆ ತೆಗೆದುಕೊಳ್ಳಿ ಎಂದು ಸಚಿವ ಮಂಕಾಳ ವೈದ್ಯ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿ ಮಾತನಾಡಿ, ತಾಲೂಕಿನಲ್ಲಿ ೩೩೦ಅಂಗನವಾಡಿಗಳು ಕಾರ್ಯ ನಿರ್ವಹಿಸುತ್ತಿವೆ.ಅವುಗಳಲ್ಲಿ ಹೆಚ್ಚಿನವು ಸ್ವಂತ ಕಟ್ಟಡ ಹೊಂದಿವೆ. ಕೆಲವು ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅಂಗನವಾಡಿಗಳು ಅಸ್ತಿತ್ವಕ್ಕೆ ಬಂದು ೩೦ಕ್ಕೂ ಹೆಚ್ಚು ವರ್ಷಗಳಾದವು. ಈಗಲೂ ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ. ಅಂಗನವಾಡಿಗಳಿಗೆ ಸ್ವಂತ ಜಾಗ ಮಂಜೂರಿ ಮಾಡಲು ಅರಣ್ಯ ಇಲಾಖೆ ಸಹಕರಿಸಬೇಕು ಎಂದು ತಾಕೀತು ಮಾಡಿದರು.

ಹೊಸ ವಿದ್ಯುತ್ ಸಂಪರ್ಕ ನೀಡಲು ಹೆಸ್ಕಾಂ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎನ್ನುವ ದೂರು ಕೇಳಿ ಬರುತ್ತಿದೆ ಎಂದು ಸಚಿವರು, ಹೆಸ್ಕಾಂ ಅಧಿಕಾರಿಯನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಹೆಸ್ಕಾಂ ಅಧಿಕಾರಿ ರಾಮಕೃಷ್ಣ ಭಟ್, ವಿದ್ಯುತ್ ಸಂಪರ್ಕ ಪಡೆಯುವವರು ವಾಸ ಯೋಗ್ಯ ಪ್ರಮಾಣಪತ್ರ ಹೊಂದಿರಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ. ಹೀಗಾಗಿ ಈ ಪ್ರಮಾಣಪತ್ರ ಹೊಂದಿರದೇ ಇರುವವರಿಗೆ ವಿದ್ಯುತ್ ಸಂಪರ್ಕ ನೀಡಲು ಆಗುವುದಿಲ್ಲ. ಸ್ಥಳಿಯ ಸಂಸ್ಥೆಗಳು ಪ್ರಮಾಣಪತ್ರ ನೀಡಿದಲ್ಲಿ ವಿದ್ಯುತ್ ಸಂಪರ್ಕ ಒದಗಿಸಲಾಗುವುದು ಎಂದರು. ವಿದ್ಯುತ್ ಸೌಲಭ್ಯವು ಮೂಲಭೂತ ಅವಶ್ಯಕತೆಯಾಗಿದೆ. ಜನರಿಗೆ ವಿದ್ಯುತ್ ಸೌಲಭ್ಯ ನೀಡಬೇಕು ಎಂದು ಸಚಿವರು ಸೂಚಿಸಿದರು.

ತಾಪಂ ಆಡಳಿತ ಅಧಿಕಾರಿ ಶಿವರಾಮ ಎಂ.ಆರ್., ತಹಸೀಲ್ದಾರ ಪ್ರವೀಣ ಕರಾಂಡೆ, ತಾಪಂ ಇಒ ಚೇತನಕುಮಾರ್, ಕೆಡಿಪಿ ನಾಮ ನಿದೇರ್ಶಿಸಿತ ಸದಸ್ಯರು, ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

ವಾಟರ್ ಪಾರ್ಕ್ ಪರ ಬ್ಯಾಟಿಂಗ್ ಮಾಡಿದ ಸಚಿವ: ಮಾವಿನಕುರ್ವಾದ ವಾಟರ್‌ಪಾರ್ಕ್ ಗೆ ಶರಾವತಿ ಕುಡಿಯುವ ನೀರಿನ ಯೋಜನೆಯ ನೀರು ಪೂರೈಕೆಗೆ ಸಂಬಂಧಿಸಿದಂತೆ ಪಪಂ ಮುಖ್ಯಾಧಿಕಾರಿ ಯೇಸು ಬೆಂಗಳೂರು ಮೇಲೆ ಸಚಿವ ಮಂಕಾಳ ವೈದ್ಯ ಗರಂ ಆದರು. ಮಾವಿನಕುರ್ವಾ ವಾಟರ್ ಪಾರ್ಕನವರು ಅರ್ಜಿ ನೀಡಿದರೂ ನಿಮ್ಮಿಂದ ಸ್ಪಂದನೆ ಇಲ್ಲ. ಅವರಿಗೆ ನೀರು ಕೊಡಲು ನಿನಗೇನಾಗಿದೆ. ವಾಟರ್ ಪಾರ್ಕಿನವರು ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುವಂತಾಗಿದೆ. ನೀರು ಕೊಡಲು ಹಿಂದೇಟು ಹಾಕುತ್ತಿರುವ ನಿನ್ನ ಅಗತ್ಯವಿಲ್ಲ. ಸಭೆಯನ್ನು ಬಿಟ್ಟು ಹೋಗು ಎಂದು ಏಕವಚನದಲ್ಲಿ ಸಚಿವ ಮಂಕಾಳ ವೈದ್ಯ ಹರಿಹಾಯ್ದರು. ವಾಟರ್ ಪಾರ್ಕ್ ಪರ ಬ್ಯಾಟಿಂಗ್ ಮಾಡುತ್ತಿರುವ ಹಾಗೂ ಅಧಿಕಾರಿಯ ಮೇಲೆ ಹರಿಹಾಯುತ್ತಿರುವ ಸಚಿವರ ನಡೆಯು ಸಭೆಯಲ್ಲಿದ್ದವರ ಹುಬ್ಬೇರಿಸುವಂತೆ ಮಾಡಿತು.

PREV

Recommended Stories

ಭಕ್ತರ ಸಹಕಾರದಿಂದ ದೇವಸ್ಥಾನದಲ್ಲಿ ಹೊಸತನ
ಪತ್ನಿ ಮೇಲೆ ಹಲ್ಲೆಗೈದು ಅರ್ಧ ತಲೆ ಬೋಳಿಸಿದ ಪತಿ