ಬಿಬಿಎಂಪಿ ಅಧಿಕಾರಿಗಳಿಂದ 45 ಸಾವಿರಕ್ಕೂ ಅಧಿಕ ಆಸ್ತಿಗಳಿಗೆ ಅಕ್ರಮ ‘ಎ’ ಖಾತಾ: ಅಕ್ರಮ ಎಸಗಿದವರಿಗೆ ಇಲ್ಲ ಶಿಕ್ಷೆ!

KannadaprabhaNewsNetwork | Updated : Jan 15 2024, 02:16 PM IST

ಸಾರಾಂಶ

ಬಿಬಿಎಂಪಿ ಅಧಿಕಾರಿಗಳಿಂದ 45 ಸಾವಿರಕ್ಕೂ ಅಧಿಕ ಆಸ್ತಿಗಳಿಗೆ ಅಕ್ರಮ ‘ಎ’ ಖಾತಾ: ಅಕ್ರಮ ಎಸಗಿದವರಿಗೆ ಇಲ್ಲ ಶಿಕ್ಷೆ! ಸಮಿತಿಯ ತನಿಖೆ ಮುಗಿದರೂ ಪಾಲಿಕೆ ದಿವ್ಯ ಮೌನ

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎಂಟು ವರ್ಷದಲ್ಲಿ ಬರೋಬ್ಬರಿ 45 ಸಾವಿರಕ್ಕೂ ಅಧಿಕ ಆಸ್ತಿಗಳಿಗೆ ಅಕ್ರಮವಾಗಿ ‘ಎ’ ಖಾತಾ ಪ್ರಮಾಣ ಪತ್ರ ನೀಡಿರುವುದು ದೃಢಪಟ್ಟರೂ ಈವರೆಗೆ ಯಾವುದೇ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ.

ನಗರದಲ್ಲಿ ‘ಬಿ’ ಖಾತಾ ಆಸ್ತಿಗಳಿಗೆ ಅಕ್ರಮವಾಗಿ ‘ಎ’ ಖಾತೆ ನೀಡುವ ಕುರಿತಂತೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಕಳೆದೊಂದು ವರ್ಷದ ಹಿಂದೆ ಪಾಲಿಕೆಯ ಹಣಕಾಸು ವಿಭಾಗದ ವಿಶೇಷ ಆಯುಕ್ತರ ನೇತೃತ್ವದಲ್ಲಿ ನಾಲ್ವರು ಅಧಿಕಾರಿಗಳ ಸಮಿತಿ ರಚಿಸಿ ವರದಿ ನೀಡುವಂತೆ ಮುಖ್ಯ ಆಯುಕ್ತರು ನಿರ್ದೇಶಿಸಿದ್ದರು.

ಅದರಂತೆ ಹಣಕಾಸು ವಿಭಾಗದ ವಿಶೇಷ ಆಯುಕ್ತರ ತಂಡವು ಅಂಜನಾಪುರದ ಬಿಬಿಎಂಪಿಯ ಕಂದಾಯ ಉಪ ವಿಭಾಗಕ್ಕೆ ಭೇಟಿ ನೀಡಿ ಅಕ್ರಮ ಎ ಖಾತಾ ನೀಡಿದ ಎರಡು ವಾರ್ಡ್‌ಗಳ ದಾಖಲೆ ಪರಿಶೀಲನೆ ಮಾಡಿತ್ತು. 

ಈ ವೇಳೆ ಕೇವಲ ಎರಡು ವಾರ್ಡ್‌ನಲ್ಲಿ ಬರೋಬ್ಬರಿ 698 ಅಕ್ರಮ ಎ ಖಾತೆ ಪ್ರಮಾಣ ಪತ್ರ ನೀಡಿರುವುದು ಕಂಡು ಬಂದಿತ್ತು.

ಹೀಗಾಗಿ, ಸಮಗ್ರ ತನಿಖೆಗೆ ಮುಂದಾದ ಸಮಿತಿಯು ಬಿಬಿಎಂಪಿಯ 64 ಕಂದಾಯ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳೇ ತಮ್ಮ ಉಪ ವಿಭಾಗದಲ್ಲಿ ಅಕ್ರಮವಾಗಿ ಎ ಖಾತಾ ನೀಡಿರುವ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ನೀಡುವಂತೆ ಸೂಚಿಸಲಾಗಿತ್ತು.

ಆ ಪ್ರಕಾರ ಕಳೆದ ಜುಲೈನಲ್ಲಿ 45 ಸಾವಿರಕ್ಕೂ ಅಧಿಕ ಬಿ ಖಾತಾ ಆಸ್ತಿಗಳಿಗೆ ಅಕ್ರಮವಾಗಿ ಎ ಖಾತಾ ನೀಡಿರುವುದು ಪತ್ತೆ ಮಾಡಲಾಗಿತ್ತು.

ಕನಿಷ್ಠ ನೋಟಿಸ್‌ ಕೂಡಾ ಇಲ್ಲ!

ತನಿಖೆ ಮುಗಿದು ಆರೇಳು ತಿಂಗಳು ಕಳೆದಿದೆ. ಬಿ ಖಾತಾ ಆಸ್ತಿಗಳಿಗೆ ಅಕ್ರಮವಾಗಿ ಎ ಖಾತಾ ಪ್ರಮಾಣ ಪತ್ರ ನೀಡಿದ್ದರಿಂದ ಕಳೆದ ಎಂಟು ವರ್ಷದಲ್ಲಿ ಸಾವಿರಾರು ಕೋಟಿ ರುಪಾಯಿ ಆದಾಯ ನಷ್ಟ ಉಂಟಾಗಿರುವುದು ಕಣ್ಮುಂದೆ ಇದೆ. 

ಆದರೂ ನಷ್ಟಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಈವರೆಗೆ ಯಾವುದೇ ಶಿಸ್ತು ಕ್ರಮ ಕೈಗೊಂಡಿಲ್ಲ. ಕನಿಷ್ಠ ಪಕ್ಷ ಅಕ್ರಮ ಆರೋಪ ಇರುವ ಅಧಿಕಾರಿಗಳಿಗೆ ನೋಟಿಸ್‌ ಸಹ ನೀಡಿಲ್ಲ. ಇದು ಹಗರಣ ಮುಚ್ಚಿ ಹಾಕುವ ಯತ್ನವೇ? ಎಂಬ ಅನುಮಾನಕ್ಕೆ ಕಾರಣವಾಗಿದೆ.

ಬಿಬಿಎಂಪಿಯು ನಗರದಲ್ಲಿ 45 ಸಾವಿರ ಬಿ ಖಾತಾ ಆಸ್ತಿಗಳಿಗೆ ಅಕ್ರಮವಾಗಿ ಎ ಖಾತಾ ನೀಡಲಾಗಿದೆ ಎಂದು ಪಟ್ಟಿ ಸಿದ್ಧಪಡಿಸಿ ಆರೇಳು ತಿಂಗಳು ಕಳೆದಿವೆ. 

ಆ ಬಳಿಕ ತನಿಖೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಜತೆಗೆ, ಈ ವಿಚಾರವನ್ನು ಕಂದಾಯ ವಿಭಾಗದ ವಿಶೇಷ ಆಯುಕ್ತರಿಗೆ ವಹಿಸಲಾಗಿದೆ. ಈ ಮೂಲಕ ಹಗರಣದಲ್ಲಿ ಭಾಗಿಯಾದ ಅಧಿಕಾರಿಗಳನ್ನು ರಕ್ಷಿಸುವುದಕ್ಕೆ ಹಿರಿಯ ಅಧಿಕಾರಿಗಳು ಮುಂದಾಗಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಮತ್ತಷ್ಟು ಸಂಕಷ್ಟಕ್ಕೆ ಆಸ್ತಿ ಮಾಲೀಕರು:  ನಗರದಲ್ಲಿ 45 ಸಾವಿರ ಬಿ ಆಸ್ತಿಗಳಿಗೆ ಎ ಖಾತಾ ಪ್ರಮಾಣ ಪತ್ರವನ್ನು ನೀಡಲಾಗಿದೆ ಎಂದು ಹೇಳಿ ಬಿಬಿಎಂಪಿ ಸುಮ್ಮನಾಗಿದೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಅಧಿಕಾರಿಗಳು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. 

ಆಸ್ತಿ ಮಾಲೀಕರಿಗೆ ನಿಮ್ಮ ಆಸ್ತಿಯನ್ನು ಮತ್ತೆ ಬಿ ಖಾತಾಗೆ ಸೇರಿಸಲಾಗುತ್ತಿದೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪಗಳು ಬಿಬಿಎಂಪಿ ಹೊರ ವಲಯದ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕೇಳಿ ಬರುತ್ತಿವೆ. ಈಗಾಗಲೇ ಸಾಕಷ್ಟು ಹಣ ಕಳೆದುಕೊಂಡಿರುವ ಆಸ್ತಿ ಮಾಲೀಕರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಬಿ ಖಾತಾ ಆಸ್ತಿಗಳಿಗೆ ಎ ಖಾತಾ ಪ್ರಮಾಣ ಪತ್ರ ನೀಡಿದ ಅಧಿಕಾರಿ ವಿರುದ್ಧ ಕ್ರಮವಾಗಿಲ್ಲ. ಈ ರೀತಿ ತಪ್ಪು ಮಾಡುವುದಕ್ಕೆ ಅವಕಾಶ ಇರದಂತೆ ಡಿಜಿಟಲ್‌ ವ್ಯವಸ್ಥೆ ಜಾರಿಗೆ ತರುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತಿದೆ. ಅದಕ್ಕೆ ಸ್ವಲ್ಪ ಸಮಯ ಬೇಕಿದೆ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದರು.

ಯಾವ ವರ್ಷ ಎಷ್ಟು ಬಿ ಅಕ್ರಮ ಖಾತಾ?

ವರ್ಷಅಕ್ರಮ ಖಾತಾ ಹಂಚಿಕೆ

2015-163,242

2016-175,4272017-185,780

2018-196,742

2019-206,011

2020-215,4122021-225,3312022-236,271

2023-24817ಒಟ್ಟು45,133

Share this article