ವಿಘ್ನೇಶ್ ಎಂ. ಭೂತನಕಾಡು
ನಾಡಿಗೆ ಬಂದು ಉಪಟಳ ನೀಡುವ ಕಾಡಾನೆಗಳನ್ನು ಸೆರೆ ಹಿಡಿದು ಪಳಗಿಸುವ ಕೇಂದ್ರ ದುಬಾರೆ. ಆದರೆ ಇತ್ತೀಚೆಗೆ ಹಣಕ್ಕಾಗಿ ಇದು ಪ್ರವಾಸಿ ಕೇಂದ್ರವಾಗಿ ಬದಲಾಗಿದೆ. ಯಾವುದೇ ರಕ್ಷಣೆ ಇಲ್ಲದೆ ಪ್ರವಾಸಿಗರಿಗೆ ಮುಕ್ತವಾಗಿರುವುದಕ್ಕೆ ಈ ಹಿಂದಿನಿಂದಲೂ ವಿರೋಧಗಳು ವ್ಯಕ್ತವಾಗುತ್ತಿತ್ತು. ದುಬಾರೆಯಲ್ಲಿ ಯಾವುದೇ ಅನಾಹುತಗಳು ಸಂಭವಿಸಿದಾಗ ಸೂಕ್ತ ಚಿಕಿತ್ಸೆಗಾಗಿ ಸ್ಥಳದಲ್ಲಿ ಆಂಬುಲೆನ್ಸ್ ಇಲ್ಲ. ಪ್ರಥಮ ಚಿಕಿತ್ಸೆ ವ್ಯವಸ್ಥೆ ಕೂಡಾ ಇಲ್ಲ. ಆನೆಗಳು ಮದವೇರಿದಾಗ ನಿಯಂತ್ರಣ ಮಾಡಲು ಪರಿಣಿತರಿಲ್ಲ ಎಂಬ ಸಾಕಷ್ಟು ದೂರುಗಳಿದೆ. ಹೀಗಿದ್ದರೂ ಪ್ರವಾಸಿರನ್ನು ಆನೆಯ ಸಮೀಪದಲ್ಲೇ ಬಿಡುವ ಮೂಲಕ ತೀರಾ ನಿರ್ಲ್ಯಕ್ಷ ವಹಿಸಲಾಗಿದೆ.
ದುಬಾರೆ ಸಾಕಾನೆ ಶಿಬಿರದಲ್ಲಿ ಆನೆಗಳನ್ನು ಸ್ನಾನ ಮಾಡಿಸಲು ಪೈಪೋಟಿ ನಡೆಯುತ್ತಿದೆ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಇಲ್ಲಿನ ಕೆಲವರ ನಿರ್ಲಕ್ಷ್ಯತನದಿಂದಾಗಿ ಈ ಘಟನೆ ಸಂಭವಿಸಿದೆ. ಆನೆಯನ್ನು ಸ್ನಾನ ಮಾಡಿಸಲು ಒಬ್ಬರಿಗೆ ರು.500 ಪಾವತಿ ಮಾಡಿಸಿಕೊಳ್ಳುತ್ತಾರೆ. ಆನೆಗಳು ಸಮೀಪ ಪ್ರವಾಸಿಗರು ನಿಂತುಕೊಂಡು ಸ್ನಾನವನ್ನು ಮಾಡಿಸುತ್ತಾರೆ. ಇದೀಗ ಹಣ ನೀಡಿ ಇದೀಗ ಪ್ರವಾಸಿ ಮಹಿಳೆಯೊಬ್ಬರು ಸಾವನ್ನಪ್ಪಿರುವುದು ದುಬಾರೆಗೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ.ಆನೆಯನ್ನು ಸ್ನಾನ ಮಾಡಿಸಲು ಹಣ ತೆಗೆದುಕೊಂಡ ಮೇಲೆ ಪ್ರವಾಸಿಗರಿಗೆ ಸುರಕ್ಷತೆ ಇರಬೇಕು. ಆದರೆ ಅಂತಹ ಯಾವುದೇ ಮುಂಜಾಗ್ರತಾ ಹಾಗೂ ಸುರಕ್ಷತಾ ಕ್ರಮಗಳು ಇಲ್ಲಿ ಇಲ್ಲ ಎಂಬುದು ಸತ್ಯ. ಯಾವುದೇ ರಕ್ಷಣೆ ಇಲ್ಲ. ಸ್ಥಳದಲ್ಲಿ ಗೈಡ್ ಗಳು ಕೂಡ ಇಲ್ಲ. ಇಂತಹ ಬೇಜಬ್ದಾರಿ ವಹಿಸಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹಲವರು ಆಗ್ರಹಿಸಿದ್ದಾರೆ. ಇಲಾಖೆ ವಿರುದ್ಧ ಆಕ್ರೋಶ: ದುಬಾರೆಯಲ್ಲಿ ಪ್ರವಾಸಿಗರಿಗೆ ಕನಿಷ್ಠ ಸುರಕ್ಷತೆಯೂ ಇಲ್ಲ ಎಂದು ಜೋಯೆಲ್ ದೂರಿದ್ದಾರೆ. ನನ್ನ ಪತ್ನಿ ಆನೆಗಳ ಕಾಳಗದ ನಡುವೆ ಸಿಲುಕಿ ಕೆಳಗೆ ಬಿದ್ದಾಗ ರಕ್ಷಿಸಲು ಯಾರೂ ಬರಲಿಲ್ಲ. ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಕೂಡ ಸಿಗಲಿಲ್ಲ. ಇಲಾಖೆಯ ಬೇಜವಾಬ್ದಾರಿಯೇ ನನ್ನ ಪತ್ನಿಯ ಸಾವಿಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆನೆ ಸ್ನಾನ ಮಾಡಿಸಲು ಹಣ, ಪೈಪೋಟಿ!: ದುಬಾರೆಯಲ್ಲಿ ಸಾಕಾನೆಗಳನ್ನು ಸ್ನಾನ ಮಾಡಿಸುವುದಕ್ಕೆ ಅರಣ್ಯ ಇಲಾಖೆಯಿಂದ ಒಬ್ಬರಿಗೆ ರು.500 ದರ ನಿಗದಿ ಮಾಡಲಾಗಿದೆ. ಆದರೆ ಇತ್ತೀಚೆಗೆ ಪ್ರವಾಸಿಗರು ಹೆಚ್ಚಾಗಿರುವ ಕಾರಣ ಆನೆಗಳನ್ನು ಸ್ನಾನ ಮಾಡಿಸಲು ಪೈಪೋಟಿ ಕಂಡುಬರುತ್ತಿದೆ. ಆನೆಗಳ ಸುತ್ತಲೂ ಅಪಾರ ಮಂದಿಯ ಪ್ರವಾಸಿಗರು ಯಾವುದೇ ಮುಂಜಾಗ್ರತೆ ಹಾಗೂ ಸುರಕ್ಷತೆ ಇಲ್ಲದೆ ನಿಲ್ಲುತ್ತಾರೆ. ಇದರಿಂದ ಇಂತಹ ದುರ್ಘಟನೆ ಸಂಭವಿಸಿದೆ.