ಮುಟ್ಟಿನ ಕಪ್ ಬಳಕೆಗೆ ಮುಜುಗರ ಬೇಡ: ತಾಪಂ ಇಒ ರಾಮಲಿಂಗಯ್ಯ

KannadaprabhaNewsNetwork |  
Published : Oct 20, 2025, 01:02 AM IST
15ಕೆಎಂಎನ್ ಡಿ18 | Kannada Prabha

ಸಾರಾಂಶ

ಮುಟ್ಟಿನ ಕಪ್ ಬಳಸುವ ಕುರಿತು ಅರಿವು ಪಡೆದುಕೊಳ್ಳುವುದು ಬಹಳ ಮುಖ್ಯ. ಈ ಬಗ್ಗೆ ಯಾವುದೇ ಪೂರ್ವಾಗ್ರಹ ಪೀಡಿತರಾಗದೇ ನಿಸ್ಸಂಕೋಚವಾಗಿ ಬಳಸಲು ಮುಂದಡಿ ಇಡಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ಮುಟ್ಟಿನ ಕಪ್ ಬಳಸುವುದರಲ್ಲಿ ಮಹಿಳೆಯರು ಮುಜುಗರ ಪಡಬಾರದು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಮಲಿಂಗಯ್ಯ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ತಾಪಂ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಮುಟ್ಟಿನ ಕಪ್ ಬಳಕೆ ಕುರಿತ ತರಬೇತಿ ಉದ್ಘಾಟಿಸಿ ಮಾತನಾಡಿದರು.

ಸಮಾಜ ಮುಂದುವರಿದಂತೆ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಬದಲಾವಣೆಗಳಾಗುತ್ತಿವೆ. ಈ ಹಿಂದೆ ಮುಟ್ಟಿನ ಸಂದರ್ಭದಲ್ಲಿ ಪ್ಯಾಡ್‌ಗಳನ್ನು ಉಪಯೋಗಿಸುತ್ತಾ ಹಣ, ಸಮಯ ಎರಡೂ ವ್ಯರ್ಥವಾಗುತ್ತಿತ್ತು. ಅಲ್ಲದೆ ಸ್ವಚ್ಛತೆ ಮತ್ತು ನೈರ್ಮಲ್ಯದ ಕೊರತೆಯೂ ಕಾಡುತ್ತಿತ್ತು. ಈ ದಿಸೆಯಲ್ಲಿ ಮುಟ್ಟಿನ ವಿಷಯದಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಆಗುತ್ತಿವೆ ಎಂದರು.

ಸಮಾಜದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಮಹಿಳೆಯರು ಮೊದಲು ಮುಟ್ಟಿನ ಕಪ್ ಬಳಸಿ ಇತರೆ ಮಹಿಳೆಯರಿಗೆ ಮಾದರಿವಾಗಬೇಕು. ಈಗಾಗಲೇ ತಾಲೂಕು ಪಂಚಾಯಿತಿಯಿಂದ 15ಕ್ಕೂ ಹೆಚ್ಚು ಗ್ರಾಪಂಗಳಲ್ಲಿ ಮುಟ್ಟಿನ ಕಪ್ ವಿತರಣೆ ಮಾಡಿದ್ದೇವೆ ಎಂದರು.

ಸಾಮಾಜಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಪ್ರಾಥಮಿಕ ಪ್ರೌಢಶಾಲಾ ಶಿಕ್ಷಕಿಯರು, ಪದವಿ ಕಾಲೇಜಿನ ವಿದ್ಯಾರ್ಥಿಗಳು, ವಿವಿಧ ಇಲಾಖೆಗಳ ಮಹಿಳಾ ಸಿಬ್ಬಂದಿ, ಸಂಜೀವಿನಿ ಕಾರ್ಯಕರ್ತೆಯರು ಸೇರಿದಂತೆ ವಿವಿಧ 4 ಸಾವಿರಕ್ಕೂ ಅಧಿಕ ಮುಂಚೂಣಿ ಕಾರ್ಯಕರ್ತೆಯರಿಗೆ ಮೊದಲ ಹಂತದಲ್ಲಿ ಉಚಿತವಾಗಿ ಮುಟ್ಟಿನ ಕಪ್ ವಿತರಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕೆ ವಿವಿಧ ಕಂಪನಿಗಳ ಸಿಎಸ್ಆರ್ ಅನುದಾನ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಆಶಾಲತಾ ಮಾತನಾಡಿ, ಮುಟ್ಟಿನ ಕಪ್ ಬಳಸುವ ಕುರಿತು ಅರಿವು ಪಡೆದುಕೊಳ್ಳುವುದು ಬಹಳ ಮುಖ್ಯ. ಈ ಬಗ್ಗೆ ಯಾವುದೇ ಪೂರ್ವಾಗ್ರಹ ಪೀಡಿತರಾಗದೇ ನಿಸ್ಸಂಕೋಚವಾಗಿ ಬಳಸಲು ಮುಂದಡಿ ಇಡಬೇಕು ಎಂದು ಸಲಹೆ ನೀಡಿದರು.

ತಾಲೂಕು ಸಾರ್ವಜನಿಕ ಆಸ್ಪತ್ರೆ ಗರ್ಭಿಣಿ ಮತ್ತು ಸ್ತ್ರೀ ರೋಗ ತಜ್ಞೆ ಡಾ.ಶೀಲಾ ಮುಟ್ಟಿನ ಕಪ್ ಬಳಕೆ ಕುರಿತು ತರಬೇತಿ ನೀಡಿದರು.

ತಾಲೂಕು ಯೋಜನಾಧಿಕಾರಿ ಸುರೇಶ್, ಆರೋಗ್ಯಾಧಿಕಾರಿ ಡಾ.ರವಿಶಂಕರ್, ಆರೋಗ್ಯ ಇಲಾಖೆ ಸಿಬ್ಬಂದಿ ಮರಿಸ್ವಾಮಿ, ತಮ್ಮೇಗೌಡ, ಮಣಿ, ಶೀಲಾ ಪಾಲ್ಗೊಂಡಿದ್ದರು.

PREV

Recommended Stories

ಖಾಸಗಿ ಸಂಘಟನೆಗಳಿಗೆ ನಿಷೇಧ ಹೇರಿದ್ದು ಜಗದೀಶ್‌ ಶೆಟ್ಟರ್‌ : ಪರಂ
ಕರ್ನಾಟಕಕ್ಕೆ ₹385 ಕೋಟಿ ಕೇಂದ್ರೀಯ ನೆರೆ ಪರಿಹಾರ