ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಮಹದೇಶ್ವರಪುರ ಗ್ರಾಮದ ಬಳಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಯಾವುದೇ ಕೊರತೆ ಇಲ್ಲ ಎಂದು ಶ್ರೀಮಹದೇಶ್ವರ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಎಸ್.ಜಗದೀಶ್ ತಿಳಿಸಿದರು.ವಸತಿ ಶಾಲೆಯ 250 ಮಂದಿ ವಿದ್ಯಾರ್ಥಿನಿಯರಿಗೆ ವಸತಿ ಸೌಲಭ್ಯ ಸೇರಿದಂತೆ ಮೂಲ ಸೌಕರ್ಯ ಒದಗಿಸಲಾಗಿದೆ. ಇತ್ತೀಚೆಗೆ ಶಾಸಕರು ಭೇಟಿ ನೀಡಿ ಪರಿಶೀಲಿಸಿದ ವೇಳೆ ಹೆಚ್ಚುವರಿಯಾಗಿ ಶೌಚಾಲಯ ಹಾಗೂ ಸ್ನಾನಗೃಹ ನಿರ್ಮಿಸಲು ಸೂಚಿಸಿದ್ದರ ಮೇರೆಗೆ ಹೆಚ್ಚುವರಿಯಾಗಿ 7 ಶೌಚಾಲಯ ಹಾಗೂ 7 ಸ್ನಾನದ ಗೃಹಗಳನ್ನು ನಿರ್ಮಿಸಲಾಗಿದೆ. ಜೊತೆಗೆ ಬಟ್ಟೆ ಬದಲಾವಣೆ ಮಾಡಲು ಕೊಠಡಿ ವ್ಯವಸ್ಥೆ ಮಾಡಿದ್ದು, ಶೀಘ್ರದಲ್ಲೇ ವಸತಿ ಶಾಲೆ ಸುತ್ತ ಕಾಂಪೌಂಡ್ ನಿರ್ಮಿಸಲಾಗುವುದು ಎಂದರು.
ಜಿಲ್ಲೆಯ ಖಾಸಗಿ ಕಟ್ಟಡಗಳ ಪೈಕಿ ಇಲ್ಲಿನ ವಸತಿ ಶಾಲೆಗೆ ಸುಸಜ್ಜಿತ ವ್ಯವಸ್ಥೆ ಇದೆ. ಶಾಲೆಯಲ್ಲಿ ಎಲ್ಲಾ ವರ್ಗದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಯಾವ ಮಕ್ಕಳು ಆತಂಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿಲ್ಲ. ಅಲ್ಲದೇ, ಯಾವ ಮಕ್ಕಳಿಗೂ ವಂಚನೆ ಮಾಡಿಲ್ಲ ಎಂದರು.ಪ್ರತಿ ವರ್ಷ ಶಾಲೆಗೆ ಉತ್ತಮ ಫಲಿತಾಂಶ ಬರುತ್ತಿದೆ. ಶಿಕ್ಷಕರು, ವಾರ್ಡನ್ ಹಾಗೂ ಪ್ರಾಂಶುಪಾಲರು ವಸತಿ ಶಾಲೆ ವಿದ್ಯಾರ್ಥಿನಿಯರನ್ನು ಉತ್ತಮವಾಗಿ ನೋಡಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಶಾಲೆಯಲ್ಲಿ ಕೊರತೆ ಎನ್ನುವ ವಿಚಾರ ಕೇವಲ ಊಹಾಪೋಹ ಎಂದರು.
ಪ್ರಭಾರ ಪ್ರಾಂಶುಪಾಲೆ ಪುಷ್ಪಲತಾ ಮಾತನಾಡಿ, ವಸತಿ ಶಾಲೆಯಲ್ಲಿ ಉತ್ತಮ ಬೋಧಕರಿದ್ದು, ಪ್ರತಿ ವರ್ಷ ಉತ್ತಮ ಫಲಿತಾಂಶ ಬರುತ್ತಿದೆ. ಹೊಸದಾಗಿ ಶೌಚಾಲಯ ಹಾಗೂ ಸ್ನಾನದ ಮನೆಗಳನ್ನೂ ನಿರ್ಮಿಸಿಕೊಡಲಾಗಿದೆ. ಡೈನಿಂಗ್ ಹಾಲ್, ಕಿಚನ್ ಹಾಗೂ ವಿದ್ಯಾರ್ಥಿನಿಯರಿಗೆ ಬಟ್ಟೆ ಬದಲಾವಣೆ ಮಾಡುವ ಕೊಠಡಿ ಇದೆ. ಖಾಸಗಿ ಕಟ್ಟಡದಲ್ಲಿ ಇಷ್ಟು ಸೌಲಭ್ಯ ಬೇರೆಲ್ಲೂ ಸಿಕ್ಕಿಲ್ಲ. ಶಾಲೆಗೆ 5 ಎಕರೆ ಜಮೀನು ಮಂಜೂರಾಗಿದೆ. ಕ್ರಿಯಾಯೋಜನೆ ನಡೆಸುತ್ತಿದ್ದು, ಶೀಘ್ರ ಟೆಂಡರ್ ಪ್ರಕ್ರಿಯೆ ಕೂಡ ನಡೆಯಲಿದೆ ಎಂದರು.