ಶಿರಸಿ: ಪ್ರಕೃತಿ ವಿಕೋಪದಿಂದ ಉಂಟಾದ ಹಾನಿಗೆ ಪರಿಹಾರ ನೀಡಲು ಹಣ ಲಭ್ಯವಿದ್ದು, ಸಂಪೂರ್ಣ ಮನೆ ಹಾನಿಯಾದರೆ ತಕ್ಷಣ ₹೧.೨೦ ಲಕ್ಷ ಹಾಗೂ ದೇವರಾಜು ಅರಸು ನಿಗಮದಿಂದ ಜಿಲ್ಲಾಧಿಕಾರಿ ಮೂಲಕ ಗ್ರಾಮೀಣ ಭಾಗಗಳಿಗೆ ₹೧.೫೦ ಲಕ್ಷ ಹಾಗೂ ನಗರ ಭಾಗಗಳಿಗೆ ₹೨.೨೫ ಲಕ್ಷ ನೂತನ ಮನೆ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತಿದೆ. ಭಾಗಶಃ ಹಾನಿಯಾದರೆ ₹೫೦ ಸಾವಿರ ಪರಿಹಾರ ನೀಡಲಾಗುತ್ತಿದೆ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.
ಅರಣ್ಯ ಪ್ರದೇಶದಲ್ಲಿ ಜಾನುವಾರುಗಳು ಮೇಯುವುದಕ್ಕೆ ಯಾರೂ ತೊಂದರೆ ನೀಡುವುದಿಲ್ಲ. ಶಿರಸಿ-ಹಾವೇರಿ, ಶಿರಸಿ-ಕುಮಟಾ, ಹುಬ್ಬಳ್ಳಿ-ಯಲ್ಲಾಪುರ ಹೆದ್ದಾರಿಯು ಕೇಂದ್ರ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಟ್ಟಿದ್ದು, ಭಟ್ಕಳದಿಂದ ಗೋವಾವರೆಗೆ ಹಾದುಹೋದ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ಜನಸಾಮಾನ್ಯರು ತೊಂದರೆಗೆ ಒಳಗಾಗಿದ್ದಾರೆ. ಹಲವಾರು ಸಭೆ ನಡೆಸಿ, ಎಚ್ಚರಿಕೆ ನೀಡಿ, ಅವರನ್ನು ಸರಿದಾರಿಗೆ ತರಲು ಪ್ರಯತ್ನಿಸಿದರೂ ಯಾರ ಮಾತು ಕೇಳುತ್ತಿಲ್ಲ. ರಾಜ್ಯ ಸರ್ಕಾರವು ರಾಜ್ಯ ಹೆದ್ದಾರಿ ನಿರ್ವಹಣೆಗೆ ಅನುದಾನ ನೀಡಿದೆ. ಮಳೆಗಾಲ ಮುಗಿದ ಬಳಿಕ ಅನುದಾನ ಮಂಜೂರಿಗೊಳಿಸಿ ಹೊಸ ರಸ್ತೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತದೆ ಎಂದರು.
ಬಿಜೆಪಿಯ ಕಾಲೇಳೆದ ಸಚಿವ:ಕೇಂದ್ರ ಸರ್ಕಾರದ ಸಾಗರಮಾಲಾ ಯೋಜನೆಯ ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ೨೦೨೨ರಲ್ಲಿ ಮುಕ್ತಾಯಗೊಳ್ಳಬೇಕಿತ್ತು. ೨೦೨೫ ಆದರೂ ಪೂರ್ಣಗೊಂಡಿಲ್ಲ. ಕೇಂದ್ರ ಸರ್ಕಾರದ ಯೋಜನೆಯಾದ್ದರಿಂದ ಯಾರು ಮಾತನಾಡಬೇಕಿತ್ತು, ಅವರು ಮಾತನಾಡುತ್ತಿಲ್ಲ. ಸೀಬರ್ಡ್ ನಿರಾಶ್ರಿತರ ಪರಿಹಾರದ ಚೆಕ್ ನೀಡುವ ವೇಳೆ ಪೊಟೋಕ್ಕೆ ಬರುತ್ತಾರೆ. ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕದ ಕುರಿತು ಬಿಜೆಪಿಯವರು ಹಾಗೂ ಸಂಸದರು ಉತ್ತರ ನೀಡಬೇಕು ಎಂದು ಬಿಜೆಪಿಗರ ವಿರುದ್ಧ ವಾಗ್ದಾಳಿ ನಡೆಸಿದರು.
ಸ್ವಲ್ಪ ದಿನದಲ್ಲಿ ಉತ್ತರಕನ್ನಡ ಸಾರಿಗೆ ವಿಭಾಗಕ್ಕೆ ೧೦೦ ಹೊಸ ಬಸ್ಸುಗಳು ಬರುತ್ತವೆ. ಚಾಲಕ-ನಿರ್ವಾಹಕರನ್ನು ಭರ್ತಿ ಮಾಡುತ್ತಿದ್ದೇವೆ. ೬೦೦ ಹೊಸ ಬಸ್ಸುಗಳಿಗೆ ಬೇಡಿಕೆ ಸಲ್ಲಿಸಿದ್ದೇವೆ. ಮುಂದಿನ ದಿನಗಳಲ್ಲಿ ಸಮಸ್ಯೆಗೆ ಪರಿಹಾರ ದೊರಕಿಸುತ್ತೇವೆ ಎಂದರು.ಶಿರಸಿ ಜಿಲ್ಲೆಯಾಗಬೇಕೆಂಬ ಕೂಗು ಕೇಳಿಬರುತ್ತಿದೆ ಎಂಬುದಕ್ಕೆ ಪ್ರತಿಕ್ರಿತಿಸಿದ ಅವರು, ಒತ್ತಡ ಹಾಗೂ ಅವಕಾಶ ಸಿಕ್ಕರೆ ಶಿರಸಿ ಜಿಲ್ಲೆಯಾದರೆ ನನ್ನ ಅಭ್ಯಂತವಿಲ್ಲ. ಒಂದೇ ಇರಬೇಕು ಅಥವಾ ಎರಡು ಮಾಡುವ ಉದ್ದೇಶ ನನ್ನದಲ್ಲ. ನಿಜವಾಗಿ ಆಗಬೇಕು. ಎಲ್ಲವನ್ನೂ ನೋಡಿಕೊಂಡು ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ, ಸ್ಕೊಡ್‌ವೆಸ್ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ವೆಂಕಟೇಶ ನಾಯ್ಕ ಇದ್ದರು.