ಬಿತ್ತನೆ ಬೀಜ, ರಸಗೊಬ್ಬರಕ್ಕೆ ಕೊರತೆ ಇಲ್ಲ: ಕೃಷಿ ಇಲಾಖೆ

KannadaprabhaNewsNetwork |  
Published : May 30, 2024, 01:00 AM ISTUpdated : May 30, 2024, 10:41 AM IST
paddy

ಸಾರಾಂಶ

ಅನಧಿಕೃತ ಲೂಸ್ ಬಿತ್ತನೆ ಬೀಜ, ಕಳಪೆ ರಸಗೊಬ್ಬರ ದಾಸ್ತಾನು, ಮಾರಾಟ ಕಂಡು ಬಂದಲ್ಲಿ ಮಾಹಿತಿ ನೀಡಲು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ರೈತರಿಗೆ ಮನವಿ ಮಾಡಿದ್ದಾರೆ.

 ದಾವಣಗೆರೆ :  ಮುಂಗಾರು ಹಂಗಾಮು ಮೇ ತಿಂಗಳಲ್ಲೇ ಚುರುಕಾಗಿದ್ದು, ಜಿಲ್ಲೆಗೆ ಅವಶ್ಯವಿರುವಷ್ಟು ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಲಭ್ಯವಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಹೇಳಿದ್ದಾರೆ.

ಜನವರಿಯಿಂದ ಮೇ 28ರವರೆಗೆ ಜಿಲ್ಲೆಯ ವಾಡಿಕೆ ಮಳೆ 96.6 ಮಿ.ಮೀ. ಇದ್ದು, 145 ಮಿ.ಮೀ. ಮಳೆಯಾಗಿದೆ. ವಾಡಿಕೆಗಿಂತ ಶೇ.50ರಷ್ಟು ಹೆಚ್ಚು ಮಳೆಯಾಗಿದ್ದು, ಭೂಮಿ ಸಿದ್ಧತೆಗೆ ಅನುಕೂಲವಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಮಗ್ರ ಬೆಳೆ ನಿರ್ವಹಣೆ ಜೊತೆಗೆ ಉತ್ತಮ ಇಳುವರಿ ಪಡೆಯುವಲ್ಲಿ ಗುಣಮಟ್ಟದ ಬಿತ್ತನೆ ಬೀಜಗಳು ಬಹು ಮುಖ್ಯವಾಗಿದೆ. ಬೆಳೆಯುವ ಸಿರಿ ಮೊಳೆಕೆಯಲ್ಲಿ ಎಂಬಂತೆ ಉತ್ತಮ ಬೆಳವಣಿಗೆ ಹಾಗೂ ಇಳುವರಿ ಪಡೆಯುವಲ್ಲಿ ಗುಣಮಟ್ಟದ ಬಿತ್ತನೆ ಬೀಜಗಳು ಅತ್ಯಮೂಲ್ಯವಾಗಿವೆ ಎಂದು ಅವರು ವಿವರಿಸಿದ್ದಾರೆ.

ಜಿಲ್ಲೆಯ ಪ್ರಮುಖ ಬೆಳೆಗಳಾದ ಮೆಕ್ಕೆಜೋಳ, ಬತ್ತ, ತೊಗರಿ, ರಾಗಿ, ಶೇಂಗಾ ಸೇರಿದಂತೆ ವಿವಿಧ ಬೆಳೆಗಳ ಒಟ್ಟು 49,869 ಕ್ವಿಂಟಾಲ್ ಬಿತ್ತನೆ ಬೀಜದ ಬೇಡಿಕೆ ಇದೆ. ಈವರೆಗೆ 54,052 ಕ್ವಿಂಟಾಲ್‌ ಬಿತ್ತನೆ ಬೀಜದ ದಾಸ್ತಾನನ್ನು ಕೃಷಿ ಇಲಾಖೆಯಿಂದ ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ನಿಗದಿಪಡಿಸಿದ ಸಹಕಾರಿ ಸಂಘಗಳ ಮೂಲಕ ರಿಯಾಯಿತಿ ದರದಲ್ಲಿ ವಿವಿಧ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿ, ವಿತರಣೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ವಿವಿಧ ಕೃಷಿ ಪರಿಕರ ಮಾರಾಟ ಮಳಿಗೆಗಳಲ್ಲಿ ದೃಢೀಕೃತ ಬಿತ್ತನೆ ಬೀಜಗಳು ಲಭ್ಯವಿದೆ. ರೈತರಿಗೆ ಯಾವುದೇ ಬಿತ್ತನೆ ಬೀಜಗಳ ಕೊರತೆಯಾಗುವುದಿಲ್ಲ. ರೈತರು ಲೂಸ್‌ (ಬಿಡಿ) ಬಿತ್ತನೆ ಬೀಜ ಮಾರಾಟದ ಜಾಲಕ್ಕೆ ಸಿಲುಕದೇ, ಬೀಜದಂತೆ ಬೆಳೆ-ನೂಲಿನಂತೆ ಸೀರೆ ಎಂಬ ಮಾತಿನಂತೆ ಗುಣಮಟ್ಟದ ದೃಢೀಕೃತ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಿಂದ / ಅಧಿಕ ರೈತ ಕೃಷಿ ಪರಿಕರ ಮಾರಾಟಗಾರರಿಂದ ಖರೀದಿಸಿ, ಬಿತ್ತನೆ ಮಾಡಲು ರೈತರಿಗೆ ಅವರು ಮನವಿ ಮಾಡಿದ್ದಾರೆ. 

1,53,683 ಮೆಟ್ರಿಕ್ ಟನ್‌ ಗೊಬ್ಬರ ಬೇಡಿಕೆ

ದಾವಣಗೆರೆ ಜಿಲ್ಲೆಗೆ ಮುಂಗಾರು ಹಂಗಾಮಿಗೆ ಒಟ್ಟು 153683 ಮೆಟ್ರಿಕ್‌ ಟನ್‌ನಷ್ಟು ವಿವಿಧ ರಸಗೊಬ್ಬರಗಳ ಬೇಡಿಕೆ ಇದ್ದು, ಜೂನ್ ತಿಂಗಳಿಗೆ 28,178 ಮೆಟ್ರಿಕ್ ಟನ್‌ನಷ್ಟು ರಸಗೊಬ್ಬರದ ಅವಶ್ಯಕತೆ ಇದೆ. ಜಿಲ್ಲೆಯಲ್ಲಿ ಕಾಪು ರಸಗೊಬ್ಬರ ಸೇರಿದಂತೆ ಅಗತ್ಯ ಪ್ರಮಾಣದ ರಸಗೊಬ್ಬರ ದಾಸ್ತಾನು ಲಭ್ಯವಿದ್ದು, ಜಿಲ್ಲೆಯಲ್ಲಿ ಯಾವುದೇ ರಸಗೊಬ್ಬರದ ಕೊರತೆ ಇಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಸ್ಪಷ್ಟಪಡಿಸಿದ್ದಾರೆ.

ಜಿಲ್ಲೆಯಲ್ಲಿ ಯಾವುದೇ ಅನಧಿಕೃತ ಲೂಸ್ ಬಿತ್ತನೆ ಬೀಜ ದಾಸ್ತಾನು ಹಾಗೂ ಕಳಪೆ ರಸಗೊಬ್ಬರ ಮಾರಾಟ ಮಾಡುವವರು ಕಂಡು ಬಂದಲ್ಲಿ ತಕ್ಷಣವೇ ಕೃಷಿ ಇಲಾಖೆ ಸಹಾಯಕ ನಿರ್ದೇಶಕರು (ಜಾರಿ ದಳ), ಮೊ-82779-31106, 82779-93120ಗೆ ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಅಥವಾ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಅವರು ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ