ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ಕಳೆದ ಚುನಾವಣೆಯಲ್ಲಿ ಪರಾಜಿತ ಬಿಜೆಪಿ ಅಭ್ಯರ್ಥಿ ಸಿ.ಮುನಿರಾಜು ಕಾಂಗ್ರೆಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ನರೇಂದ್ರ ಆರೋಪಿಸಿದರು.ಪಟ್ಟಣದ ಪತ್ರಕರ್ತರ ಭವನದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ವಿದೇಶದಲ್ಲಿ ಆಸ್ತಿ ಮತ್ತು ಖಾತೆ ಹೊಂದಿರುವುದಾಗಿ ಕಳೆದ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿ ಸಿ.ಮುನಿರಾಜು ಹೈಕೋರ್ಟ್‍ನಲ್ಲಿ ಧಾವೆ ಹೂಡಿದ್ದರು. ಇತ್ತೀಚಿಗೆ ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ರವರ ಮನೆ ಮೇಲೆ ಇಡಿ ದಾಳಿ ನಡೆದ ನಂತರ ಸುಳ್ಳು ದಾಖಲೆ ಸೃಷ್ಟಿಸಿರುವ ಸಂಶಯದ ಮೇಲೆ ಬಿಜೆಪಿ ಮುಖಂಡ ಸಿ.ಮುನಿರಾಜು ವಿರುದ್ಧ ಕೇಸು ದಾಖಲಿಸಲಾಗಿದೆಯೇ ಹೊರತು, ಇಡಿ ದಾಳಿಯಲ್ಲಿ ನಿಮ್ಮ ಕೈವಾಡವಿದೆ ಎಂದು ಶಾಸಕರು ಎಲ್ಲಿಯೂ ಹೇಳಿಲ್ಲ. ಅಲ್ಲದೆ ವಿದೇಶದಲ್ಲಿ ಆಸ್ತಿ ಮತ್ತು ಬ್ಯಾಂಕ್ ಖಾತೆ ಇರುವುದು ಸಾಬೀತುಪಡಿಸಿದರೆ ನನ್ನ ಎಲ್ಲಾ ಆಸ್ತಿಯನ್ನು ಸರ್ಕಾರಕ್ಕೆ ಬರೆದುಕೊಡುವುದಾಗಿ ಶಾಸಕರು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಸುಬ್ಬಾರೆಡ್ಡಿಯವರು ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಕ್ಷೇತ್ರದ ಜನತೆಯ ಜೊತೆ ಸದಾ ಒಡನಾಟ ಇಟ್ಟುಕೊಂಡಿರುವ ವ್ಯಕ್ತಿ. ಚುನಾವಣಾ ಸಂದರ್ಭದಲ್ಲಿ ಮಾತ್ರ ಅವರು ರಾಜಕಾರಣ ಮಾಡುತ್ತಾರೆಯೇ ಹೊರತು ನಿಮ್ಮಂತೆ ಕ್ಷೇತ್ರದ ಜನತೆ ಜೊತೆ ಚಲ್ಲಾಟವಾಡುವಂಥ ಅಭ್ಯಾಸ ಇಟ್ಟುಕೊಂಡಿಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ನಮ್ಮ ಶಾಸಕರು ನಿರಂತರವಾಗಿ ಶ್ರಮಿಸುತ್ತಿದ್ದಾರೆ, ಇದನ್ನು ಸಹಿಸದ ಬಿಜೆಪಿಯವರು ಸುಳ್ಳು ಆರೋಪಗಳನ್ನು, ಅಪಪ್ರಚಾರಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರಲ್ಲದೆ ಇದೇ ಚಾಳಿ ಮುಂದುವರಿದರೆ ಕಾಂಗ್ರೆಸ್ ಪಕ್ಷ ಕೈಕಟ್ಟಿ ಕುಳಿತುಕೊಳ್ಳಲ್ಲ, ಈ ಕ್ಷೇತ್ರದಲ್ಲಿ ನಿಮ್ಮನ್ನು ತಿರುಗಾಡಲು ಸಹ ಬಿಡಲ್ಲ ಎಂದು ಬಿಜೆಪಿ ಮುಖಂಡರಿಗೆ ಎಚ್ಚರಿಕೆ ನೀಡಿದರು.ಜಿಪಂ ಮಾಜಿ ಸದಸ್ಯ ಲಕ್ಷ್ಮೀನರಸಿಂಹಪ್ಪ ಮಾತನಾಡಿ, ಇಡಿ ದಾಳಿ ಎದುರಿಸಲು ಶಾಸಕರು ಸಿದ್ಧರಾಗಿದ್ದಾರೆ. ಆದರೆ ಇಲ್ಲಿ ಬಿಜೆಪಿ ಮುಖಂಡರು ಸುಳ್ಳು ದಾಖಲೆ ಸೃಷ್ಟಿಸಿ ಅಪಪ್ರಚಾರ ಮಾಡುವ ಮೂಲಕ ಶಾಸಕರ ತೇಜೋವಧೆ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿ, ನಿಮ್ಮ ಬಗ್ಗೆ ಕ್ಷೇತ್ರದ ಜನತೆಗೆ ಗೊತ್ತಿದೆ, ಇಲ್ಲಿ ನಿಮ್ಮ ಆಟ ನಡೆಯಲ್ಲ. ನಿಮ್ಮದು ನರಿ ಬುದ್ದಿ, ನೀವು ಈ ಕ್ಷೇತ್ರಕ್ಕೆ ಅನ್‍ಲಾಯಕ್, ನಮ್ಮ ಶಾಸಕರ ಬಗ್ಗೆ ಮಾತನಾಡುವಾಗ ನಾಲಿಗೆ ಹಿಡಿತ ಬಿಗಿಯಿರಲಿ ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಮುಖಂಡರಾದ ಪಿ.ಮಂಜುನಾಥರೆಡ್ಡಿ, ಬಿ.ವಿ.ವೆಂಕಟರಮಣ, ಗೂಳೂರು ರಮೇಶ್, ಎ.ವಿ.ಪೂಜಪ್ಪ, ಪುರಸಭೆ ಅಧ್ಯಕ್ಷ ಶ್ರೀನಿವಾಸ್, ಸದಸ್ಯರಾದ ಶ್ರೀನಿವಾಸರೆಡ್ಡಿ, ನಂಜುಂಡಪ್ಪ ಮತ್ತಿತರರು ಇದ್ದರು