ವಸತಿ ಶಾಲೆ ಮಕ್ಕಳಿಗಿಲ್ಲ ಸೋಪ್‌ ಕಿಟ್

KannadaprabhaNewsNetwork |  
Published : Apr 05, 2024, 01:01 AM IST
ಕೂಡ್ಲಿಗಿ ಪಟ್ಟಣದಲ್ಲಿರುವ ಕಾನಾಹೊಸಹಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ವಸತಿಶಾಲೆಯ ವಿದ್ಯಾರ್ಥಿಗಳು | Kannada Prabha

ಸಾರಾಂಶ

ರಾಜ್ಯದ ಎಲ್ಲ ವಸತಿ ಶಾಲೆಗಳಿಗೆ ಆಹಾರ ಪೂರೈಕೆ ಸೇರಿದಂತೆ ಆಡಳಿತ ಎಲ್ಲವನ್ನೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್) ಸಂಸ್ಥೆಯೇ ನೋಡಿಕೊಳ್ಳುತ್ತಿದೆ.

ಭೀಮಣ್ಣ ಗಜಾಪುರ

ಕೂಡ್ಲಿಗಿ: ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಡೆಯುವ 824 ವಸತಿ ಶಾಲೆಗಳಿಗೆ ಕಳೆದ ಆಗಸ್ಟ್‌ನಿಂದ ಇಲ್ಲಿ ವರೆಗೂ ಸೋಪ್‌ ಕಿಟ್‌ ನೀಡದೇ ಇರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ಇದರಿಂದ ಪಾಲಕರೇ ತಮ್ಮ ಖರ್ಚಿನಲ್ಲಿ ವಿದ್ಯಾರ್ಥಿಗಳಿಗೆ ಸಾಬೂನು, ಪೇಸ್ಟ್‌, ಎಣ್ಣೆ, ಬ್ರೆಷ್‌ ಮತ್ತಿತರ ಪರಿಕರಗಳನ್ನು ನೀಡಬೇಕಾದ ಅನಿವಾರ್ಯತೆ ಎದುರಾಗಿದೆ.

ರಾಜ್ಯದ ಎಲ್ಲ ವಸತಿ ಶಾಲೆಗಳಿಗೆ ಆಹಾರ ಪೂರೈಕೆ ಸೇರಿದಂತೆ ಆಡಳಿತ ಎಲ್ಲವನ್ನೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್) ಸಂಸ್ಥೆಯೇ ನೋಡಿಕೊಳ್ಳುತ್ತಿದೆ. ಕ್ರೈಸ್‌ ಸಂಸ್ಥೆ ಈ ಬಾರಿ ತಾಂತ್ರಿಕ ಕಾರಣ ಮುಂದಿಟ್ಟುಕೊಂಡು ರಾಜ್ಯದಲ್ಲಿರುವ 824ಕ್ಕೂ ಹೆಚ್ಚು ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಡಾ.ಅಂಬೇಡ್ಕರ್ ವಸತಿ ಶಾಲೆ ಸೇರಿದಂತೆ ಎಲ್ಲ ವಸತಿ ಶಾಲೆಗಳಲ್ಲಿ ಈ ವರ್ಷಪೂರ್ತಿ ಸೋಪ್ ಕಿಟ್ ನೀಡದೇ ಇದ್ದುದರಿಂದ ವಿದ್ಯಾರ್ಥಿಗಳ ದೈನಂದಿನ ಸ್ವಚ್ಛತಾ ಕಾರ್ಯಕ್ಕೆ ತೊಂದರೆಯಾಗಿದೆ. ಇಲ್ಲಿಯವರೆಗೂ ಪೋಷಕರೇ ತಮ್ಮ ಮಕ್ಕಳಿಗೆ ಸೋಪ್ ಕಿಟ್ ನೀಡುವ ಮೂಲಕ ತಮ್ಮ ಮಕ್ಕಳ ಆರೋಗ್ಯ ಕಾಪಾಡಿಕೊಂಡಿದ್ದಾರೆ.

ಏನಿದು ಸೋಪ್ ಕಿಟ್?:

ರಾಜ್ಯದ ಎಲ್ಲ ವಸತಿಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸೋಪು, ತಲೆಗೆ ಹಚ್ಚುವ ಎಣ್ಣೆ, ಹಲ್ಲುಜ್ಜುವ ಬ್ರಷ್, ಪೇಸ್ಟ್ ಸೇರಿದಂತೆ ಇನ್ನಿತರ ವಸ್ತುಗಳು ಇರುವ ಕಿಟ್ ನೀಡಲಾಗುತ್ತದೆ. ಆದರೆ ಈ ವರ್ಷಪೂರ್ತಿ ಸೋಪ್ ಕಿಟ್ ಬಾರದೇ ಇದ್ದುದರಿಂದ ವಿದ್ಯಾರ್ಥಿಗಳು ನೊಂದಿದ್ದಾರೆ.

ಇದು ರಾಜ್ಯಮಟ್ಟದಲ್ಲಿ ನಮ್ಮ ಕ್ರೈಸ್ ಸಂಸ್ಥೆಯಿಂದ ಟೆಂಡರ್ ಆಗಿ ಸೋಪ್ ಕಿಟ್ ಬರಬೇಕಿತ್ತು. ಆದರೆ ಈ ಕಳೆದ ಆಗಸ್ಟ್ ನಿಂದ ಇಲ್ಲಿಯವರೆಗೂ ಬಂದಿಲ್ಲ. ಹೀಗಾಗಿ ನಾವು ವಿದ್ಯಾರ್ಥಿಗಳಿಗೆ ಸೋಪ್ ಕಿಟ್ ವಿತರಿಸಿಲ್ಲ. ಪೋಷಕರೇ ತಮ್ಮ ಮಕ್ಕಳಿಗೆ ಸೋಪ್ ಕಿಟ್ ನೀಡುವ ಮೂಲಕ ವಿದ್ಯಾರ್ಥಿಗಳ ದೈನಂದಿನ ಶೌಚ ಕಾರ್ಯಕ್ಕೆ ನೆರವಾಗಿದ್ದಾರೆ ಎನ್ನುತ್ತಾರೆ ಕಾನಾಹೊಸಹಳ್ಳಿ ಡಾ.ಅಂಬೇಡ್ಕರ್ ವಸತಿಶಾಲೆ ಪ್ರಾಂಶುಪಾಲೆ ಶೋಭಾ.

ತಾಂತ್ರಿಕ ಕಾರಣದಿಂದ ರಾಜ್ಯಾದ್ಯಂತ ಈ ವರ್ಷದಲ್ಲಿ ಸೋಪ್ ಕಿಟ್ ನೀಡಿಲ್ಲ. ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಜಿಲ್ಲೆಯಲ್ಲಿ ಮಾತ್ರವಲ್ಲ, ರಾಜ್ಯದ ಯಾವ ವಸತಿ ಶಾಲೆಗಳಿಗೂ ಸೋಪ್ ಕಿಟ್ ಈ ಬಾರಿ ನೀಡಲು ಆಗಿಲ್ಲ ಎನ್ನುತ್ತಾರೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ.

ನಮ್ಮ ವಸತಿಶಾಲೆಯಲ್ಲಿ ಈ ವರ್ಷಪೂರ್ತಿ ಸೋಪ್ ಕಿಟ್ ನೀಡಿಲ್ಲ. ಮನೆಯವರಿಂದಲೇ ಎಲ್ಲ ವಸ್ತುಗಳನ್ನೂ ತಂದು ಬಳಸಿಕೊಂಡಿದ್ದೇವೆ ಎನ್ನುತ್ತಾರೆ ಕೂಡ್ಲಿಗಿಯ ಅಂಬೇಡ್ಕರ್ ವಸತಿ ಶಾಲಾ ವಿದ್ಯಾರ್ಥಿ ದಿವಾಕರ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!