ಬಳ್ಳಾರಿ ಬಿಸಿಲಿಗೆ ಬಸವಳಿದ ಚೆಕ್‌ಪೋಸ್ಟ್ ಸಿಬ್ಬಂದಿ

KannadaprabhaNewsNetwork |  
Published : Apr 05, 2024, 01:01 AM IST
ಬಳ್ಳಾರಿ ಹೊರ ವಲಯದ ಸಿರುಗುಪ್ಪ ರಸ್ತೆಯಲ್ಲಿ ನಿರ್ಮಿಸಿರುವ ಚೆಕ್‌ಪೋಸ್ಟ್‌.  | Kannada Prabha

ಸಾರಾಂಶ

ಚುನಾವಣೆ ವೇಳೆ ಯಾವುದೇ ಅಕ್ರಮ ನಡೆಯಬಾರದು ಎಂಬ ಉದ್ದೇಶದಿಂದ ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಅಂತರ ಜಿಲ್ಲಾ ಹಾಗೂ ರಾಜ್ಯಗಡಿ ಭಾಗಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ.

ಕೆ.ಎಂ.ಮಂಜುನಾಥ್

ಬಳ್ಳಾರಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆ ಹಾಗೂ ಗಡಿ ಭಾಗದಲ್ಲಿ ನಿರ್ಮಿಸಿರುವ ಚೆಕ್‌ಪೋಸ್ಟ್‌ ಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಉರಿಬಿಸಿಲಿಗೆ ಬಸವಳಿದಿದ್ದಾರೆ.

ಚುನಾವಣೆ ವೇಳೆ ಯಾವುದೇ ಅಕ್ರಮ ನಡೆಯಬಾರದು ಎಂಬ ಉದ್ದೇಶದಿಂದ ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಅಂತರ ಜಿಲ್ಲಾ ಹಾಗೂ ರಾಜ್ಯಗಡಿ ಭಾಗಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ.

ಈ ಪೈಕಿ ಅಂತರರಾಜ್ಯ ಗಡಿಭಾಗದಲ್ಲಿ 13 ಹಾಗೂ ಅಂತರ ಜಿಲ್ಲೆಯಲ್ಲಿ ಬಳ್ಳಾರಿ 24 ಮತ್ತು ವಿಜಯನಗರ ಜಿಲ್ಲೆಗಳಲ್ಲಿ 11 ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ಒಂದು ಚೆಕ್‌ಪೋಸ್ಟ್‌ನಲ್ಲಿ ನಾಲ್ವರು ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಆದರೆ, ಚೆಕ್‌ಪೋಸ್ಟ್‌ಗಳು ತಗಡಿನ ಶೆಡ್‌ಗಳಾಗಿದ್ದು ಇಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ತೀವ್ರ ಬಿಸಿಲಿನ ತಾಪದಿಂದ ಒದ್ದಾಡುವಂತಾಗಿದೆ.

ಬೆಳಿಗ್ಗೆ 11 ಗಂಟೆಯಿಂದಲೇ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಬಿಸಿಗಾಳಿಗೆ ಶೆಡ್‌ನಲ್ಲಿ ಕುಳಿತುಕೊಳ್ಳುವುದೇ ಕಷ್ಟವಾಗಿದೆ. ಜಿಲ್ಲಾಡಳಿತ ಫ್ಯಾನ್ ವ್ಯವಸ್ಥೆ ಮಾಡಿದೆಯಾದರೂ ಹೊರಗಡೆಯಿಂದ ಬಿಸಿಗಾಳಿ ಬೀಸುವುದರಿಂದ ಫ್ಯಾನ್ ಇದ್ದರೂ ಪ್ರಯೋಜನವಿಲ್ಲದಂತಾಗಿದೆ ಎಂದು ಸಿಬ್ಬಂದಿ ಅಳಲು ತೋಡಿಕೊಳ್ಳುತ್ತಾರೆ.

ಕೆಲಸದಲ್ಲಿ ನಿರುತ್ಸಾಹ:

ಅಂತರರಾಜ್ಯ ಹಾಗೂ ಅಂತರ ಜಿಲ್ಲಾ ಚೆಕ್‌ಪೋಸ್ಟ್‌ಗಳ ಪೈಕಿ ಕೆಲವು ಮರಗಳ ನೆರಳಿನಡಿ ನಿರ್ಮಿಸಲಾಗಿದೆ. ನೆರಳಿರುವ ಕಡೆ ಸಿಬ್ಬಂದಿ ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಾರೆ. ಆದರೆ, ನೆರಳೇ ಇಲ್ಲದ ಕಡೆ ನಿರ್ಮಿಸಲಾಗಿರುವ ತಗಡಿನ ಶೆಡ್‌ ನಲ್ಲಿ ಸಿಬ್ಬಂದಿ ಕೆಲಸ ಮಾಡಲು ಒದ್ದಾಡುತ್ತಿರುವುದು ಕಂಡು ಬರುತ್ತಿದೆ.

"ಚುನಾವಣೆ ಹಿನ್ನೆಲೆಯಲ್ಲಿ ಚೆಕ್‌ಪೋಸ್ಟ್‌ ನಲ್ಲಿ ಕಾರ್ಯ ನಿರ್ವಹಿಸುವುದು ಶಿಕ್ಷೆಯಾಗಿ ಪರಿಣಮಿಸಿದೆ. ಕೆಲಸದ ಉತ್ಸಾಹದಿಂದ ಬರುತ್ತೇವೆ. ಆದರೆ, ಬಿಸಿಲಿನ ಬೇಗೆಗೆ ತಡೆದುಕೊಳ್ಳಲಾಗುತ್ತಿಲ್ಲ. ಕೆಲಸದ ಉತ್ಸಾಹವೂ ಇಂಗಿ ಹೋಗುತ್ತದೆ. ನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಆದರೆ, ಎಲ್ಲವನ್ನೂ ಪರಿಶೀಲಿಸುವುದು ಕಷ್ಟವಾಗುತ್ತಿದೆ. ಬಿಸಿಲು ಹೆಚ್ಚಾಗಿರುವುದರಿಂದ ನಾಲ್ಕೈದು ನಿಮಿಷ ನಿಲ್ಲಲೂ ಆಗುತ್ತಿಲ್ಲ " ಎಂದು ಚೆಕ್‌ಪೋಸ್ಟ್‌ ಸಿಬ್ಬಂದಿ ಅಳಲು ತೋಡಿಕೊಳ್ಳುತ್ತಾರೆ.

ಏರ್ ಕೂಲರ್-ತಂಪು ನೀರು ಕೊಡಲಿ:

ಬಿಸಿಲಿನ ತೀವ್ರ ಉಷ್ಣಾಂಶದಲ್ಲಿ ಕೆಲಸ ಮಾಡುವುದು ಕಷ್ಟವಾಗುತ್ತಿದೆ. 8 ತಾಸುಗಳ ಕಾಲ ತಗಡಿನ ಶೆಡ್‌ನಲ್ಲಿ ಕೂಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿದೆ. ಚೆಕ್‌ಪೋಸ್ಟ್‌ ಸಿಬ್ಬಂದಿ ಸಮರ್ಪಕವಾಗಿ ಕೆಲಸ ಮಾಡಲು ಅವರಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಿ ಕೊಡಬೇಕು. ಫ್ಯಾನ್‌ ಕೊಟ್ಟಿದ್ದಾರೆ. ಆದರೆ, ಅದರ ಬಿಸಿ ಗಾಳಿಯಿಂದ ಕೂಡಲೂ ಸಾಧ್ಯವಾಗುತ್ತಿಲ್ಲ. ಎಲ್ಲ ಕಡೆ ಏರ್ ಕೂಲರ್ ಹಾಗೂ ತಂಪಾದ ಕುಡಿವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಚೆಕ್‌ಪೋಸ್ಟ್ ಸಿಬ್ಬಂದಿ ಮನವಿ ಮಾಡಿಕೊಳ್ಳುತ್ತಿದ್ದು, ಬಿಸಿಲಿನ ತಾಪ ದಿನದಿನಕ್ಕೆ ಏರಿಕೆಯಾಗುತ್ತಿದ್ದು, ಜಿಲ್ಲಾಡಳಿತ ಕೂಡಲೇ ಗಮನ ಹರಿಸಬೇಕು ಎನ್ನುತ್ತಾರೆ.

ಬೇಸಿಗೆ ಕಾಲದಲ್ಲಿ ಚುನಾವಣೆ ಬಂದಿರುವುದು ನಮಗೆ ನುಂಗದ ತುತ್ತಾಗಿದೆ. ತೀವ್ರ ಉಷ್ಣಾಂಶದಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಆತಂಕವಿದೆ. ಜಿಲ್ಲಾಡಳಿತ ಚೆಕ್‌ಪೋಸ್ಟ್‌ ಸಿಬ್ಬಂದಿ ಸಮಸ್ಯೆ ಅರಿತು, ಮುಂದಿನ ಕ್ರಮಕ್ಕೆ ಮುಂದಾಗಬೇಕು ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಬಳ್ಳಾರಿಯ ಚೆಕ್‌ಪೋಸ್ಟ್‌ ಸಿಬ್ಬಂದಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!