ಕನ್ನಡಪ್ರಭ ವಾರ್ತೆ ವಿಧಾನಸಭೆ
ಅನುದಾನ ರಹಿತ ಹಾಗೂ ಖಾಸಗಿ ಶಾಲೆಗಳಿಗೆ ನಾಡಗೀತೆ ಹಾಡುವುದರಿಂದ ವಿನಾಯಿತಿ ನೀಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊರಡಿಸಿದ್ದ ಆದೇಶ ಬುಧವಾರ ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಸಿತು.
ಇದರ ಬೆನ್ನಲ್ಲೇ ಅನುದಾನ ರಹಿತ ಹಾಗೂ ಖಾಸಗಿ ಶಾಲೆಗಳನ್ನೂ ಸೇರಿಸಿ ಎಲ್ಲಾ ಶಾಲೆಗಳಲ್ಲಿ ನಾಡಗೀತೆ ಹಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪರಿಷ್ಕೃತ ಆದೇಶ ಹೊರಡಿಸಿತಲ್ಲದೇ ಅಚಾತುರ್ಯದ ಆದೇಶ ಮಾಡಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ಹಿನ್ನೆಲೆಯಲ್ಲಿ ವಿವಾದಕ್ಕೆ ತೆರೆ ಬಿದ್ದಿತು.
ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಆರ್.ಅಶೋಕ್, ಫೆ.1ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಾತ್ರ ನಾಡಗೀತೆ ಹಾಡಬೇಕು ಎಂದು ಹೇಳಿದೆ.
ಹಾಗಾದರೆ ಖಾಸಗಿ ಶಾಲೆಗಳಲ್ಲಿ ನಾಡಗೀತೆ ಅಗತ್ಯವಿಲ್ಲವೇ? ಇದು ಕುವೆಂಪು ಅವರಿಗೆ ಮಾಡಿದ ಅವಮಾನ ಅಲ್ಲವೇ? ಇತ್ತೀಚೆಗಷ್ಟೇ ಶಾಲೆಗಳಲ್ಲಿ ಧಾರ್ಮಿಕ ಹಬ್ಬಗಳ ಆಚರಣೆಗೆ ನಿರ್ಬಂಧ ಹೇರಿ ಹಿಂಪಡೆಯಲಾಯಿತು.
ಜ್ಞಾನದೇಗುಲವಿದು ಕೈ ಮುಗಿದು ಒಳಗೆ ಬಾ ಎಂಬುದನ್ನು ಬದಲಿಸಿ ಮತ್ತೆ ಹಿಂಪಡೆಯಲಾಯಿತು. ಇದೀಗ ಮತ್ತೆ ಇಂತಹ ಹುಚ್ಚಾಟ ಮೆರೆದಿದ್ದಾರೆ. ತುಘಲಕ್ ದರ್ಬಾರ್ ನಡೆಯುತ್ತಿದೆ ಎಂದು ಟೀಕಿಸಿದರು.
ಪರಿಷ್ಕೃತ ಆದೇಶ-ತಂಗಡಗಿ: ಈ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ಶಿವರಾಜ್ ತಂಗಡಗಿ, ಎಲ್ಲ ಶಾಲೆಗಳಲ್ಲೂ ನಾಡಗೀತೆ ಕಡ್ಡಾಯವಾಗಿ ಹಾಡಬೇಕೆಂದು ಪರಿಷ್ಕೃತ ಆದೇಶ ಹೊರಡಿಸಲಾಗಿದೆ ಎಂದು ಅಶೋಕ್ ಅವರಿಗೆ ಪ್ರತಿ ಕಳುಹಿಸಿದರು.
ದಿವಂಗತ ಮೈಸೂರು ಅನಂತಸ್ವಾಮಿ ಧಾಟಿಯ ಬದಲಿಗೆ ಡಾ.ಸಿ.ಅಶ್ವತ್ಥ್ ಧಾಟಿಯಲ್ಲಿ ನಾಡಗೀತೆ ಹಾಡಬೇಕು ಎಂದು ಕಿಕ್ಕೇರಿ ಕೃಷ್ಣಮೂರ್ತಿ ಹೈಕೋರ್ಟ್ ಮೊರೆ ಹೋಗಿದ್ದರು.
ಈ ವೇಳೆ ಎಲ್ಲೆಲ್ಲಿ ನಾಡಗೀತೆ ಹಾಡುವುದು ಕಡ್ಡಾಯ, ಶಾಲೆಗಳು ಎಂದರೆ ಯಾವುವು? ಎಲ್ಲ ಶಾಲೆಗಳು ಎಂದರೆ ಅರ್ಥವೇನು ಎಂದು ಕೋರ್ಟ್ ಕೇಳಿತ್ತು. ಹೀಗಾಗಿ ಫೆ.1ರಂದು ಆದೇಶ ಹೊರಡಿಸಿ ಎಲ್ಲ ಸರ್ಕಾರಿ, ಅರೆಸರ್ಕಾರಿ, ನಿಗಮ-ಮಂಡಳಿ ಸೇರಿದಂತೆ ಕಚೇರಿಗಳು ಹಾಗೂ ಸರ್ಕಾರಿ, ಅನುದಾನಿತ ಶಾಲೆಗಳು ಎಂದು ತಿಳಿಸಲಾಗಿತ್ತು.
ಆದರೆ ಮುದ್ರಣ ಪ್ರಮಾದದಿಂದ ಅನುದಾನ ರಹಿತ ಹಾಗೂ ಖಾಸಗಿ ಶಾಲೆ ಎಂಬುದು ಬಿಟ್ಟುಹೋಗಿತ್ತು. ಈಗ ಈ ಎರಡು ಬಗೆಯ ಶಾಲೆಗಳನ್ನೂ ಸೇರಿಸಿ ಪರಿಷ್ಕೃತ ಆದೇಶ ಹೊರಡಿಸಲಾಗಿದೆ ಎಂದು ಹೇಳಿದರು.
ಇದಕ್ಕೆ ಆಕ್ಷೇಪಿಸಿದ ಅಶೋಕ್, ನಾನು ಹೇಳಿದ ಬಳಿಕ ಪರಿಷ್ಕೃತ ಆದೇಶ ಹೊರಡಿಸಿದ್ದೀರಿ. ಮುದ್ರಣ ಲೋಪ ಎಂದು ಸಮರ್ಥಿಸಿಕೊಳ್ಳುತ್ತಿದ್ದೀರಿ. ಅಧಿಕಾರಿಗಳ ಮೇಲೆ ನಿಮಗೆ ಲಂಗು ಲಗಾಮು ಇಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.
ಬಿಜೆಪಿಯ ಎಸ್.ಸುರೇಶ್ ಕುಮಾರ್, ಅಧಿಕಾರಿಗಳು ಸರ್ಕಾರದ ಮೇಲಿನ ಸಿಟ್ಟಿನಿಂದ ಹೀಗೆ ಮಾಡುತ್ತಿರಬಹುದು. ಸರ್ಕಾರಕ್ಕೆ ಕನ್ನಡದ ಬಗ್ಗೆ ಅಸಡ್ಡೆ ಎಂದು ಟೀಕಿಸಿದರು.
ಇದಕ್ಕೆ ಶಿವರಾಜ್ ತಂಗಡಗಿ, ನೀವು ಕನ್ನಡದ ಬಗ್ಗೆ ನನಗೆ ಹೇಳಬೇಡಿ. ಜನ, ಅಧಿಕಾರಿಗಳು ಎಲ್ಲರೂ ನಮ್ಮ ಪರ ಇದ್ದಾರೆ. ಹೀಗಾಗಿಯೇ ನಿಮಗೆ ಹೊಟ್ಟೆಯುರಿ ಎಂದು ತಿರುಗೇಟು ನೀಡಿದರು. ಈ ವೇಳೆ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು. ಆಗ ಸಚಿವ ಎಚ್.ಕೆ. ಪಾಟೀಲ್, ಅಚಾತುರ್ಯ ಮಾಡಿದವರ ಮೇಲೆ ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದೆಂಥ ಹುಚ್ಚಾಟ?
ಫೆ.1ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಾತ್ರ ನಾಡಗೀತೆ ಹಾಡಬೇಕು ಎಂದು ಹೇಳಿದೆ. ಹಾಗಾದರೆ ಖಾಸಗಿ ಶಾಲೆಗಳಲ್ಲಿ ನಾಡಗೀತೆ ಅಗತ್ಯವಿಲ್ಲವೇ? ಇದೆಂಥ ಹುಚ್ಚಾಟ? ತುಘಲಕ್ ದರ್ಬಾರ್ ನಡೆಸುತ್ತಿದ್ದೀರಾ?- ಆರ್.ಅಶೋಕ್, ಪ್ರತಿಪಕ್ಷದ ನಾಯಕ
ಈಗ ಸರಿಪಡಿಸಿದ್ದೇವೆ: ಎಲ್ಲೆಲ್ಲಿ ನಾಡಗೀತೆ ಹಾಡುವುದು ಕಡ್ಡಾಯ ಎಂದು ಹೈಕೋರ್ಟ್ ಕೇಳಿತ್ತು. ಎಲ್ಲ ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳು, ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯ ಎಂದು ಹೇಳಿದ್ದೆವು. ಅಚಾತುರ್ಯದಿಂದಾಗಿ ಅನುದಾನರಹಿತ, ಖಾಸಗಿ ಶಾಲೆಗಳು ಬಿಟ್ಟುಹೋಗಿದ್ದವು. ಅದನ್ನೀಗ ಸರಿಪಡಿಸಿದ್ದೇವೆ.- ಶಿವರಾಜ್ ತಂಗಡಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ