ಅಮ್ಯೂಸ್‌ಮೆಂಟ್‌ ಪಾರ್ಕ್‌, ಕಾವೇರಿ ಆರತಿ ಬೇಡವೇ ಬೇಡ: ವಿರೋಧ

KannadaprabhaNewsNetwork |  
Published : Jun 07, 2025, 12:25 AM IST
6ಕೆಎಂಎನ್‌ಡಿ-1ಮಂಡ್ಯದ ಜಿಪಂನ ಕಾವೇರಿ ಸಭಾಂಗಣದಲ್ಲಿ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ನೇತೃತ್ವದಲ್ಲಿ ಅಮ್ಯೂಸ್‌ಮೆಂಟ್‌ ಪಾರ್ಕ್‌ ಮತ್ತು ಕಾವೇರಿ ಆರತಿ ಯೋಜನೆಗಳ ಸಂಬಂಧ ರೈತ ಮುಖಂಡರೊಂದಿಗೆ ಸಭೆ ನಡೆಸಿದರು. | Kannada Prabha

ಸಾರಾಂಶ

ಕೆಆರ್‌ಎಸ್‌ ಕಟ್ಟಿದವರೂ ಎಂಜಿನಿಯರ್‌ಗಳೇ. ಇವತ್ತು ಅದಕ್ಕೆ ಅಪಾಯ ತಂದೊಡ್ಡುತ್ತಿರುವವರೂ ಎಂಜಿನಿಯರ್‌ಗಳೇ ಆಗಿದ್ದಾರೆ. ನಾಲ್ವಡಿ ಅವರು ಕೆಆರ್‌ಎಸ್‌ ಕಟ್ಟಿದ್ದು ಕೃಷಿಗೆ ನೀರೊದಗಿಸಬೇಕೆಂಬ ಉದ್ದೇಶದಿಂದಲೇ ಹೊರತು ಡಿಸ್ನಿಲ್ಯಾಂಡ್‌, ಅಮ್ಯೂಸ್‌ಮೆಂಟ್‌ ಪಾರ್ಕ್‌ ಹೆಸರಿನಲ್ಲಿ ಮೋಜು-ಮಸ್ತಿ ನಡೆಸಲು ಅಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಅಮ್ಯೂಸ್‌ ಮೆಂಟ್‌ ಪಾರ್ಕ್‌ ಮತ್ತು ಕಾವೇರಿ ಆರತಿ ಯೋಜನೆಗೆ ರೈತ ಸಂಘದ ವಿವಿಧ ಬಣಗಳ ಪ್ರತಿನಿಧಿಗಳು ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸಿದರು. ಯೋಜನೆ ಕುರಿತಂತೆ ಸರ್ಕಾರದ ವಿವರಣೆ ಕೇಳುವುದಕ್ಕೂ ಸಮ್ಮತಿಸದ ಮುಖಂಡರು ಎರಡೂ ಯೋಜನೆಗಳು ರೈತ ವಿರೋಧಿಯಾಗಿರುವುದರಿಂದ ನಮಗೆ ಬೇಡವೇ ಬೇಡ ಎಂದು ತಿರಸ್ಕರಿಸಿದರು.

ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಅಮ್ಯೂಸ್‌ಮೆಂಟ್‌ ಪಾರ್ಕ್‌ ಮತ್ತು ಕಾವೇರಿ ಆರತಿ ಸಂಬಂಧ ಕರೆದಿದ್ದ ರೈತ ಮುಖಂಡರ ಸಭೆಯಲ್ಲಿ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಯಿತು.

ಯೋಜನೆಗಳ ಕುರಿತಂತೆ ಉಪ ಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರ ಕೆ.ಜಯಪ್ರಕಾಶ್‌ ವಿವರಣೆ ನೀಡಲು ಬಂದಿದ್ದರಾದರೂ ಅದಕ್ಕೆ ಅವಕಾಶವನ್ನೇ ನೀಡದೆ ಅವರು ಏನನ್ನೂ ಹೇಳುವುದು ಬೇಡ. ಅವರು ಏನು ಹೇಳುತ್ತಾರೆಂಬುದು ನಮಗೆ ಗೊತ್ತಿದೆ. ಅವರಿಂದ ವಿವರಣೆ ಪಡೆಯುವ ಅಗತ್ಯವಿಲ್ಲವೆಂದು ಸಾರಾಸಗಟಾಗಿ ತಿರಸ್ಕರಿಸಿದರು. ಈ ಬೆಳವಣಿಗೆ ಉಪ ಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರರು, ಸಚಿವರು, ಶಾಸಕರು ಹಾಗೂ ಜಿಲ್ಲಾಡಳಿತಕ್ಕೆ ತೀವ್ರ ಮುಜುಗರವನ್ನು ಉಂಟುಮಾಡಿತು.

ಎಂಜಿನಿಯರ್‌ಗಳಿಂದಲೇ ಅಣೆಕಟ್ಟೆಗೆ ಅಪಾಯ:

ರೈತ ನಾಯಕಿ ಸುನಂದಾ ಜಯರಾಂ ಮಾತನಾಡಿ, ಇದು ಕೆಆರ್‌ಎಸ್‌ ಉಳಿವಿನ ವಿಷಯವಾಗಿರುವುದರಿಂದ ಎಲ್ಲಾ ಶಾಸಕರು ಸಭೆಯಲ್ಲಿರಬೇಕಿತ್ತು. ಕೇವಲ ಇಬ್ಬರು ಶಾಸಕರು ಮಾತ್ರ ಇದ್ದಾರೆ. ಕೆಆರ್‌ಎಸ್‌ ಕಟ್ಟಿದವರೂ ಎಂಜಿನಿಯರ್‌ಗಳೇ. ಇವತ್ತು ಅದಕ್ಕೆ ಅಪಾಯ ತಂದೊಡ್ಡುತ್ತಿರುವವರೂ ಎಂಜಿನಿಯರ್‌ಗಳೇ ಆಗಿದ್ದಾರೆ. ನಾಲ್ವಡಿ ಅವರು ಕೆಆರ್‌ಎಸ್‌ ಕಟ್ಟಿದ್ದು ಕೃಷಿಗೆ ನೀರೊದಗಿಸಬೇಕೆಂಬ ಉದ್ದೇಶದಿಂದಲೇ ಹೊರತು ಡಿಸ್ನಿಲ್ಯಾಂಡ್‌, ಅಮ್ಯೂಸ್‌ಮೆಂಟ್‌ ಪಾರ್ಕ್‌ ಹೆಸರಿನಲ್ಲಿ ಮೋಜು-ಮಸ್ತಿ ನಡೆಸಲು ಅಲ್ಲ. ಅಮ್ಯೂಸ್‌ಮೆಂಟ್‌ ಪಾರ್ಕ್‌ಗೆ 2663 ಕೋಟಿ ರು., ಕಾವೇರಿ ಆರತಿಗೆ 100 ಕೋಟಿ ರು. ಖರ್ಚು ಮಾಡುವ ಬದಲು ಕೆರೆಗಳನ್ನು ಅಭಿವೃದ್ಧಿಪಡಿಸಿ, ವಿತರಣಾ ನಾಲೆ, ಸೀಳು ನಾಲೆಗಳಲ್ಲಿರುವ ಹೂಳೆತ್ತಿಸಿ ಕೊನೆಯ ಭಾಗಕ್ಕೆ ನೀರು ತಲುಪುವಂತೆ ಮಾಡಿ ಎಂದರು.

ಯೋಜನೆ ಜಾರಿಗೆ ಅವಕಾಶ ಕೊಡೋಲ್ಲ:

ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್‌.ಕೆಂಪೂಗೌಡ ಮಾತನಾಡಿ, ನಾವು ಆರಂಭದಿಂದಲೂ ಯೋಜನೆಗಳನ್ನು ವಿರೋಧ ಮಾಡುತ್ತಲೇ ಬಂದಿದ್ದೇವೆ. ಆದರೆ, ಸರ್ಕಾರ ಯೋಜನೆಗಳ ಜಾರಿಗೆ ವಿಶೇಷ ಆಸಕ್ತಿ ತೋರುತ್ತಿದೆ. ಪರಿಸರ ವಿರೋಧಿ, ಕಾನೂನು ವಿರೋಧಿ, ರೈತ ವಿರೋಧಿ ಎಂದು ಹೇಳುತ್ತಲೇ ಇದ್ದರೂ ಆಡಳಿತ ನಡೆಸುವವರಿಗೆ, ಸರ್ಕಾರಗಳಿಗೆ ಅರ್ಥವಾಗುತ್ತಿಲ್ಲ. ಬಲವಂತವಾಗಿ ಯೋಜನೆ ಜಾರಿಗೆ ಮುಂದಾದರೆ ರೈತರ ಆಕ್ರೋಶ ಎದುರಿಸಬೇಕಾಗುತ್ತದೆ. ಸಭೆ ಕರೆದಿರುವ ಕ್ರಮವೇ ಸರಿ ಇಲ್ಲದಿರುವಾಗ ಸಭೆಯನ್ನು ಬರಖಾಸ್ತುಗೊಳಿಸುವುದೇ ಉತ್ತಮ ಎಂದರು.

ಕಾಯಿದೆಗಳಿಗೆ ವಿರುದ್ಧವಾದ ಯೋಜನೆ:

ಅಮ್ಯೂಸ್‌ಮೆಂಟ್‌ ಪಾರ್ಕ್‌, ಕಾವೇರಿ ಆರತಿ ಯೋಜನೆಗಳು ಪರಿಸರ ವಿರೋಧಿ, ಕಾನೂನು ವಿರೋಧಿ ಯೋಜನೆಗಳಾಗಿವೆ. ಸುಪ್ರೀಂ ಕೋರ್ಟ್‌ ಆದೇಶದಂತೆ ಅಣೆಕಟ್ಟೆಯಿಂದ 2 ಕಿ.ಮೀ. ದೂರದವರೆಗೆ ಯಾವುದೇ ಅಭಿವೃದ್ಧಿ ಚಟುವಟಿಕೆ ನಡೆಸುವಂತಿಲ್ಲ. ಹೈಕೋರ್ಟ್‌ ಆದೇಶದ ಪ್ರಕಾರ ಅಣೆಕಟ್ಟೆಯಿಂದ 20 ಕಿ.ಮೀ. ದೂರದವರೆಗೆ ಗಣಿ ಸೇರಿದಂತೆ ಯಾವುದೇ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಈ ಯೋಜನೆಗಳ ವ್ಯಾಪ್ತಿಯೊಳಗೆ ಅರಣ್ಯ, ದೇವರಾಜ ಪಕ್ಷಿಧಾಮ, ರಂಗನತಿಟ್ಟು ಪಕ್ಷಿಧಾಮ, ಜೀವವೈವಿಧ್ಯ ವಲಯ ಎಲ್ಲವೂ ಇದೆ. ಯೋಜನೆಗಳ ಜಾರಿಗೆ ಕೇಂದ್ರ ಪರಿಸರ ಇಲಾಖೆ ಅನುಮತಿ ಅಗತ್ಯವಿದೆ. ಈ ಎಲ್ಲಾ ಕಾನೂನುಗಳನ್ನು ಉಲ್ಲಂಘನೆ ಮಾಡಿ ಅಮ್ಯೂಸ್‌ಮೆಂಟ್‌ ಪಾರ್ಕ್‌ ಯೋಜನೆ ಜಾರಿಗೆ ಸರ್ಕಾರ ಮುಂದಾಗಿದೆ. ಕಾನೂನಿನ ಸಾಧಕ-ಬಾಧಕಗಳನ್ನು ಸರ್ಕಾರ ಗುರುತಿಸಿಲ್ಲ. 100 ಟಿಎಂಸಿ ನೀರು ಸಂಗ್ರಹಿಸುತ್ತಿದ್ದ ಕೆರೆಗಳು ಈಗ ಇಲ್ಲವಾಗಿವೆ. ಇಂತಹ ಕಾನೂನು ವಿರೋಧಿ ಯೋಜನೆಗಳಿಂದ ಸರ್ಕಾರ ದೂರ ಉಳಿಯುವಂತೆ ಸಾಮಾಜಿಕ ಹೋರಾಟಗಾರ ಕೆ.ಆರ್‌.ರವೀಂದ್ರ ತಿಳಿಸಿದರು.

ಕಾವೇರಿ ನದಿ ಮತ್ತಷ್ಟು ಕಲುಷಿತ:

ಕೆ.ಆರ್‌.ಪೇಟೆ ರೈತ ಮುಖಂಡ ಕೆ.ರಾಜೇಗೌಡ ಮಾತನಾಡಿ, ಅಮ್ಯೂಸ್‌ಮೆಂಟ್‌ ಪಾರ್ಕ್‌ ಯೋಜನೆ ಜಾರಿಯಿಂದ ಕೆಆರ್‌ಎಸ್‌ ನದಿ ಮತ್ತಷ್ಟು ಕಲುಷಿತಗೊಳ್ಳಲಿದೆ. ಪರಿಸರ ಮಾಲಿನ್ಯ ಮಂಡಳಿಯನ್ನು ಮುಚ್ಚುವುದೇ ಲೇಸು. ಅಲ್ಲಿರುವ ಅಧಿಕಾರಿಗಳು ನಿರುದ್ಯೋಗಿಗಳಾಗುವರೆಂಬ ಕಾರಣಕ್ಕೆ ಉಳಿಸಿಕೊಂಡಿದ್ದಾರೆ ಅನ್ನಿಸುತ್ತೆ. ನಮ್ಮ ಹಣವನ್ನು ಖರ್ಚು ಮಾಡಿ, ನಾವು ಭೂಮಿ ಕಳೆದುಕೊಂಡು ದೊಡ್ಡ ದೊಡ್ಡ ಕಂಪನಿಗಳಿಗೆ ಗುಲಾಮರಾಗಿ, ಸೇವಕರಾಗಿ, ಕಲುಷಿತ ನೀರು ಕುಡಿಯುವ ದೌರ್ಭಾಗ್ಯ ನಮ್ಮದಾಗಲಿದೆ. ಹಣ ಮಾಡುವುದೇ ಸರ್ಕಾರದ ಮೂಲ ಉದ್ದೇಶವಾಗದೆ ಗ್ರಾಮೀಣ ಜನರ ಆರೋಗ್ಯ ಕಾಪಾಡುವುದನ್ನು ಮುಖ್ಯ ಗುರಿಯಾಗಿಸಿಕೊಳ್ಳಬೇಕು ಎಂದರು.

ರೈತರೇ ಬಲಿಪಶು:

ಕೆಆರ್‌ಎಸ್‌ ಮೂಲದ ರೈತ ಜಗದೀಶ್‌ ಮಾತನಾಡಿ, ನಮ್ಮ ವ್ಯಾಪ್ತಿಯಲ್ಲಿ ಭೂಮಿಯನ್ನು ಪರಿವರ್ತನೆ ಮಾಡುತ್ತಿಲ್ಲ. ಹಿಂದೊಮ್ಮೆ ಸೇತುವೆ ನಿರ್ಮಾಣಕ್ಕೆಂದು ನಮ್ಮ ಭೂಮಿಯನ್ನು ಕಸಿದುಕೊಂಡರು. ಸೇತುವೆ ನಿರ್ಮಾಣವಾದ ಮೇಲೆ 800 ಮೀಟರ್‌ ದೂರದ ಸೇತುವೆ ಮೇಲೆ ಸಂಚರಿಸುವುದಕ್ಕೆ 200 ರು. ನೀಡಬೇಕಿದೆ. ನಮ್ಮ ಭೂಮಿಯನ್ನು ಕಿತ್ತುಕೊಂಡು ನಮ್ಮಿಂದಲೇ ಹಣ ವಸೂಲಿ ಮಾಡುತ್ತಿದ್ದಾರೆ. ಅಮ್ಯೂಸ್‌ಮೆಂಟ್‌ ಪಾರ್ಕ್‌ ಯೋಜನೆಯಿಂದ ಬಲಿಪಶುಗಳಾಗುವುದು ರೈತರೇ ಎಂದು ಸಭೆಗೆ ತಿಳಿಸಿದರು.

ನಿಮ್ಮ ಕಣ್ಣಿಗೆ ಕಾಣಿಸುವುದಿಲ್ಲವೇ?:

ಜನಪ್ರತಿನಿಧಿಗಳಾದ ನಿಮ್ಮ ಕಣ್ಣಿಗೆ ಶಿಥಿಲಗೊಂಡ ಸರ್ಕಾರಿ ಶಾಲೆಗಳು, ಕೆರೆಗಳ ದುರವಸ್ಥೆ, ನಾಲೆಗಳ ಅವ್ಯವಸ್ಥೆ ಇದ್ಯಾವುದೂ ಕಾಣಿಸುವುದಿಲ್ಲವೇ. ಅವುಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಒಲವು ತೋರುತ್ತಿಲ್ಲವೇಕೆ. ಇವೆಲ್ಲಕ್ಕಿಂತಲೂ ಅಮ್ಯೂಸ್‌ಮೆಂಟ್‌ ಪಾರ್ಕ್‌, ಕಾವೇರಿ ಆರತಿಯೇ ಮುಖ್ಯವೇ ಎಂದು ರೈತ ಸಂತೋಷ್‌ ಪ್ರಶ್ನಿಸಿದರು.

ಎಲ್ಲವನ್ನೂ ವಿರೋಧಿಸಿಲ್ಲ:

ರೈತ ಮುಖಂಡ ಅಣ್ಣಯ್ಯ ಮಾತನಾಡಿ, ನೀವು ಕೃಷಿ ವಿವಿಯನ್ನು ತಂದಿದ್ದೀರಿ ಒಪ್ಪಿಕೊಂಡಿದ್ದೇವೆ. ಮೈಷುಗರ್‌ಗೆ 50 ಕೋಟಿ ಕೊಡಿಸಿದ್ದೀರಿ ಅದನ್ನೂ ಸ್ವಾಗತಿಸಿದ್ದೇವೆ. ಆದರೆ, ಮೋಜು-ಮಸ್ತಿ ನಡೆಸುವ ಅಮ್ಯೂಸ್‌ಮೆಂಟ್‌ ಪಾರ್ಕ್‌ ಯೋಜನೆಗೆ ಮಾತ್ರ ನಮ್ಮ ಒಪ್ಪಿಗೆ ಇಲ್ಲ. ಕಾವೇರಿ ಆರತಿಗೂ ನಮ್ಮ ವಿರೋಧವಿದೆ. ರೈತಪರವಾದ ಯೋಜನೆಗಳಿಗೆ ನಮ್ಮ ಬೆಂಬಲ ಸದಾ ಇರುತ್ತದೆ. ರೈತರಿಗೆ ಮಾರಕವಾಗುವುದು ಯಾವುದೇ ಯೋಜನೆ ಇದ್ದರೂ ಅದಕ್ಕೆ ನಾವೆಂದಿಗೂ ಅವಕಾಶ ನೀಡೋಲ್ಲ ಎಂದು ಖಡಕ್ಕಾಗಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ