ಪುಟ್ಟಣ್ಣ ಕಣಗಾಲ್‌ ವಾದ್ಯ ಮಂಟಪ ಬಳಿಯೇ ಶೌಚಾಲಯ ಬೇಡ

KannadaprabhaNewsNetwork |  
Published : May 23, 2025, 12:02 AM IST
22ಕೆಡಿವಿಜಿ1-ದಾವಣಗೆರೆ ಪಾಲಿಕೆ ಆಯುಕ್ತರಿಗೆ ಕನ್ನಡ ಪರ ಹಿರಿಯ ಹೋರಾಟಗಾರ ನಾಗೇಂದ್ರ ಬಂಡೀಕರ್ ನೇತೃತ್ವದಲ್ಲಿ ಮನವಿ ಅರ್ಪಿಸಲಾಯಿತು. | Kannada Prabha

ಸಾರಾಂಶ

ಭಾವಕಲಾ ಶಿಲ್ಪಿ ದಿವಂಗತ ಪುಟ್ಟಣ್ಣ ಕಣಗಾಲ್ ಸ್ಮರಣಾರ್ಥ ಪಾಲಿಕೆ ಆವರಣದಲ್ಲಿ ದಶಕಗಳ ಹಿಂದೆ ಸ್ಥಾಪಿಸಿದ್ದ ಪುಟ್ಟಣ್ಣ ಕಣಗಾಲ್ ವಾದ್ಯ ಮಂಟಪದ ಬಳಿಯೇ ಸಾರ್ವಜನಿಕ ಶೌಚಾಲಯ ನಿರ್ಮಿಸುತ್ತಿದ್ದಾರೆ. ಕೂಡಲೇ ಈ ಕ್ರಮ ಕೈ ಬಿಡುವಂತೆ ಕನ್ನಡಪರ ಹಿರಿಯ ಹೋರಾಟಗಾರ ನಾಗೇಂದ್ರ ಬಂಡೀಕರ್ ನೇತೃತ್ವದಲ್ಲಿ ಕನ್ನಡಪರ ಸಂಘ- ಸಂಸ್ಥೆಗಳು, ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿ, ಒತ್ತಾಯಿಸಿದ್ದಾರೆ.

- ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿ ಕನ್ನಡಪರ ಸಂಘಟನೆಗಳ ಒತ್ತಾಯ । ಮೇರು ನಿರ್ದೇಶಕನ ಹೆಸರಿಗೆ ಚ್ಯುತಿ ತರದಿರಿ: ನಾಗೇಂದ್ರ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಭಾವಕಲಾ ಶಿಲ್ಪಿ ದಿವಂಗತ ಪುಟ್ಟಣ್ಣ ಕಣಗಾಲ್ ಸ್ಮರಣಾರ್ಥ ಪಾಲಿಕೆ ಆವರಣದಲ್ಲಿ ದಶಕಗಳ ಹಿಂದೆ ಸ್ಥಾಪಿಸಿದ್ದ ಪುಟ್ಟಣ್ಣ ಕಣಗಾಲ್ ವಾದ್ಯ ಮಂಟಪದ ಬಳಿಯೇ ಸಾರ್ವಜನಿಕ ಶೌಚಾಲಯ ನಿರ್ಮಿಸುತ್ತಿದ್ದಾರೆ. ಕೂಡಲೇ ಈ ಕ್ರಮ ಕೈ ಬಿಡುವಂತೆ ಕನ್ನಡಪರ ಹಿರಿಯ ಹೋರಾಟಗಾರ ನಾಗೇಂದ್ರ ಬಂಡೀಕರ್ ನೇತೃತ್ವದಲ್ಲಿ ಕನ್ನಡಪರ ಸಂಘ- ಸಂಸ್ಥೆಗಳು, ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿ, ಒತ್ತಾಯಿಸಿದರು.

ನಾಗೇಂದ್ರ ಬಂಡೀಕರ್ ಮಾತನಾಡಿ, ದಾವಣಗೆರೆಗೆ ಅದರದ್ದೇ ಆದ ವೈಶಿಷ್ಟ್ಯಪೂರ್ಣ ಐತಿಹ್ಯವಿದೆ. ಕನ್ನಡ ಸಾಹಿತಿಗಳ ಕಾದಂಬರಿಗಳನ್ನೇ ಬಳಸಿ, ಅತ್ಯುದ್ಭುತ ಚಿತ್ರಗಳನ್ನು ಚಿತ್ರರಂಗಕ್ಕೆ ನೀಡಿದ ಕೀರ್ತಿ ಪುಟ್ಟಣ್ಣ ಅವರಿಗಿದೆ. ಹೀಗಿರುವಾಗ ಪುಟ್ಟಣ್ಣ ಕಣಗಾಲ್ ವಾದ್ಯಮಂಟಪ ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಾದ್ಯ ಮಂಟಪ ಅವಗಣನೆಗೆ ಒಳಗಾಗಿದೆ ಎಂದು ದೂರಿದರು.

ಪುರಸಭೆ ಇದ್ದಾಗ, ನಗರಸಭೆಯಾದಾಗಲೂ ಇಲ್ಲಿನ ಕಲೆ, ಸಂಸ್ಕೃತಿ, ಸಾಹಿತ್ಯವನ್ನು ಜನಪ್ರತಿನಿಧಿಗಳು, ಆಡಳಿತಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಮುಂದುವರಿಸಿಕೊಂಡು ಬರಲಾಗಿದೆ. ಪಾಲಿಕೆ ಆಡಳಿತ ಜಾರಿಯಾದ ನಂತರವೂ ಇಂತಹದ್ದೊಂದು ಕಲಾ ಸೇವೆ, ಪ್ರೋತ್ಸಾಹ ಮುಂದುವರಿದೇ ಇದೆ. ಇಷ್ಟೆಲ್ಲ ಹಿನ್ನೆಲೆ ಇದ್ದರೂ, ಪುಟ್ಟಣ್ಣ ಸ್ಮರಣಾರ್ಥ ವಾದ್ಯ ಮಂಟಪದ ಸಮೀಪದಲ್ಲಿಯೇ ಪಾಲಿಕೆ ಸಾರ್ವಜನಿಕ ಶೌಚಾಲಯ ಕಟ್ಟಿಸಲು ಹೊರಟಿದೆ. ಪಾಲಿಕೆ ಪುಟ್ಟಣ್ಣರ ಸೇವೆ ತಾತ್ಸಾರದಿಂದ ಕಂಡಿರುವುದೇಕೆ ಎಂದು ಪ್ರಶ್ನಿಸಿದರು.

ಮನರಂಜನಾ ಕಾರ್ಯಕ್ರಮಗಳೇ ಇಲ್ಲ:

ಕಲಾವಿದರು, ಕಲಾ ತಂಡಗಳಿಗೆ ಪ್ರೋತ್ಸಾಹಿಸುವ ಸದುದ್ದೇಶದಿಂದ ಸ್ಥಾಪಿತ ವಾದ್ಯ ಮಂಟಪವಿದು. ಆದರೆ, ಇಂದು ಯಾವುದೇ ಕಾರ್ಯಕ್ರಮಗಳಿಲ್ಲದೇ ಯೋಜನೆ ಉದ್ದೇಶವೇ ನನೆಗುದಿಗೆ ಬಿದ್ದಿದೆ. ಸ್ವಯಂಘೋಷಿತ ಆಸ್ತಿ ತೆರಿಗೆ ಅರ್ಜಿ ಬರೆಯುವವರಿಗೆ, ಸಾರ್ವಜನಿಕರು, ಹಿರಿಯ ನಾಗರೀಕರು, ವಿಶೇಷಚೇತನರಿಗೆ ಬಿಸಿಲು, ಮಳೆಯಿಂದ ರಕ್ಷಣೆಗೆ ಒಂದು ತಾಣದಂತೆ ಬಳಕೆಯಾಗುತ್ತಿದೆ. ನನ್ನನ್ನೂ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳು ಬಜೆಟ್ ಪೂರ್ವಭಾವಿ ಸಭೆಗಳಲ್ಲಿ ಇದೇ ವಾದ್ಯ ಮಂಟಪಕ್ಕೆ ಕಾಯಕಲ್ಪ ನೀಡಿ, ಮನರಂಜನಾ ಕಾರ್ಯಕ್ರಮ ನಡೆಸುವಂತೆ ನಿರಂತರ ಒತ್ತಾಯ ಮಾಡುತ್ತಿದ್ದೇವೆ. ಆದರೆ, ಪಾಲಿಕೆ ಆಡಳಿತ ಮಾತ್ರ ಇದುವರೆಗೂಕಿವಿಗೊಟ್ಟಿಲ್ಲ ಎಂದು ಟೀಕಿಸಿದರು.

ಆಯುಕ್ತರಿಂದ ದುಸ್ಸಾಹಸ ಬೇಡ:

ಪಾಲಿಕೆ ಆವರಣದ ಗ್ಯಾರೇಜ್‌ಗೆ ಹೊಂದಿಕೊಂಡಂತೆ ಪುರುಷ- ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯವಿದೆ. ಅದೇ ರೀತಿ ಜನತಾ ಬಜಾರ್‌ಗೆ ಹೊಂದಿಕೊಂಡಂತೆ ಹೊಸದಾಗಿ ನಿರ್ಮಿಸಿರುವ ಶೌಚಾಲಯವಿದೆ. ಹೀಗಿದ್ದರೂ ಪಾಲಿಕೆಯಲ್ಲಿ ಮತ್ತೊಂದು ಶೌಚಾಲಯ ಏಕೆ, ಪುಟ್ಟಣ್ಣ ಕಣಗಾಲ್‌ ಅವರನ್ನು ಅವಮಾನಿಸುವ ಕೆಲಸ ಪಾಲಿಕೆ ಅಧಿಕಾರಿಗಳು ಮಾಡುತ್ತಿರುವಂತಿದೆ. ಪಾಲಿಕೆ ಆಯುಕ್ತರು ಯಾವುದೇ ಕಾರಣಕ್ಕೂ ಪುಟ್ಟಣ್ಣ ಕಣಗಾಲ್ ವಾದ್ಯ ಮಂಟಪದ ಬಳಿ ಸಾರ್ವಜನಿಕ ಶೌಚಾಲಯ ನಿರ್ಮಿಸುವ ದುಸ್ಸಾಹಸ ಮಾಡಬಾರದು ಎಂದು ಮುಖಂಡರು ತಾಕೀತು ಮಾಡಿದರು.

ಈ ಸಂದರ್ಭ ಕರ್ನಾಟಕ ಜನಮನ ವೇದಿಕೆ ಉಪಾಧ್ಯಕ್ಷ ಬಿ.ಎಸ್. ಪ್ರವೀಣ ಪದ್, ಕನ್ನಡನಾಡು ಸಮರಸೇನೆ ಟಿ. ಅಜ್ಜೇಶ, ಜಿಲ್ಲಾ ವಾದ್ಯ ವೃಂದ ಕಲಾವಿದರ ಸಂಘದ ಕಾರ್ಯದರ್ಶಿ ಧರ್ಮರಾಜ, ಅಖಂಡ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಾಧ್ಯಕ್ಷ ಎಸ್.ಜಿ. ಸೋಮಶೇಖರ, ನಮ್ಮ ಜೈ ಕರುನಾಡ ವೇದಿಕೆ ಕಾರ್ಯದರ್ಶಿ ಆಲ್ಬರ್ಟ್ ಆಂಟೋನಿ, ಆರ್‌ಟಿಐ ಕಾರ್ಯಕರ್ತರ ಸಂಘದ ಜಿಲ್ಲಾಧ್ಯಕ್ಷ ಎಸ್‌.ಮೋಹನ, ಕನ್ನಡಪರ ಹೋರಾಟಗಾರರಾದ ವಿ.ಕೆ.ಶಾಸ್ತ್ರಿ, ಎಲ್.ದೇವರಾಜ ಸ್ವಾಮಿ ಇತರರು ಇದ್ದರು.

- - -

-22ಕೆಡಿವಿಜಿ1.ಜೆಪಿಜಿ:

ಪಾಲಿಕೆ ಆವರಣದ ಪುಟ್ಟಣ್ಣ ಕಣಗಾಲ್ ವಾದ್ಯ ಮಂಟಪ ಬಳಿಯೇ ಸಾರ್ವಜನಿಕ ಶೌಚಾಲಯ ನಿರ್ಮಾಣ ವಿರೋಧಿಸಿ, ದಾವಣಗೆರೆ ಪಾಲಿಕೆ ಆಯುಕ್ತರಿಗೆ ಕನ್ನಡಪರ ಹಿರಿಯ ಹೋರಾಟಗಾರ ನಾಗೇಂದ್ರ ಬಂಡೀಕರ್ ನೇತೃತ್ವದಲ್ಲಿ ಮನವಿ ಅರ್ಪಿಸಲಾಯಿತು.

PREV

Latest Stories

ಫೋನ್‌ಪೇ, ಗೂಗಲ್‌ ಪೇ ಬಳಸುವ ಇನ್ನಷ್ಟು ವರ್ತಕರಿಗೆ ನೋಟಿಸ್‌?
ಸಂಕಷ್ಟಗಳಿವೆ ಆದರೆ ಸೇವಾ ಸಂತೃಪ್ತಿ ನಮಗಿದೆ: ದಶರಥ ಸಾವೂರ
ರೈತರನ್ನು ಸ್ಮರಿಸುವ, ನೋವಿಗೆ ಸ್ಪಂದಿಸುವ ಕಾರ್ಯವಾಗಲಿ