ಕೊಪ್ಪಳ: ಕೇಂದ್ರ ಸರ್ಕಾರ ಹಾಗೂ ತುಂಗಭದ್ರಾ ಮಂಡಳಿಯ ನಿರ್ಧಾರದಂತೆ ಅಣೆಕಟ್ಟೆಯ 33 ಗೇಟ್ ಅಳವಡಿಕೆ ಹಿನ್ನೆಲೆ ಎರಡನೇ ಬೆಳೆಗೆ ನೀರಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಸರ್ಕಾರಕ್ಕೆ ರೈತರ ಹಿತ ಮುಖ್ಯ. ಜತೆಗೆ ಅಣೆಕಟ್ಟೆಯ ರಕ್ಷಣೆ ಕೂಡ ನಮ್ಮ ಕರ್ತವ್ಯ. ಈ ಹಿನ್ನೆಲೆಯಲ್ಲಿ ಕೊಪ್ಪಳ, ರಾಯಚೂರು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ಎಲ್ಲ ಪಕ್ಷದ ಶಾಸಕರು, ಪರಿಷತ್ ಸದಸ್ಯರು ಹಾಗೂ ರೈತ ಮುಖಂಡರ ಜತೆ ಸಭೆ ನಡೆಸಿ ಒಕ್ಕೊರಲಿನಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಡಿಸೆಂಬರ್ ಎರಡನೇ ವಾರದಿಂದ ಹೊಸ 33 ಗೇಟ್ ಅಳವಡಿಕೆ ಕಾರ್ಯ ನಡೆಯಲಿದ್ದು, ಜೂನ್ ಅಂತ್ಯಕ್ಕೆ ಈ ಕಾರ್ಯ ಪೂರ್ಣಗೊಳ್ಳಲಿದೆ. ಟೆಂಡರ್ ನಲ್ಲಿ ಅಹರ್ತೆ ಪಡೆದಿರುವ ಗುಜರಾತ್ ಮೂಲದ ಕಂಪನಿಗೆ ಕಾಮಗಾರಿ ನಡೆಸಲು ಕಾರ್ಯಾದೇಶ ನೀಡಲಾಗಿದೆ. ಇದರ ಜತೆಗೆ ಕೆಲ ಕಾಲುವೆಗಳ ದುರಸ್ತಿ ಹಾಗೂ ಇನ್ನಿತರ ಅಣೆಕಟ್ಟೆಯ ಸಂಪುರ್ಣ ಸಣ್ಣ ದುರಸ್ತಿ ಇದೇ ಸಂದರ್ಭದಲ್ಲಿ ಪೂರ್ಣಗೊಳಿಸಲಾಗುವುದು ಎಂದರು.ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ:
ನಿಂತ ಬೆಳೆಗಳಿಗೆ ಯಾವುದೇ ತೊಂದರೆಯಾಗದಂತೆ ಜ.10ರವರೆಗೆ ನೀರು ಹರಿಸಲಾಗುವುದು. ಅಲ್ಲದೆ, ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿಗಾಗಿ ಕೆರೆಕಟ್ಟೆ ತುಂಬಿಸುವುದು ಹಾಗೂ ಇತರೆ ಉಪಯೋಗಕ್ಕಾಗಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲಾಗುವುದು ಎಂದು ಹೇಳಿದರು.
ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಡಿ.1ರಿಂದ ಜ.10ರವರೆಗೆ 1300 ಕ್ಯೂಸೆಕ್ ನಂತೆ, ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಡಿ. 1ರಿಂದ ಜ.10ರವರೆಗೆ 750 ಕ್ಯೂಸೆಕ್ ನಂತೆ, ರಾಯ ಬಸವಣ್ಣ ಕಾಲುವೆಗೆ ಜ. 1ರಿಂದ ಮೇ 31ರವರೆಗೆ ಸರಾಸರಿ 250 ಕ್ಯೂಸೆಕ್, ಇನ್ನು ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಡಿ.1ರಿಂದ 25 ಕ್ಯೂಸೆಕ್ ನಂತೆ ಅಥವಾ ನೀರಿನ ಮಟ್ಟ 1585 ಅಡಿಗಳವರೆಗೆ ಇದರಲ್ಲಿ ಯಾವುದು ಮೊದಲು ಅದು ಅನ್ವಯಿಸುತ್ತದೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರ ಮತ್ತು ಬೋರ್ಡ್ ಅವರು ನೀಡಿದ ಸಲಹೆಯಂತೆ ಅಣೆಕಟ್ಟೆಯ ರಕ್ಷಣೆ ದೃಷ್ಟಿಯಿಂದ 80 ಟಿಎಂಸಿ ನೀರನ್ನು ಮಾತ್ರ ಸಂಗ್ರಹಿಸಲಾಗಿದೆ.
ಎರಡನೇ ಬೆಳೆಗೆ ರೈತರಿಗೆ ನೀರು ಕೊಡದಿದ್ದರೆ, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಾಜಿ ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದಾರಲ್ಲ ಎಂಬ ಪ್ರಶ್ನೆಗೆ, ಶ್ರೀರಾಮುಲು ಅವರು ನನ್ನ ಸಹೋದರರಿದ್ದಂತೆ. ಹಾಗಾಗಿ ನೀರಿಗೆ ಹಾರುವುದು ಬೇಡ ಎಂದು ಮಾರ್ಮಿಕವಾಗಿ ನುಡಿದರು.