ಮುನಿರಾಬಾದ್: ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಅಸ್ಪೃಶ್ಯತೆ ಪದ್ಧತಿ ಜಾರಿಯಲ್ಲಿಲ್ಲ. ಬದಲಾಗಿ ಶತಮಾನಗಳಿಂದ ಜಾತ್ಯತೀತ ಪದ್ಧತಿ ಆಚರಣೆಯಲ್ಲಿದೆ ಎಂದು ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಪಾಲಾಕ್ಷಪ್ಪ ಗುಂಗಾಡಿ ಸ್ಪಷ್ಟಪಡಿಸಿದ್ದಾರೆ.
ಹುಣ್ಣಿಮೆ ದಿನದಂದು ಹುಲಿಗೆಮ್ಮ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಭಕ್ತರ ಸುರಕ್ಷತೆ ಹಾಗೂ ಭದ್ರತೆಗೆ ಕೊಪ್ಪಳ ಜಿಲ್ಲಾಡಳಿತ ಹೆಚ್ಚಿನ ಕಾಳಜಿ ವಹಿಸಿದೆ. ದೇವಸ್ಥಾನದ ಆವರಣದಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದೆ. ಹುಣ್ಣಿಮೆ ದಿನದಂದು ಹುಲಿಗೆಮ್ಮ ದೇವಿಯ ದರ್ಶನಕ್ಕೆ ಅವಕಾಶವಿದ್ದು, ಉಳಿದ ದಿನಗಳಲ್ಲಿ ದೇವಸ್ಥಾನದ ಆವರಣದಲ್ಲಿರುವ ರಾಜ ಮಾತಂಗಿ ಹಾಗೂ ಪರಶುರಾಮ ದೇವರ ದರ್ಶನ ಪಡೆಯಬಹುದು ಎಂದು ಪಾಲಾಕ್ಷಪ್ಪ ಗುಂಗಾಡಿ ತಿಳಿಸಿದ್ದಾರೆ.
ಧಾರ್ಮಿಕ ಆಚರಣೆ ಮುಕ್ತ: ಹುಲಿಗೆಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಎಲ್ಲ ಧರ್ಮ ಹಾಗೂ ಜಾತಿಯವರು ಪಾಲ್ಗೊಳ್ಳುತ್ತಾರೆ. ಅಮ್ಮನವರ ತೇರನ್ನು ಪ್ರಥಮವಾಗಿ ಭೋವಿ ಸಮಾಜದವರು ಎಳೆಯುತ್ತಾರೆ. ಗಂಗಾಮತ ಸಮುದಾಯದವರು ಬಾಳೆ ದಂಡಿಗೆ ಉತ್ಸವ ನಡೆಸಿಕೊಡುತ್ತಾರೆ. ನಾಯಕ ಸಮುದಾಯದವರು ಪಾಯಸ ಹಾಗೂ ಅಗ್ನಿಕೊಂಡ ಉತ್ಸವ ನೆರವೇರಿಸುತ್ತಾರೆ. ಇಸ್ಲಾಂ ಧರ್ಮದವರು ಅಮ್ಮನವರ ಉತ್ಸವ ಮೂರ್ತಿಗೆ ಈಡುಕಾಯಿ ಒಡೆಯುವ ಸಂಪ್ರದಾಯವಿದೆ ಎಂದು ವಿವರಿಸಿದರು.ಗ್ರಾಮದ ಪೂರ್ವಿಕರು ಶತಮಾನಗಳ ಹಿಂದೆ ಜಾರಿಗೆ ತಂದ ಈ ಜಾತ್ಯತೀತ ಪದ್ಧತಿಯನ್ನು ಇಂದಿಗೂ ಮುಂದುವರಿಸಿಕೊಂಡು ಬರಲಾಗುತ್ತಿದೆ. ದೇವಸ್ಥಾನದಲ್ಲಿ ಅಸ್ಪೃಶ್ಯತೆ ಇದೆ ಎಂದು ಸುಳ್ಳು ಆರೋಪಗಳನ್ನು ಮಾಡುವುದು ಸರಿಯಲ್ಲ. ಇಂತಹ ಆರೋಪಗಳಿಂದ ದೇವಸ್ಥಾನದ ಘನತೆ ಹಾಗೂ ಗೌರವಕ್ಕೆ ಧಕ್ಕೆಯಾಗುತ್ತದೆ ಎಂದು ಪಾಲಾಕ್ಷಪ್ಪ ಗುಂಗಾಡಿ ಹೇಳಿದರು.
ಹುಲಿಗೆಮ್ಮ ದೇವಿ ದೇವಸ್ಥಾನದ ಆವರಣದಲ್ಲಿರುವ ಶ್ರೀ ಮಾತಂಗಿ ದೇವಿ ದೇವಸ್ಥಾನಕ್ಕೆ ಹುಣ್ಣಿಮೆ ದಿನ ಭಕ್ತರಿಗೆ ದರ್ಶನ ನಿರಾಕರಿಸುತ್ತಿರುವುದನ್ನು ಖಂಡಿಸಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಸಂಚಾಲಕ ಪ್ರಕಾಶ ಹೊಳೆಯಪ್ಪನವರ, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ರಾವ್ ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾತಂಗಿ ದೇವಿ ಮಾದಿಗ ಸಮುದಾಯದ ಕುಲದೇವತೆಯಾಗಿದ್ದು, ಹುಣ್ಣಿಮೆ ದಿನ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ದರ್ಶನಕ್ಕೆ ಆಗಮಿಸುತ್ತಾರೆ. ಆದರೆ, ದರ್ಶನಕ್ಕೆ ಅವಕಾಶ ನೀಡದ ಕಾರಣ ಭಕ್ತರು ನಿರಾಶೆಯಿಂದ ಹಿಂದಿರುಗುವಂತಾಗಿದೆ. ದೇವಸ್ಥಾನದ ವ್ಯಾಪ್ತಿಯಲ್ಲಿ ಮೂಲಸೌಕರ್ಯಗಳ ಕೊರತೆಯಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುವ ಬದಲು ದರ್ಶನಕ್ಕೆ ನಿರ್ಬಂಧ ವಿಧಿಸುತ್ತಿರುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಈ ಹಿಂದೆ ಧಾರ್ಮಿಕ ದತ್ತಿ ಇಲಾಖೆ ಸಚಿವರು ಹಾಗೂ ಜಿಲ್ಲಾಧಿಕಾರಿ ಗಮನಕ್ಕೆ ಈ ವಿಷಯವನ್ನು ತಂದಿದ್ದರೂ, ಸಮಸ್ಯೆ ಬಗೆಹರಿದಿಲ್ಲ. ಅಧಿಕಾರಿಯ ವಿರುದ್ಧ ಕ್ರಮ ಕೈಗೊಂಡು ಭಕ್ತರಿಗೆ ದರ್ಶನದ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.