ಕನ್ನಡಪ್ರಭ ವಾರ್ತೆ ತುರುವೇಕೆರೆ
ಗ್ರಾಮ ಪಂಚಾಯಿತಿ ಮಟ್ಟದ ಹಲವಾರು ಗ್ರಾಮಗಳಿಗೆ ನೀರನ್ನು ಸರಬರಾಜು ಮಾಡುವ ನೀರಗಂಟಿಗಳಿಗೆ ೧೦ ತಿಂಗಳ ಸಂಬಳ ನೀಡದ ಕಾರಣ ನೀರಗಂಟಿಗಳು ಧಿಡೀರನೇ ಮೌನ ಪ್ರತಿಭಟನೆಗೆ ಕೈಗೊಂಡಿದ್ದರಿಂದ ತಾಲೂಕಿನ ಸೊರವನಹಳ್ಳಿ ಗ್ರಾಪಂ ಹತ್ತಾರು ಹಳ್ಳಿಯ ಜನರಿಗೆ ನೀರಿಲ್ಲದಂತಾಗಿದೆ. ಸೊರವನಹಳ್ಳಿ ಗ್ರಾಪಂಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೀರಗಂಟಿಗಳಿಗೆ ಹತ್ತು ತಿಂಗಳ ಸಂಬಳ ಬಾಕಿ ಇದೆ. ನೀರಗಂಟಿಗಳು ಸಂಬಳಕ್ಕಾಗಿ ಹಲವಾರು ಬಾರಿ ಬೇಡಿಕೆ ಇಟ್ಟಿದ್ದರೂ ಸಹ ಕೆಲವು ಸದಸ್ಯರ ಆಕ್ಷೇಪಣೆಯಿಂದಾಗಿ ಸಂಬಳ ಆಗಿರಲಿಲ್ಲ. ನೀರಗಂಟಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಕಿರು ನೀರು ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುತ್ತಿಲ್ಲ. ಗ್ರಾಮಗಳಲ್ಲಿ ಸರಿಯಾಗಿ ನೀರು ಸರಬರಾಜು ಮಾಡುತ್ತಿಲ್ಲ ಎಂಬ ದೂರಿನ ಮೇರೆಗೆ ಸದಸ್ಯರುಗಳು ಸಂಬಳ ತಡೆಹಿಡಿಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು ಎಂದು ತಿಳಿದುಬಂದಿದೆ.ಆದರೆ ಈ ಹತ್ತು ತಿಂಗಳಲ್ಲಿ ಐದಾರು ತಿಂಗಳ ಸಂಬಳ ಹಳೆಯದ್ದಾಗಿದ್ದರೆ, ಮೂರ್‍ನಾಲ್ಕು ತಿಂಗಳು ಇತ್ತೀಚಿನದಾಗಿದೆ. ಸಂಬಳ ಕೊಡದೇ ಜೀವನ ನಿರ್ವಹಣೆ ಮಾಡುವುದು ಕಷ್ಟವಾಗುತ್ತಿದೆ ಎಂದು ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಸಂಬಳ ಮಾಡಿರಲಿಲ್ಲ. ಆದ್ದರಿಂದ ನೀರಗಂಟಿಗಳು ಗ್ರಾಪಂ ಆವರಣದಲ್ಲೇ ಮೌನ ಪ್ರತಿಭಟನೆಗೆ ಇಳಿದರು. ಇದರ ಪರಿಣಾಮ ಹತ್ತಾರು ಹಳ್ಳಿ ಜನರಿಗೆ ನೀರಿಲ್ಲದಂತಾಗಿದೆ. ಪ್ರತಿಭಟನೆಯ ಕಾವು ಹೆಚ್ಚುತ್ತಾ ಹೋದಂತೆ ಸ್ಥಳಕ್ಕೆ ಆಗಮಿಸಿದ ತಾಪಂ ಇಒ ಶಿವರಾಜಯ್ಯ ಸಿಬ್ಬಂದಿಗಳೊಂದಿಗೆ ಮಾತುಕತೆ ನಡೆಸಿ ಸದ್ಯಕ್ಕೆ ಮೂರು ತಿಂಗಳ ಸಂಬಳ ಮಂಜೂರು ಮಾಡಿಸಿದರು. ಅಲ್ಲದೇ ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಬೇಕು. ಕುಡಿಯುವ ನೀರಿನ ತೊಟ್ಟಿ. ಟ್ಯಾಂಕ್ ಸ್ವಚ್ಛಗೊಳಿಸಬೇಕು ಎಂದು ಸೂಚಿಸಿದರು. ಶಿವರಾಜಯ್ಯ ಭರವಸೆ ನೀಡಿದ ಬಳಿಕ ನೀರಗಂಟಿಗಳು ಮೌನ ಪ್ರತಿಭಟನೆ ಹಿಂಪಡೆದುಕೊಂಡರು. ಗ್ರಾಪಂ ಅಧ್ಯಕ್ಷೆ ಇಂದಿರಾ ಕೃಷ್ಣಸ್ವಾಮಿ ಮಾತನಾಡಿ, ಗ್ರಾಪಂಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಸಂಬಳ ತಡೆ ಹಿಡಿಯುವ ದುರುದ್ದೇಶವಿಲ್ಲ. ನಮ್ಮ ಅವಧಿಯಲ್ಲಿ ಯಾವುದೇ ಸಿಬ್ಬಂದಿಗಳಿಗೆ ಸಂಬಳ ಕೊಡದೇ ತೊಂದರೆ ಮಾಡುವುದಿಲ್ಲ. ಹಲವಾರು ಸದಸ್ಯರು ಕೆಲವು ನೀರಗಂಟಿಗಳ ಕರ್ತವ್ಯ ಲೋಪದ ಕುರಿತು ದೂರು ನೀಡಿದಾಗ ಸಂಬಳವನ್ನು ತಡೆ ಹಿಡಿಲಾಗಿತ್ತು. ಮುಂಬರುವ ದಿನಗಳಲ್ಲಿ ಸಿಬ್ಬಂದಿ ಸರಿಯಾಗಿ ಕರ್ತವ್ಯ ನಿರ್ವಹಿಸಿದರೆ ಸಂಬಳ ತಡೆ ಹಿಡಿಯುವ ಪ್ರಶ್ನೆಯೇ ಉದ್ಬವಿಸದು. ಪ್ರತಿಭಟನೆಗೆ ಮುನ್ಸೂಚನೆ ನೀಡದೇ ಏಕಾಏಕಿ ಗ್ರಾಪಂ ಆವರಣದಲ್ಲೇ ಪ್ರತಿಭಟನೆ ಹಮ್ಮಿಕೊಂಡ ಬಗ್ಗೆ ಪ್ರತಿಭಟನಾಕಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.