ಯಲ್ಲಾಪುರ: ತಾಲೂಕಿನಲ್ಲಿ ಕಳೆದ ವರ್ಷ ಸುರಿದ ಉತ್ತಮ ಮಳೆಯಿಂದಾಗಿ ಈವರೆಗೂ ನೀರಿನ ಕೊರತೆ ಎಲ್ಲಿಯೂ ಬಾಧಿಸಿಲ್ಲ. ಕುಡಿಯುವ ನೀರಿಗಾಗಿ ಜನರ ಹಾಹಾಕಾರ ಕಂಡಿಲ್ಲ.
ಕಳೆದ ವರ್ಷ ೩೦೨೦ ಮಿ.ಮೀ. ಮಳೆಯಾಗಿದ್ದು, ವಾಡಿಕೆಗಿಂತ ಸುಮಾರು ೪೦೦ ಮಿ.ಮೀ. ಮಳೆ ಹೆಚ್ಚಾಗಿದೆ. ಈ ಕಾರಣದಿಂದಾಗಿ ಅಂತರ್ಜಲ ಮಟ್ಟ ಸಾಕಷ್ಟು ಉತ್ತಮವಾಗಿದ್ದು, ಭೂಮಿಯು ತನ್ನಲ್ಲಿ ತೇವಾಂಶ ಹಿಡಿದಿಟ್ಟುಕೊಂಡಿದೆ.ತಾಲೂಕಿನ ಕಿರವತ್ತಿ-ಮದನೂರು ಗ್ರಾಪಂ ವ್ಯಾಪ್ತಿಯಲ್ಲಿ ಪ್ರತಿ ವರ್ಷ ನೀರಿನ ಅಭಾವ ಕಂಡು ಬರುತ್ತಿತ್ತು. ಅಲ್ಲಿನ ಗ್ರಾಪಂ ಆಡಳಿತ ಟ್ಯಾಂಕರ್ ಮೂಲಕ ಬೇಡಿಕೆ ಇದ್ದೆಡೆಗೆ ನೀರು ಪೂರೈಸಿ ಸಮಸ್ಯೆ ಬಗೆಹರಿಸುತ್ತಿದ್ದರು. ಅದೃಷ್ಟವಶಾತ್ ಈ ಬಾರಿ ಈವರೆಗೂ ಈ ಭಾಗದಲ್ಲಿ ನೀರಿನ ಕೊರತೆ ಕಂಡುಬಂದಿಲ್ಲ.
ಪಟ್ಟಣದಲ್ಲಿ ೯ ಕೆರೆಗಳಿದ್ದು, ಮಳೆಗಾಲದಲ್ಲಿ ಸುರಿದ ಮಳೆ ನೀರನ್ನು ತನ್ನೊಳಗೆ ಸಮಗ್ರವಾಗಿ ಹಿಡಿದಿಟ್ಟುಕೊಂಡ ಪರಿಣಾಮ ಸುತ್ತಮುತ್ತಲಿನ ಕೊಳವೆ ಬಾವಿಗಳಲ್ಲಿ ನೀರಿನ ಕೊರತೆ ಕಂಡಿಲ್ಲ. ೯ ಕೆರೆಗಳು ಪಟ್ಟಣದ ಜೀವನಾಡಿಗಳಾಗಿವೆ. ಪಟ್ಟಣದಲ್ಲಿ ಕೇವಲ ಕೊಳವೆಬಾವಿಗಳ ನೀರನ್ನೇ ನಂಬಿ ಪಪಂ ಜನರಿಗೆ ನೀರು ಪೂರೈಸುತ್ತಿದೆ. ೮೨ ಕೊಳವೆಬಾವಿಗಳ ಮೂಲಕ ನೀರು ಪೂರೈಕೆಯಾಗುತ್ತಿದೆ. ಎಲ್ಲಿಯು ನೀರಿಗಾಗಿ ಬೇಡಿಕೆಯ ಕೂಗು ಕೇಳಿಲ್ಲ.ಅರಣ್ಯದೊಳಗೆ ಕಾಡು ಪ್ರಾಣಿಗಳ ದಾಹ ತಣಿಸಲು ಅಲ್ಲಲ್ಲಿ ಗುಂಡಿ ನಿರ್ಮಿಸಿ, ನೀರು ಸಂಗ್ರಹಣೆಗೆ ಪ್ರಯತ್ನಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದು ಅಂತರ್ಜಲ ಏರಿಕೆಗೂ ನೆರವಾಗಿದೆ. ಕೆಲವು ರೈತರು ಪ್ಲಾಸ್ಟಿಕ್ ರಹಿತ ಕೃಷಿಹೊಂಡ ನಿರ್ಮಿಸಿಕೊಂಡಿದ್ದು, ಅದರಲ್ಲಿ ನೀರು ಶೇಖರಣೆ ಕೂಡ ಅಂತರ್ಜಲ ಏರಿಕೆಗೆ ಕಾರಣವಾಗಿದೆ. ಒಟ್ಟಾರೆ ಈ ಬಾರಿ ಯಲ್ಲಾಪುರ ತಾಲೂಕಿನಲ್ಲಿ ನೀರಿನ ಕೊರತೆ ಈವರೆಗೆ ಗಣನೀಯ ಪ್ರಮಾಣದಲ್ಲಿ ಕಂಡು ಬಂದಿಲ್ಲ.
ತಾಲೂಕು ೧,೩೦,೧೧೦ ಹೆಕ್ಟೇರ್ ಭೂ ಪ್ರದೇಶ ಹೊಂದಿದೆ. ಇದರಲ್ಲಿ ೧,೧೬,೯೮೬ ಹೆಕ್ಟೇರ್ ಭೂಮಿ ಅರಣ್ಯ ಪ್ರದೇಶವಾಗಿದೆ. ಇದರಲ್ಲಿ ೧೦,೩೮೨ ಹೆಕ್ಟೇರ್ ಮಾತ್ರ ಕೃಷಿ ಸಾಗುವಳಿಗೆ ಯೋಗ್ಯವಾಗಿದೆ. ಇದರಲ್ಲಿ ೨,೬೭೫ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿದ್ದು, ಹೆಚ್ಚಿನ ಪ್ರದೇಶದಲ್ಲಿ ತೋಟಗಾರಿಕಾ ಬೆಳೆ ವ್ಯಾಪಿಸಿದೆ. ೨,೧೦೦ ಹೆಕ್ಟೇರ್ ಭತ್ತ, ೩೮೦ ಹೆಕ್ಟೇರ್ ಕಬ್ಬು, ೧೭೫ ಹೆಕ್ಟೇರ್ ಮುಸುಕಿನ ಜೋಳ, ೨೦ ಹೆಕ್ಟೇರ್ ಹತ್ತಿ ಬೆಳೆಯಲಾಗುತ್ತಿದ್ದು, ಆಹಾರ ಧಾನ್ಯ ಬೆಳೆಯುವ ಆಸಕ್ತಿಗಿಂತ ರೈತರು ತೋಟಗಾರಿಕಾ ಬೆಳೆಗಳಿಗೆ; ವಿಶೇಷವಾಗಿ ವಾಣಿಜ್ಯ ಬೆಳೆ ಅಡಿಕೆಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಕಬ್ಬಿನ ಬೆಳೆಯ ಕಡೆಗೆ ಇತ್ತೀಚೆಗೆ ಆಸಕ್ತಿ ತೋರುತ್ತಿದ್ದಾರೆ.ಕಳೆದ ವರ್ಷ ಉತ್ತಮ ಮಳೆ ಸುರಿದ ಹಿನ್ನೆಲೆಯಲ್ಲಿ ಕಿರವತ್ತಿ, ಮದನೂರು ಗ್ರಾಪಂ ವ್ಯಾಪ್ತಿಯಲ್ಲಿ ಈವರೆಗೂ ನೀರಿನ ಅಭಾವ ಕಂಡು ಬಂದಿಲ್ಲ. ಮುಂದಿನ ದಿನಗಳಲ್ಲಿ ಕಂಡು ಬಂದರೆ ತಕ್ಷಣ ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ಶಾಸಕರು, ತಹಶೀಲ್ದಾರ್, ಇಒಗಳು ಆದೇಶಿಸಿದ್ದಾರೆ. ಗ್ರಾಪಂ ಆಡಳಿತ ಆದೇಶ ಪರಿಪಾಲನೆಗೆ ಸನ್ನದ್ಧವಾಗಿದ್ದು, ನೀರು ಪೂರೈಕೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎನ್ನುತ್ತಾರೆ ಕಿರವತ್ತಿ-ಮದನೂರು ಪಿಡಿಒ ಅಣ್ಣಪ್ಪ ವಡ್ಡರ್.ಪಟ್ಟಣದಲ್ಲಿ ಈವರೆಗೂ ಕುಡಿಯುವ ನೀರಿನ ಅಭಾವ ಕಂಡು ಬಂದಿಲ್ಲ. ಕೆರೆಗಳು ಅಂತರ್ಜಲ ಮಟ್ಟವನ್ನು ಉತ್ತಮವಾಗಿ ಕಾಯ್ದುಕೊಂಡಿವೆ. ಕೊಳವೆಬಾವಿಗಳಲ್ಲಿ ನೀರು ಸಮರ್ಪಕವಾಗಿದೆ. ಬೇಸಿಗೆ ಕಾಲದಲ್ಲಿ ಕೊರತೆ ಕಾಣುವುದು ಸಹಜವಾದರೂ ಈವರೆಗೂ ಸಮಸ್ಯೆ ಉದ್ಭವಿಸಿಲ್ಲ ಎನ್ನುತ್ತಾರೆ ಪಪಂ ಮುಖ್ಯಾಧಿಕಾರಿ ಕುಮಾರ್ ನಾಯ್ಕ.