ಪೋಷಕರೇ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಿ: ಬಿಇಒ ವೈ.ಕೆ.ತಿಮ್ಮೇಗೌಡ

KannadaprabhaNewsNetwork | Published : May 16, 2025 2:09 AM
Follow Us

ಸಾರಾಂಶ

ನಮ್ಮ ಶಾಲೆಗೆ ಬರುವ ಮಕ್ಕಳ ಕಲಿಕೆ. ಪೌಷ್ಟಿಕಾಂಶದ ಬೆಂಬಲ, ನೈರ್ಮಲ್ಯ, ಸುರಕ್ಷತೆ, ಬಿಸಿಯೂಟ, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಹಾಲು, ಮೊಟ್ಟೆ, ಬಾಳೆಹಣ್ಣು ಸೇರಿದಂತೆ ಹಲವು ಸೌಕರ್ಯ ಒದಗಿಸಲಾಗುತ್ತಿದೆ. ಆದ್ದರಿಂದ ಪೋಷಕರು ಹಾಗೂ ಶಿಕ್ಷಕರು ನಮ್ಮ ಶಾಲೆಗಳ ಬಗ್ಗೆ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗದೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಿ ಶಾಲೆಗಳನ್ನು ಉಳಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ ಕರೆ ನೀಡಿದರು.

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ದಕ್ಷಿಣ ಶಾಲೆಯಲ್ಲಿ ಏರ್ಪಡಿಸಿದ್ದ ನನ್ನ ಶಾಲೆ ನನ್ನ ಜವಾಬ್ದಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ವಿದ್ಯೆ ಜೊತೆಗೆ ಕೌಶಲ್ಯಾಧಾರಿತ ಶಿಕ್ಷಣ ನೀಡಲಾಗುತ್ತಿದೆ. ಗುಣಾತ್ಮಕ ಶಿಕ್ಷಣ ನೀಡಲು ಹಲವಾರು ಅನುಕೂಲತೆ ಒದಗಿಸಲಾಗಿದೆ ಎಂದರು.

ನಮ್ಮ ಶಾಲೆಗೆ ಬರುವ ಮಕ್ಕಳ ಕಲಿಕೆ. ಪೌಷ್ಟಿಕಾಂಶದ ಬೆಂಬಲ, ನೈರ್ಮಲ್ಯ, ಸುರಕ್ಷತೆ, ಬಿಸಿಯೂಟ, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಹಾಲು, ಮೊಟ್ಟೆ, ಬಾಳೆಹಣ್ಣು ಸೇರಿದಂತೆ ಹಲವು ಸೌಕರ್ಯ ಒದಗಿಸಲಾಗುತ್ತಿದೆ. ಆದ್ದರಿಂದ ಪೋಷಕರು ಹಾಗೂ ಶಿಕ್ಷಕರು ನಮ್ಮ ಶಾಲೆಗಳ ಬಗ್ಗೆ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರು.

ಸರ್ಕಾರಿ ಶಾಲೆಗಳಲ್ಲಿ ಕಲಿತ ಕೌಶಲ್ಯಾಧಾರಿತ ಶಿಕ್ಷಣ ಮಕ್ಕಳನ್ನು ಸದಾ ಕ್ರಿಯಾಶೀಲರಾಗಿರುವಂತೆ ಮಾಡುತ್ತದೆ. ಅವರಿಗೆ ತಮ್ಮ ಸುತ್ತಲ ಪರಿಸರದ ಬದುಕಿನ ವಾಸ್ತವತೆ ಅರಿವಿರುತ್ತದೆ. ಸರ್ಕಾರಿ ಕೆಲಸ ಸಿಕ್ಕಲಿ ಅಥವಾ ಸಿಗದಿರಲಿ ಬದುಕುವ ಚಾಕಚಕ್ಯತೆಯನ್ನು ಸರ್ಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ಕಲಿತಿರುತ್ತಾರೆ ಎಂದರು.

ಪೋಷಕರು ತಮ್ಮ ಮಕ್ಕಳ ಬದುಕಿನ ಭವಿಷ್ಯಕ್ಕಾಗಿ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು. ಖಾಸಗಿ ಶಾಲೆಗಳಿಗೆ ನೀಡುವಂತಹ ಸಹಕಾರವನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೂ ನೀಡುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಣಾಧಿಕಾರಿಗಳು ಮಧ್ಯಾಹ್ನದ ಉಪಹಾರ ಯೋಜನೆ ಜಿಪಂ ಮಂಡ್ಯ ಲೋಕೇಶ್, ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಕೆ.ಮಂಜುನಾಥ್ ನನ್ನ ಶಾಲೆ ನನ್ನ ಜವಾಬ್ದಾರಿ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದರು.

ಸಮಾರಂಭದಲ್ಲಿ ಪಿ.ಎಂ.ಪೋಷಣ್ ಅಭಿಯಾನ್ ಸಹಾಯಕ ನಿರ್ದೇಶಕ ಸಿ.ಎನ್.ಯತೀಶ್, ಶಿಕ್ಷಣ ಸಂಯೋಜಕರಾದ ಮೋಹನ್‌ಕುಮಾರ್, ಕೃಷ್ಣನಾಯಕ್, ಬಿ.ಆರ್.ಪಿ ಮೋಹನ್, ದಕ್ಷಿಣ ಶಾಲೆ ಎಸ್ ಡಿಎಂಸಿ ಅಧ್ಯಕ್ಷ ರಾಜೇಶ್ ಸೇರಿದಂತೆ ಸಿಆರ್‌ಪಿಗಳು, ಪೋಷಕರು ಮತ್ತು ಶಿಕ್ಷಕರು ಹಾಜರಿದ್ದರು.