ಕನ್ನಡಪ್ರಭ ವಾರ್ತೆ ಮಧುಗಿರಿ
ನೋಡಲ್ ಅಧಿಕಾರಿಗಳು ಗ್ರಾಮ ಸಭೆಗೆ ಕಡ್ಡಾಯವಾಗಿ ಹಾಜರಾಗಿ ಗ್ರಾಮಗಳಲ್ಲಿರುವ ಸಮಸ್ಯೆಗಳ ನಿವಾರಣೆಗೆ ಪಿಡಿಒಗಳ ಜೊತೆ ಸಮನ್ವಯತೆ ಸಾಧಿಸಿ ಅಭಿವೃದ್ಧಿ ವಿಚಾರದಲ್ಲಿ ಮಾರ್ಗದರ್ಶನ ನೀಡುವ ಮೂಲಕ ಗ್ರಾಮಗಳ ಅಭ್ಯುದಯ್ಕಕೆ ಶ್ರಮಿಸಬೇಕು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಸಲಹೆ ನೀಡಿದರು.ಗುರುವಾರ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಡಿದರು.
ಗ್ರಾಪಂಗಳಿಗೆ ನೋಡಲ್ ಅಧಿಕಾರಿಗಳು ಪಟ್ಟಿ ಪ್ರಕಾರ ಭೇಟಿ ನೀಡಿ, ಪಂಚಾಯಿತಿಯಲ್ಲಿ ಪಿಡಿಒಗಳಿಂದ ಕೆಲಸ ಮಾಡಿಸುವುದು ನೋಡಲ್ ಆಫೀಸರ್‌ಗಳ ಕೆಲಸ, ಪಿಡಿಒಗಳು ಗ್ರಾಮಗಳ ಪ್ರಗತಿಗೆ ಪೂರಕವಾಗಿ ಕೆಲಸ ಮಾಡಬೇಕು. ಬರ ಪರಿಸ್ಥಿತಿ ಎದುರಿಸಲು ಎಲ್ಲ ಅಧಿಕಾರಿಗಳು ಕಾಳಾಜಿ ವಹಿಸಬೇಕು. ಪಿಡಿಒ ಮತ್ತು ವಾಟರ್ ಮ್ಯಾನ್‌ಗಳ ಸಭೆ ಕರೆದು ಜನ -ಜಾನುವಾರುಗಳಿಗೆ ಕುಡಿವ ನೀರಿಗೆ ತೊಂದರೆ ಆಗದಂತೆ ಎಚ್ಚರ ವಹಿಸಿ, ಎಲ್ಲೇಲ್ಲಿ ಗೋಶಾಲೆ ಅಗತ್ಯವಿದೆ ಎಂಬುದನ್ನು ಪಟ್ಟಿ ಮಾಡಿ ಆಯಾಯ ಭಾಗದಲ್ಲಿ ಪ್ರಾರಂಭ ಮಾಡೋಣ, ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೂ ತರುತ್ತೇನೆ. ಗೋಪಾಲಕರಿಗೆ ಸ್ಥಳೀಯ ಸಹಕಾರ ಸಂಘಗಳ ಸದಸ್ಯರು ಊಟದ ವ್ಯವಸ್ಥೆ ಮಾಡುತ್ತಾರೆ ಎಂದರು.ಉಚಿತ ವಿದ್ಯತ್ ಸೌಲಭ್ಯ ಕಲ್ಪಿಸಿ: ಓದುವ ಬಡ ವಿದ್ಯಾರ್ಥಿಗಳ ಮನೆಗಳಲ್ಲಿ ವಿದ್ಯುತ್ ಸೌಲಭ್ಯವಿಲ್ಲದಿದ್ದರೆ ಅಂತಹ ಮನೆಗಳನ್ನು ಪತ್ತೆ ಹಚ್ಚಿ ಬೆಳಕು ಯೋಜನೆಯಡಿ ಪುಕ್ಕಟ್ಟೆ ವಿದ್ಯುತ್ ಸಂಪರ್ಕ ಕಲ್ಪಿಸಿ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೆರವು ನೀಡಿ ಬೆಳಕಾಗಬೇಕು. ಬ್ರಹ್ಮದೇವರಹಳ್ಳಿ ಸಮೀಪ 10ಕ್ಕೂ ಅಧಿಕ ಕುಟುಂಬಗಳು ಮನೆ ಕಟ್ಟಿಕೊಂಡಿದ್ದು ಅಲ್ಲಿ ವಿದ್ಯುತ್ ದೀಪದ ವ್ಯವಸ್ಥೆಯಿಲ್ಲ, ಅಲ್ಲಿನ ಜನರು ಕತ್ತಲಲ್ಲಿ ವಾಸಿಸುತ್ತಿದ್ದಾರೆ. ಆದ ಕಾರಣ ಅವರಿಗೆ ಬೆಳಕು ಯೋಜನೆ, ಅಥವಾ ನಿರಂತರ ಜ್ಯೋತಿ ಯೋಜನೆಯಡಿ ವಿದ್ಯುತ್ ಕೊಡಿ ಎಂದು ಬೆಸ್ಕಾಂ ಇಇ ಜಗದೀಶ್‌ಗೆ ಸೂಚಿಸಿ, ಹೊಸಕೋಟೆ, ಕಡಗತ್ತೂರು, ಮಾರೇನಹಳ್ಲಿ, ಬ್ರಹ್ಮಸಮುದ್ರ ಗೇಟ್, ಯಾಕಾರಲಹಳ್ಳಿ ಮಾರ್ಗದ ಕುಗ್ರಾಮಗಳಿಗೆ ಬಸ್ ಬಿಟ್ಟರೆ ಆ ಭಾಗದ ಶಾಲಾ-ಕಾಲೇಜು ಮಕ್ಕಳಿಗೆ, ಕೂಲಿಕಾರ್ಮಿಕರಿಗೆ ಅನುಕೂಲವಾಗಲಿದೆ. ನಿಮಗೂ ಪುಣ್ಯ ಬರತ್ತದೆ ಎಂದು ಕೆಎಸ್‌ಆರ್‌ಟಿಸಿ ಡಿಪೊ ವ್ಯವಸ್ತಾಪಕರಿಗೆಸೂಚಿಸಿದರು.
ತುಮಕೂರು -ರಾಯದರ್ಗ ರೈಲ್ವೆ ಕಾಮಾಗಾರಿ: ಪುಲಮಾಡಿ ರೈತರಿಗೆ ಸಾಗುವಳಿ ಪತ್ರ ನೀಡಿದ್ದು, ಇದುವರೆಗೂ ಪಹಣಿ, ಖಾತೆ ಮಾಡಿ ಕೊಟ್ಟಿಲ್ಲ ಏಕೆ.? ಎಂದು ತಹಸೀಲ್ದಾರ್ ಸಿಗ್ಬತ್‌ವುಲ್ಲಾ, ತುಮಕೂರು -ರಾಯದರ್ಗ ರೈಲ್ವೆ ಕಾಮಗಾರಿಗೆ ಭೂಸ್ವಾಧೀನ ಪ್ರಕ್ರಿಯೇ ಅಮೆಗತಿಯಲ್ಲಿ ಸಾಗುತ್ತಿದೆ ಏಕೆ.? ಎಂದು ಎಂಜಿನಿಯರ್‌ಗೆ ತರಾಟೆಗೆ ತೆಗೆದುಕೊಂಡು ಜನ ಸಾಮಾನ್ಯರ ಒಳಿತಿಗೆ ಮುತುವರ್ಜಿ ವಹಿಸಿ ಕೆಲಸ ಮಾಡುವಂತೆ ತಾಕೀತು ಮಾಡಿದರು.ಯುಜಿಡಿ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳಿಸುವಂತೆ ಸೂಚಿಸಿ, ಸಣ್ಣ ನೀರಾವರಿ ಇಲಾಖೆ ಎತ್ತಿನ ಹೊಳೆ ನೀರು ಹರಿದರೆ ತಾಲೂಕಿನ 45 ಕೆರೆಗಳಿಗೆ ನೀರು ಹರಿಸಬಹುದು. ಈ ಸಲ ಮಳೆ ಇಲ್ಲದೆ ಶೇ. 70 ಕೆರೆಗಳಲ್ಲಿ ನೀರಿಲ್ಲದೆ ಖಾಲಿಯಾಗಿವೆ. ಬಿಜವರ ಕೆರೆ ಶೇ. 20, ಹನುಂತಪುರ ಕೆರೆ ಶೇ. 40 ಮತ್ತು ಪಟ್ಟಣಕ್ಕೆ ಕುಡಿವ ನೀರು ಪೂರೈಸುವ ಚೋಳೇನಹಳ್ಳಿ ಕೆರೆ ಶೇ. 50 ಮಾತ್ರ ನೀರಿದೆ ಎಂದು ಸಭೆಗೆ ಎಇಇ ತಿಪ್ಪೇಸ್ವಾಮಿ ತಿಳಿಸಿದರು.ಇಇ ಕಾರ್ಯವೈಖರಿಗೆ ಶಾಸಕರ ಅಸಮಾಧಾನ: ಜಿಪಂ ಇಇ ದಯಾನಂದ್ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನಗೊಂಡ ಸಚಿವರು, ಸಕಾಲಕ್ಕೆ ಸರಿಯಾಗಿ ಟೆಂಡರ್ ಕರೆದು ಕಾಮಗಾರಿ ಪ್ರಾರಂಭ ಮಾಡದೇ ತುಂಡು ಗುತ್ತಿಗೆದಾರರಿಗೆ ಸರ್ಕಾರದ ಆದೇಶವಿದ್ದರೂ ಕೆಲಸ ಕೊಡದೇ ತಾರತಮ್ಯ ನೀತಿ ಅನುಸರಿಸುತ್ತಿದ್ದೀರಾ ಎಂಬ ದೂರು ಕೇಳಿ ಬಂದಿವೆ. ಇನ್ನೂ ಮುಂದಾದರೂ ಸರಿಪಡಿಸಿಕೊಂಡು ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಿ ಎಂದು ಎಚ್ಚರಿಸಿದರು.
ಎಆರ್‌ಸಿಎಸ್ ಮತ್ತು ರೇಷ್ಮೆ ಇಲಾಖೆಗೆ ಜಾಗ ನೀಡಿದರೆ ಹೊಸ ಕಟ್ಟಡ ಕಟ್ಟಿಕೊಡುವುದಾಗಿ ತಿಳಿಸಿ, ಗ್ಯಾರಂಟಿ ಯೋಜನೆಗಳಿಗೆ ನಮ್ಮ ತಾಲೂಕಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗುರಿ ಮುಟ್ಟಿಲ್ಲ, ಹಾಸನ ಜಿಲ್ಲೆಯಲ್ಲಿ ಶೇ.94 ಯಶಸ್ಸು ಸಾಧಿಸಿದ್ದು, ಮಧುಗಿರಿ ತಾಲೂಕು ಮತ್ತು ನಮ್ಮ ಜಿಲ್ಲೆ ಪ್ರಥಮ ಸ್ಥಾನದಲ್ಲಿರಬೇಕು. ತಾಲೂಕಿನ ಕುಲ ಕಸುಬುದಾರರಿಗೆ 2900 ಮನೆಗಳು ಮಂಜೂರಾಗಿದ್ದು, ಎಲ್ಲ ಜಾತಿಯ ಕಸುಬುದಾರರಿಗೆ ಮನೆಗಳನ್ನು ನಿರ್ಮಿಸಿ ಕೊಡಲು ಅಧಿಕಾರಿಗಳು ಮುಂದಾಗುವಂತೆ ಸೂಚಿಸಿದರು.ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ಮಾತನಾಡಿ, ಬೈಪಾಸ್ ರಸ್ತೆಗೆ ಭೂಮಿ ಕೊಟ್ಟ ರೈತರಿಗೆ ತಕ್ಷಣ ಪರಿಹಾರ ನೀಡಬೇಕು. ರಸ್ತೆಗಳಲ್ಲಿ ನಾಮಫಲಕ, ಹಂಪ್, ರಸ್ತೆ ಒತ್ತುವರಿ ತೆರವು ಜಂಗಲ್ ಕಟ್ಟ ಮಾಡಿಸುವಂತೆ ಅಧಿಕಾರಿಗೆ ಸೂಚಿಸಿದರು.
ಸಭೆಯಲ್ಲಿ ಎಸಿ ಶಿವಪ್ಪ, ತಹಸೀಲ್ದಾರ್ ಸಿಗ್ಬತ್‌ವುಲ್ಲಾ, ಇಒ ಲಕ್ಷ್ಮಣ್, ಯೋಜನಾಧಿಕಾರಿ ಮಧುಸೂದನ್, ಸಿಪಿಐ ರವಿ, ಕೆಪಿಸಿಸಿ ಸದಸ್ಯ ಎಂ.ಎಸ್. ಮಲ್ಲಿಕಾರ್ಜುನಯ್ಯ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.