ನೊಳಂಬ ಸಂಗಮ ತುಮಕೂರು ಜಾತ್ರೆ 24ರಂದು

KannadaprabhaNewsNetwork |  
Published : Aug 22, 2025, 12:00 AM IST
ನೊಳಂಬ ಸ್ವಯಂ ಸೇವಕ ಸಂಘದಿಂದ ನೊಳಂಬ ಸಂಗಮ ತುಮಕೂರು ಜಾತ್ರೆ | Kannada Prabha

ಸಾರಾಂಶ

ರಾಜ್ಯ ನೊಳಂಬ ಸ್ವಯಂ ಸೇವಕ ಸಂಘದ ವತಿಯಿಂದ ತಾಲೂಕಿನ ಕೆ.ಬಿ ಕ್ರಾಸ್‌ನಲ್ಲಿರುವ ಗೋಡೆಕೆರೆ ಶ್ರೀಮದ್ ರಂಭಾಪುರಿ ವಿದ್ಯಾಸಂಸ್ಥೆಯ ಆವರಣದಲ್ಲಿ ಆ.24ರ ಭಾನುವಾರ ನೊಳಂಬ ಸಂಗಮ ತುಮಕೂರು ಜಾತ್ರೆ-2025 ನಡೆಯಲಿದೆ.

ಕನ್ನಡಪ್ರಭ ವಾರ್ತೆ ತಿಪಟೂರು

ರಾಜ್ಯ ನೊಳಂಬ ಸ್ವಯಂ ಸೇವಕ ಸಂಘದ ವತಿಯಿಂದ ತಾಲೂಕಿನ ಕೆ.ಬಿ ಕ್ರಾಸ್‌ನಲ್ಲಿರುವ ಗೋಡೆಕೆರೆ ಶ್ರೀಮದ್ ರಂಭಾಪುರಿ ವಿದ್ಯಾಸಂಸ್ಥೆಯ ಆವರಣದಲ್ಲಿ ಆ.24ರ ಭಾನುವಾರ ನೊಳಂಬ ಸಂಗಮ ತುಮಕೂರು ಜಾತ್ರೆ-2025 ಹಾಗೂ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಗುಬ್ಬಿ ಬೆಟ್ಟದಹಳ್ಳಿಯ ಗವಿಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ತಿಳಿಸಿದರು.

ಗುರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಸೇವಾ ಸಂಘದ ವತಿಯಿಂದ ಪದಾಧಿಕಾರಿಗಳು ಸ್ವಯಂಸೇವಕರು ಸೇರಿಕೊಂಡು ರಾಜ್ಯಮಟ್ಟದ ಜಾತ್ರಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನೊಳಂಬ ಎಂದರೆ ರಾಜವಂಶವಾಗಿದ್ದು ಇದು ಜಾತಿ ಸೂಚಕವಲ್ಲ. ರಾಜ್ಯದ ಉದ್ದಗಲಕ್ಕೂ ಅಂದಿನ ರಾಜವಂಶರು ರಾಜ್ಯವನ್ನು ವಿಸ್ತರಿಸಿದ್ದಾರೆ. ಕಷ್ಟಪಟ್ಟು ಕಾಯಕ ಮಾಡಿ ಹಂಚಿ ಊಟ ಮಾಡುವುದು ಆಗಿನಿಂದ ಬಂದಿರುವ ಪದ್ಧತಿ. ಗುರುಲಿಂಗ ಜಂಗಮ ಸೇವಾ ವೃತ್ತಿ ಆದರ್ಶ ಸಮಾಜವಾಗಿದ್ದು ಅಂದಿನ ಕಾಲದ ನೊಳಂಬ ರಾಜವಂಶರು ನಡೆಸಿಕೊಂಡು ಬರುತ್ತಿರುವ ಜಾತ್ರಾ ಕಾರ್ಯಕ್ರಮವನ್ನು ಐಕ್ಯತೆ, ಜಾಗೃತಿ, ಅಭಿಮಾನ, ಸಂಪರ್ಕ ಮತ್ತು ಬಂಧುಗಳಲ್ಲಿ ಸೇವಾ ಭಾವನೆಗಳನ್ನು ಗಟ್ಟಿಗೊಳಿಸಲು ಕಳೆದ ಮೂರು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿದ್ದು, ಭಾನುವಾರ ನಡೆಯಲಿರುವ ಈ ಕಾರ್ಯಕ್ರಮ ಬೆಳಿಗ್ಗೆಯಿಂದ ಸಂಜೆಯವರೆಗೂ ನಡೆಯಲಿದೆ. ಸಮಾಜದ ೧೫ಕ್ಕೂ ಹೆಚ್ಚು ವಿವಿಧ ಮಠಗಳ ಮಠಾಧೀಶರುಗಳು ಭಾಗವಹಿಸಲಿದ್ದಾರೆ. ಸಮಸ್ತ ಭಕ್ತರು ಕುಟುಂಬ ಸಮೇತ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದರು. ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಈ ಒಂದು ದಿನದ ಅದ್ಧೂರಿ ಕಾರ್ಯಕ್ರಮದಲ್ಲಿ ಬೆಳಗ್ಗೆ ಧ್ವಜಾರೋಹಣ, ಕರಡಿ ವಾದ್ಯ, ಮೆರವಣಿಗೆ ಮತ್ತು ಸಾಂಸ್ಕೃತಿಕ ಉತ್ಸವ ನಂತರ ಮಕ್ಕಳಿಗೆ ವಿವಿಧ ಮನೋರಂಜನ ಕ್ರೀಡೆಗಳು ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ಸಮಾಜದ ಮಠಾಧೀಶರುಗಳಿಂದ ಆಶೀರ್ವಚನ, ಗೀತ ಗಾಯನ, ವಚನ ಗಾಯನ ನಡೆಯಲಿದ್ದು, ನಂತರ 2024-25ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ.90ರಷ್ಟು ಅಂಕ ಪಡೆದ 500ಕ್ಕೂ ಹೆಚ್ಚು ನೊಳಂಬ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಆಯೋಜಿಸಲಾಗಿದೆ. ಉದ್ಯೋಗ ಅಭಿವೃದ್ಧಿ, ನಾಯಕತ್ವದ ಅಭಿವೃದ್ಧಿ, ಉದ್ಯಮಶೀಲತೆ ಅಭಿವೃದ್ಧಿ ಬಗ್ಗೆ ಉಪನ್ಯಾಸಗಳು ಹಾಗೂ ಉದ್ದಿಮೆದಾರರ ಸ್ವಸಹಾಯ ಸಂಘಗಳ ವಸ್ತು ಪ್ರದರ್ಶನ, ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ. ಬೆಳಗ್ಗೆಯಿಂದ ಸಂಜೆಯವರೆಗೂ ಭಕ್ತರಿಗೆ ದಾಸೋಹ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ತನು, ಮನ, ಧನ ಸಹಾಯ ಮಾಡಬೇಕೆಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಹಾಸನ ಜಿಲ್ಲಾ ನೊಳಂಬ ಸಮಾಜದ ಅಧ್ಯಕ್ಷ ನವಿಲೇ ಪರಮೇಶ್, ನೊಳಂಬ ಸ್ವಯಂ ಸೇವಕ ಸಂಘದ ಮುಖಂಡರಾದ ಕೆ.ಜಿ ಸದಾಶಿವಯ್ಯ, ಶಶಿಕಿರಣ, ಕೆರಗೋಡಿ ದೇವರಾಜು, ಚಂದ್ರಶೇಖರ್, ಮೋಹನ್ ಕುಮಾರ್, ಚಂದ್ರಕಲಾ, ಲಕ್ಷ್ಮಣ್, ರವಿಶಂಕರ್, ಬಿ.ಬಿ ಬಸವರಾಜು, ವೇದಮೂರ್ತಿ, ವಿಶ್ವನಾಥ್, ರವಿಶಂಕರ್ ಮತ್ತಿತರರಿದ್ದರು.

PREV

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ