ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ರಾಜೀನಾಮೆಗೆ ಆಗ್ರಹ

KannadaprabhaNewsNetwork |  
Published : Jul 11, 2025, 11:48 PM IST
11ಎಚ್ಎಸ್ಎನ್15 :  | Kannada Prabha

ಸಾರಾಂಶ

ಪಲ್ಲವಿಯವರು ಮತ್ತು ಅವರ ಆಪ್ತ ಕಾರ್ಯದರ್ಶಿ ಆನಂದ್ ಕುಮಾರ್ ರವರು ಆಹ್ವಾನವಿಲ್ಲದಿದ್ದರೂ ಏಕಾಏಕಿ ಸಭೆಗೆ ನುಗ್ಗಿ ಗೊಂದಲ ಸೃಷ್ಟಿ ಮಾಡಿ ನಮ್ಮ ಅಲೆಮಾರಿ ಸಮುದಾಯಗಳ ಸುಮಾರು ಏಳು ಜನ ಮುಖಂಡರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ರಾಜ್ಯದ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ. ಪಲ್ಲವಿ ಅವರ ರಾಜೀನಾಮೆ ಪಡೆದು, ಅವರ ಆಪ್ತ ಕಾರ್ಯದರ್ಶಿ ಆನಂದ್ ಕುಮಾರ್ ರನ್ನು ಸೇವೆಯಿಂದ ಅಮಾನತು ಮಾಡಬೇಕು. ಇಲ್ಲವಾದರೆ ಬೆಂಗಳೂರಿನ ಫ್ರಿಡೋಂ ಪಾರ್ಕ್ ನಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿ ಡೀಸಿ ಕಚೇರಿ ಆವರಣದಲ್ಲಿ ಅಖಿಲ ಕರ್ನಾಟಕ ಹಂದಿಜೋಗಿ ಸಂಘದಿಂದ ಶುಕ್ರವಾರ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಅಖಿಲ ಕರ್ನಾಟಕ ಹಂದಿ ಜೋಗಿ ಸಂಘದ ರಾಜ್ಯಾಧ್ಯಕ್ಷ ಆರ್. ರಾಜೇಂದ್ರ ಕುಮಾರ್ ಮತ್ತು ಜಿಲ್ಲಾಧ್ಯಕ್ಷ ಲಿಂಗರಾಜು ಮಾಧ್ಯಮದೊಂದಿಗೆ ಮಾತನಾಡಿ, ಕಳೆದ ಒಂದು ವಾರದ ಹಿಂದೆ ಬೆಂಗಳೂರು ಗಾಂಧಿ ಭವನದ ಸಭಾಂಗಣದಲ್ಲಿ ಪ.ಜಾತಿಯ ೪೯ ಅಲೆಮಾರಿ ಸಮುದಾಯಗಳ ಮುಖಂಡರುಗಳ ಸಭೆ ನಡೆದಿದ್ದು, ಈ ಸಭೆಗೆ ಮಾಜಿ ಸಚಿವ ಎಚ್. ಆಂಜನೇಯರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಿದ್ದು, ಅವರ ನೇತೃತ್ವದಲ್ಲಿ ನಮ್ಮ ೪೯ ಅಲೆಮಾರಿ ಸಮುದಾಯಗಳ ಕುಂದು- ಕೊರತೆ ಬಗ್ಗೆ ಚರ್ಚೆ ನಡೆಯುವ ಸಂದರ್ಭದಲ್ಲಿ ಪಲ್ಲವಿಯವರು ಮತ್ತು ಅವರ ಆಪ್ತ ಕಾರ್ಯದರ್ಶಿ ಆನಂದ್ ಕುಮಾರ್ ರವರು ಆಹ್ವಾನವಿಲ್ಲದಿದ್ದರೂ ಏಕಾಏಕಿ ಸಭೆಗೆ ನುಗ್ಗಿ ಗೊಂದಲ ಸೃಷ್ಟಿ ಮಾಡಿ ನಮ್ಮ ಅಲೆಮಾರಿ ಸಮುದಾಯಗಳ ಸುಮಾರು ಏಳು ಜನ ಮುಖಂಡರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದರು.

ಇವರಿಬ್ಬರೂ ಬಲಾಢ್ಯ ಕೊರಚಾ- ಕೊರಮ ಸಮುದಾಯಕ್ಕೆ ಸೇರಿದ್ದು, ಕೊನೆಯ ಸ್ಥರದಲ್ಲಿರುವ ನಮ್ಮ ೪೯ ಅಲೆಮಾರಿ ಸಮುದಾಯಗಳ ಮೇಲೆ ದಬ್ಬಾಳಿಕೆ ಮಾಡುವ ಉದ್ದೇಶದಿಂದ ಮತ್ತು ಈ ಸಮುದಾಯಗಳಿಗೆ ದೊರಕಬೇಕಾದ ಸರ್ಕಾರಿ ಸೌಲಭ್ಯಗಳನ್ನು ಲಪಟಾಯಿಸುವ ದುರುದ್ದೇಶ ಹೊಂದಿದ್ದಾರೆ. ಹಾಗಾಗಿ ನಮ್ಮ ಸಮುದಾಯದ ಮುಖಂಡರ ಮೇಲೆ ಸುಳ್ಳು ಕೇಸು ದಾಖಲಿಸಿದ್ದಾರೆ ಎಂದು ದೂರಿದರು. ಈ ಕೂಡಲೇ ಜಿ. ಪಲ್ಲವಿರವರ ರಾಜೀನಾಮೆ ಪಡೆದು ಮತ್ತು ಅವರ ಆಪ್ತ ಕಾರ್ಯದರ್ಶಿ ಆನಂದ್ ಕುಮಾರ್ ರವರನ್ನು ಸೇವೆಯಿಂದ ವಜಾ ಮಾಡಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಅಖಿಲ ಕರ್ನಾಟಕ ಹಂದಿಜೋಗಿ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ವಿ. ಗೋವಿಂದರಾಜು, ಜಿಲ್ಲಾಧ್ಯಕ್ಷ ಲಿಂಗರಾಜು, ಸಿಜಿಎಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರೀಶ್ ಹುಳುವಾರೆ, ಕುಮಾರಸ್ವಾಮಿ, ಸೋಮಶೇಖರ್, ಸುರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV