ಮೇಲ್ಮನೆ ಸದಸ್ಯ ಸ್ಥಾನಕ್ಕೆ ದ್ವಾರಕನಾಥ ನಾಮ ನಿರ್ದೇಶಿಸಿ

KannadaprabhaNewsNetwork | Published : May 23, 2024 1:12 AM

ಸಾರಾಂಶ

ದಾವಣಗೆರೆಯಲ್ಲಿ ಕರ್ನಾಟಕರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ಜಿಲ್ಲಾಧ್ಯಕ್ಷ ತಿಪ್ಪೇಶಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ, ಜನಪರ ವಕೀಲರಾಗಿ, ಲೇಖಕರಾಗಿ ತಬ್ಬಲಿ ಸಮುದಾಯಗಳ ಅಸ್ತಿತ್ವಕ್ಕಾಗಿ ಕಳೆದ 4 ದಶಕದಿಂದ ದುಡಿಯುತ್ತಿರುವ ಡಾ.ಸಿ.ಎಸ್‌.ದ್ವಾರಕನಾಥರನ್ನು ವಿಧಾನ ಪರಿಷತ್ ಸದಸ್ಯರಾಗಿ ನಾಮ ನಿರ್ದೇಶನಗೊಳಿಸುವಂತೆ ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ಜಿಲ್ಲಾ ಘಟಕ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗೆ ಒತ್ತಾಯಿಸಿದೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಹಾಸಭಾದ ಜಿಲ್ಲಾಧ್ಯಕ್ಷ ತಿಪ್ಪೇಶಪ್ಪ, ಜನಪರ ವಕೀಲರಾಗಿ ಡಾ.ದ್ವಾರಕನಾಥ 40 ವರ್ಷದಿಂದ ತಳ ಸಮುದಾಯ ಗುರುತಿಸುತ್ತಾ, ಆ ಸಮುದಾಯಗಳ ಆರ್ಥಿಕ ಪರಿಸ್ಥಿತಿ ಮತ್ತು ಜೀವನಶೈಲಿ, ಬದುಕುವ ರೀತಿ ಅಧ್ಯಯನ ಮಾಡುತ್ತಾ, ಸಮಸ್ತ ಅಲೆಮಾರಿ ಜನಾಂಗದವರ ಮಾಹಿತಿ ಪಡೆಯುತ್ತಾ, ರಾಜ್ಯವ್ಯಾಪಿ ಪ್ರವಾಸ ಮಾಡಿರುವ ಮಾನವೀಯ ಕಳಕಳಿ ವ್ಯಕ್ತಿ ಎಂದರು.

ತಳ ಸಮುದಾಯಗಳಿಗೆ ಸೂರು, ಸರ್ಕಾರಿ ಸೌಲಭ್ಯ ಕಲ್ಪಿಸುವ ಬಗ್ಗೆ ಪ್ರತ್ಯೇಕ ಅಲೆಮಾರಿ ಕೋಶ ರಚಿಸುವಂತೆ ಸರ್ಕಾರದ ಗಮನಕ್ಕೆ ತಂದು, ಒತ್ತಡ ಹೇರುವಲ್ಲಿ ಡಾ.ದ್ವಾರಕನಾಥರ ಪರಿಶ್ರಮವಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಅಲೆಮಾರಿ ಅಭಿವೃದ್ಧಿ ಕೋಶ ರಚನೆಯಲ್ಲಿ ದ್ವಾರಕನಾಥರು ಮುಖ್ಯ ಪಾತ್ರ ವಹಿಸಿದಂತ ವ್ಯಕ್ತಿ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯ ವಿಭಾಗದ ರಾಜ್ಯಾಧ್ಯಕ್ಷರೂ ಆದ ದ್ವಾರಕನಾಥ ಪಕ್ಷದಲ್ಲಿ ಮುಖ್ಯ ವಕ್ತಾರರಾಗಿ, ಚುನಾವಣಾ ಪ್ರಚಾರ ಸಮಿತಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ರಾಜ್ಯಾದ್ಯಂತ ಮೂಲೆ ಮೂಲೆ ಸುತ್ತಾಡಿ, ಕಾಂಗ್ರೆಸ್ ಪಕ್ಷಕ್ಕಾಗಿ ಅಲೆಮಾರಿ ಸಮುದಾಯ ಒಗ್ಗೂಡಿಸಿ, ಪ್ರಜಾಪ್ರಭುತ್ವದ ಬಗ್ಗೆ, ಸಾಮಾಜಿಕ ನ್ಯಾಯಯದ ಬಗ್ಗೆ, ಚುನಾವಣೆಗಳಲ್ಲಿ ನಮ್ಮ ಮತದಾನದ ಹಕ್ಕು ಚಲಾಯಿಸುವ ಬಗ್ಗೆ ಜಾಗೃತಿ ಮೂಡಿಸಲು ಶ್ರಮಿಸಿದ್ದಾರೆ ಎಂದರು.

ಸಂವಿಧಾನದ ಬಗ್ಗೆ ಅಪಾರ ಅರಿವು, ಅಭಿಮಾನ ಹೊಂದಿರುವ ಪತ್ರಕರ್ತರಾಗಿಯೂ ಸೇವೆ ಸಲ್ಲಿಸಿದ ಸಿ.ಎಸ್‌.ದ್ವಾರಕನಾಥರನ್ನು ಬುಡಕಟ್ಟು ಸಮುದಾಯಗಳ ಪ್ರತಿನಿಧಿಯಾಗಿ ರಾಜ್ಯ ಸರ್ಕಾರವು ವಿಧಾನ ಪರಿಷತ್‌ಗೆ ನಾಮ ನಿರ್ದೇಶನಗೊಳಿಸಬೇಕು. ಈ ನೆಲದ ಆದಿವಾಸಿ ಅಲೆಮಾರಿಗಳ ಬಗ್ಗೆ ಸಾವಿರಾರು ಸಂಶೋಧನಾ ಲೇಖನಬರೆದಿದ್ದಾರೆ. ಲೇಖಕರಿಗೆ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಹತ್ತು ಹಲವು ಪುಸ್ತಕಗಳನ್ನೂ ಹೊರ ತಂದಿದ್ದಾರೆ. ಬಡವರ ನೋವು-ನಲಿವಿಗೆ ಸ್ಪಂದಿಸುವ, ಆತ್ಮೀಯತೆಯಿಂದ ಉಪಚರಿಸುವ ದ್ವಾರಕನಾಥ ಮೇಲ್ಮನೆಗೆ ಸೂಕ್ತ ವ್ಯಕ್ತಿ ಎಂದು ವಿವರಿಸಿದರು.

ಮಹಾಸಭಾದ ಹೊನ್ನಾಳಿ ಕೆ.ಪಿ.ಸಿದ್ದಪ್ಪ, ಹರೀಶ ಗುರುರಾಜಪುರ, ಎಚ್.ಸುರೇಶ ಗುರುರಾಜಪುರ, ಕುಮಾರ ಇತರರು ಇದ್ದರು.

Share this article