ಕನ್ನಡಪ್ರಭ ವಾರ್ತೆ ಮಡಿಕೇರಿ
ನಾಮಪತ್ರ ಸಲ್ಲಿಸಲು ಏ.4 ಕೊನೆಯ ದಿನವಾಗಿದೆ. ಏ.5 ರಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದ್ದು, ಏ. 8 ರಂದು ನಾಮಪತ್ರ ವಾಪಸ್ಸು ಪಡೆಯಲು ಕಡೆಯ ದಿನವಾಗಿದೆ. ಏ. 26 ರಂದು ಮತದಾನ ನಡೆಯಲಿದ್ದು, ಜೂನ್ 4 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯಲ್ಲಿ 4,66,154 ಮತದಾರರು ಇದ್ದು, ಇವರಲ್ಲಿ 2,28,478 ಪುರುಷ ಮತದಾರರು ಮತ್ತು 2,37,660 ಮಹಿಳಾ ಮತದಾರರು ಇದ್ದಾರೆ. 16 ಮಂದಿ ಇತರೆ ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 2,36,562 ಮತದಾರರು ಇದ್ದು, ಇವರಲ್ಲಿ 1,15,159 ಪುರುಷ ಮತದಾರರು ಮತ್ತು 1,21,394 ಮಹಿಳಾ ಮತದಾರರು ಇದ್ದು, ಇತರೆ 9 ಮಂದಿ ಮತದಾರರು ಇದ್ದಾರೆ.
ಕೊಡಗು ಜಿಲ್ಲೆಯಲ್ಲಿ 1,357 ಮಂದಿ ಸೇವಾ ಮತದಾರರು ಇದ್ದು, ಇವರಲ್ಲಿ 1,298 ಪುರುಷ ಮತದಾರರು ಹಾಗೂ 59 ಮಹಿಳಾ ಮತದಾರರು ಇದ್ದಾರೆ. ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 622 ಮಂದಿ ಸೇವಾ ಮತದಾರರು ಇದ್ದು, ಇವರಲ್ಲಿ 596 ಪುರುಷ ಮತದಾರರು, 26 ಮಹಿಳಾ ಮತದಾರರು ಇದ್ದಾರೆ. ಹಾಗೆಯೇ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 735 ಮಂದಿ ಸೇವಾ ಮತದಾರರು ಇದ್ದು, ಇವರಲ್ಲಿ 702 ಪುರುಷ ಮತದಾರರು, 33 ಮಂದಿ ಮಹಿಳಾ ಸೇವಾ ಮತದಾರರು ಇದ್ದಾರೆ.
ಕೊಡಗು ಜಿಲ್ಲೆಯಲ್ಲಿ ಒಟ್ಟು 546 ಮತಗಟ್ಟೆಗಳಿದ್ದು, ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ 273 ಮತಗಟ್ಟೆ ಹೊಂದಿದೆ. ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಶೌಚಾಲಯ, ರ‍್ಯಾಂಪ್ ವ್ಯವಸ್ಥೆ ಕಲ್ಪಿಸಲಾಗಿದೆ.
ಚುನಾವಣಾ ಆಯೋಗದ ಸೂಚನೆಯಂತೆ ಪ್ರತಿ ಮತಗಟ್ಟೆಗಳಿಗೆ ಒಬ್ಬರು ಅಧ್ಯಕ್ಷಾಧಿಕಾರಿ ಮತ್ತು ಮೂವರು ಮತಗಟ್ಟೆ ಅಧಿಕಾರಿಗಳು ಹಾಗೂ ಮೀಸಲು ಸಿಬ್ಬಂದಿ ನೇಮಕ ಮಾಡಲಾಗುತ್ತದೆ. ಅದೇ ರೀತಿ ಕೇಂದ್ರ ಸರ್ಕಾರಿ ಅಧಿಕಾರಿ/ ಸಿಬ್ಬಂದಿಗಳನ್ನು ಆಯ್ದ ಮತಗಟ್ಟೆಗಳಿಗೆ ಮೈಕ್ರೋ ವೀಕ್ಷಕರನ್ನಾಗಿ ನೇಮಕ ಮಾಡಲಾಗುತ್ತದೆ.
ಜಿಲ್ಲೆಯಲ್ಲಿ 44 ಮಂದಿ ಸೆಕ್ಟರ್ ಅಧಿಕಾರಿಗಳು, 21 ಮಂದಿ ಪ್ಲೈಯಿಂಗ್ ಸ್ಕ್ವಾಡ್, 42 ಮಂದಿ ಸ್ಟಾಟಿಕ್ ಸರ್ವಿಲೆನ್ಸ್ ತಂಡದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ, ವಿಶೇಷ ಚೇತನರಿಗೆ, ಕೋವಿಡ್ ಶಂಕಿತ, ದೃಢಪಟ್ಟ ಮತದಾರರಿಗೆ ಹಾಗೂ ಅಗತ್ಯ ಸೇವೆಗಳ ಇಲಾಖೆಗಳ ನಿರತ ಅಧಿಕಾರಿ ಸಿಬ್ಬಂದಿಗೆ ವಿಶೇಷ ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.
2024 ಲೋಕಸಭಾ ಸಾರ್ವತ್ರಿಕ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಪ್ರತಿಯೊಬ್ಬ ಮತದಾರರು ಸಹ ಅವರ ಹಕ್ಕನ್ನು ಚಲಾಯಿಸಲು ಅಡೆತಡೆಗಳಾಗದಂತೆ ಎಲ್ಲರೂ ಸಹ ಮತದಾನದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಜಿಲ್ಲಾಡಳಿತದಿಂದ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಭಾರತ ಚುನಾವಣಾ ಆಯೋಗದ ಎಲ್ಲಾ ನಿಯಮಗಳಂತೆ ಕಟ್ಟುನಿಟ್ಟಾಗಿ ಪಾಲಿಸಿ ಚುನಾವಣೆಯನ್ನು ನಡೆಸಲು ಜಿಲ್ಲೆಯ ಎಲ್ಲಾ ಮತದಾರರು, ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳ ಸಹಕಾರ ಕೋರಿದೆ.
ಚುನಾವಣೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಭಾರತ ಚುನಾವಣಾ ಆಯೋಗದ ವೆಬ್‌ಸೈಟ್ www.eci.nic.in ಮತ್ತು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ವೆಬ್‌ಸೈಟ್ www.kodagu.nic.in ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ವೆಬ್‌ಸೈಟ್ www.ceokarnataka.kar.nic.in ನಲ್ಲಿ ಮಾಹಿತಿ ಪಡೆಯಬಹುದು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.