ಕನ್ನಡಪ್ರಭ ವಾರ್ತೆ ಚಾಮರಾಜನಗರಚಾಮರಾಜನಗರ ಲೋಕಸಭಾ ಕ್ಷೇತ್ರ (ಮೀಸಲು) ಬಡ ಜನರ ಉದ್ಧಾರ ಮತ್ತು ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನಾನು ಸ್ಪರ್ಧಿಸುತ್ತಿದ್ದೇನೆ ಎಂದು ಕವಿ, ಸಾಹಿತಿ ಸಿ.ಶಂಕರ ಅಂಕನಶೆಟ್ಟಿಪುರ ಹೇಳಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸೋಮವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನಾನು ಕವಿ, ಸಾಹಿತಿ ಹಾಗೂ ಹೋರಾಟಗಾರನಾಗಿ, ಪತ್ರಕರ್ತನಾಗಿ, ಜಿಲ್ಲಾ ಸಫಾಯಿ ಕರ್ಮಚಾರಿ ವಿಚಕ್ಷಣ ಸಮಿತಿ ಸದಸ್ಯನಾಗಿ ಇಡೀ ಜಿಲ್ಲೆಯ ಪೌರಕಾರ್ಮಿಕರ ಮತ್ತು ಸಫಾಯಿ ಕರ್ಮಚಾರಿಗಳ ಅಭಿವೃದ್ಧಿಗಾಗಿ ಪ್ರಾಮಾಣಿಕ ಸೇವೆಯನ್ನು ಮಾಡುತ್ತಿದ್ದೇನೆ ನನ್ನನ್ನು ಹಲವಾರು ಸಂಘ ಸಂಸ್ಥೆಗಳು ಗುರುತಿಸಿ ಸನ್ಮಾನಿಸಿವೆ ಎಂದರು. ಸದಾ ಜನರೊಂದಿಗೆ ಒಡನಾಟ ಇಟ್ಟುಕೊಂಡಿರುವ ನಾನು ಈ ಭಾರಿಯ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಕ್ಷೇತ್ರಕ್ಕೆ ಹೊಸ ಕೈಗಾರಿಕೆ: ನಾನು ಆಯ್ಕೆಯಾದರೆ ಕ್ಷೇತ್ರದ ಬಡ ಜನರು, ಕೆಲಸಕ್ಕಾಗಿ ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಗೆ ಗುಳೆ ಹೊರಟಿರುವುದನ್ನು ತಪ್ಪಿಸಲು ಬದನಗುಪ್ಪೆ ಕೈಗಾರಿಕಾ ಪ್ರದೇಶದ ಮಾದರಿ ಹೊಸ ಕೈಗಾರಿಕಾ ಪ್ರದೇಶದ ಯೋಜನೆಯನ್ನು ಹುಟ್ಟು ಹಾಕಿ ಕಾರ್ಯಗತಗೊಳಿಸುವುದು.ಕ್ಷೇತ್ರವನ್ನು ಗುಡಿಸಲು ಮುಕ್ತ ಕ್ಷೇತ್ರವಾಗಿ ಪರಿಣಮಿಸಿ ಕೇಂದ್ರ ಸರ್ಕಾರದಿಂದ ಹೊಸ ಯೋಜನೆಯನ್ನು ತಂದು ವಸತಿ ರಹಿತ ಪ್ರತಿ ಬಡ ಕುಟುಂಬಕ್ಕೆ ನಿರ್ಮಿಸಿಕೊಡುವುದಕ್ಕೆ ಮುಂದಾಗುವುದು.
ತುಂಬಾ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಚಾಮರಾಜನಗರದಿಂದ ಮೆಟ್ಟುಪಾಳ್ಯಂ ರೈಲ್ವೆ ಕಾಮಗಾರಿಯನ್ನು ಮಂಜೂರು ಮಾಡಿಸುವುದು. ನುಗು ಜಲಾಶಯದಿಂದ ನೀರಾವರಿ ತಂದು ಇಡೀ ಕ್ಷೇತ್ರವನ್ನು ನೀರಾವರಿ ಕ್ಷೇತ್ರವನ್ನಾಗಿ ಪರಿವರ್ತಿಸುವುದು. ರೈತರು ಬೆಳೆದ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವುದು.ಕೇರಳ ಮತ್ತು ತಮಿಳುನಾಡು ರಾಜ್ಯಗಳಂತೆ ನಮ್ಮ ಕ್ಷೇತ್ರದ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು. ನಮ್ಮ ಜಿಲ್ಲೆಯ ಜಾನಪದ ಕಲೆಯನ್ನು ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟಕ್ಕೆ ಪರಿಚಯಿಸುವುದು. ಮತ್ತು ಬಡ ಕಲಾವಿದರ ಮತ್ತು ಸಾಹಿತಿಗಳ ಸಮಸ್ಯೆಗಳಿಗೆ ಸ್ಪಂದಿಸಿ, ಶಾಶ್ವತ ಸೂರು ಕಲ್ಪಿಸುವುದು.
ಪ್ರಥಮ ದರ್ಜೆ ಅಧಿಕಾರಿಗಳಿಗೆ ನೀಡುವಂತಹ ಸಂಬಳವನ್ನು ರಾಷ್ಟ್ರಾದ್ಯಂತ ಪೌರಕಾರ್ಮಿಕರುಗಳಿಗುಗೂ ನೀಡುವಂತೆ ಕೇಂದ್ರ ಸರ್ಕಾರದ ಗಮನ ಸೆಳೆದು, ಕಾರ್ಯಗತಗೊಳಿಸುವುದು.ಪೌರಕಾರ್ಮಿಕರ ಮತ್ತು ಸಫಾಯಿ ಕರ್ಮಚಾರಿಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವುದು. ಅತ್ತುತ್ತಮ ಬಡಾವಣೆಯೊಂದಿಗೆ, ಸುಸಜ್ಜಿತ ಸೂರುಗಳನ್ನು ಕೊಡಿಸುವುದು.
ಇಡೀ ರಾಷ್ಟ್ರಾದ್ಯಂತ ಸಂಸಾರಗಳನ್ನು ಹಾಳು ಮಾಡುತ್ತಿರುವ ಮದ್ಯಪಾನ ನಿಷೇಧ ಮಾಡುವುದು. ವಿಕಲಚೇತನರನ್ನು ಗುರುತಿಸಿ ಕೇಂದ್ರ ಸರ್ಕಾರದಡಿ ಉದ್ಯೋಗ ಕಲ್ಪಿಸುವುದು. ಶೀಘ್ರದಲ್ಲಿ ಕಾನೂನು ಕಾಲೇಜನ್ನು ತೆರೆಯುವುದರ ಜೊತೆಗೆ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಈ ವೇಳೆ ಮಹೇಶ್, ಮಲ್ಲೇಶ್, ರಾಜೇಂದ್ರ, ನಂದೀಶ್ ಇದ್ದರು.