ಕನ್ನಡಪ್ರಭ ವಾರ್ತೆ ಮಂಗಳೂರು
ದಕ್ಷಿಣ ಕನ್ನಡ ಲೋಕಸಭಾ ಚುನಾವಣೆಗೆ ಮಾ.28ರಿಂದ ಏ.4ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ಜಿಲ್ಲಾಡಳಿತ ಸರ್ವ ಸಿದ್ಧತೆ ನಡೆಸಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ನಾಮಪತ್ರ ಸಲ್ಲಿಕೆಯ ಕುರಿತು ಅಗತ್ಯ ಮಾಹಿತಿ ನೀಡಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಹಿತಿ ಕೇಂದ್ರ ಆರಂಭ ಮಾಡಲಾಗಿದೆ ಎಂದರು.ಮಾ. 29 ಹಾಗೂ 31ರಂದು ಸರ್ಕಾರಿ ರಜಾ ದಿನ ಆಗಿರುವ ಕಾರಣ ಆ ದಿನಗಳಂದು ನಾಮಪತ್ರ ಸಲ್ಲಿಸಲು ಅವಕಾಶವಿಲ್ಲ. ಉಳಿದ ದಿನಗಳಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಜಿಲ್ಲಾಧಿಕಾರಿ ಕಚೇರಿಯ ಮೂರನೆ ಮಹಡಿಯ ಕೋರ್ಟ್ ಹಾಲ್‌ನಲ್ಲಿ ಸಲ್ಲಿಕೆಗೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಚುನಾವಣಾಧಿಕಾರಿ (ಆರ್‌ಒ) ಅಥವಾ ಎಆರ್‌ಒ (ಅಪರ ಜಿಲ್ಲಾಧಿಕಾರಿ) ಅವರಿಗೆ ನಾಮಪತ್ರ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಹೇಳಿದರು.ರಾಷ್ಟ್ರೀಯ ಅಥವಾ ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದಿರುವ ಪಕ್ಷದಿಂದ ಸ್ಪರ್ಧಿಸುತ್ತಿದ್ದರೆ ಕ್ಷೇತ್ರದ ಒಬ್ಬ ಮತದಾರ ಸೂಚಕನಾಗಿ ಸಹಿ ಮಾಡಿರಬೇಕು. ಮಾನ್ಯತೆ ಪಡೆಯದ ರಾಜಕೀಯ ಪಕ್ಷದಿಂದ ಸ್ಪರ್ಧಿಸುತ್ತಿದ್ದರೆ 10 ಮಂದಿ ಸೂಚಕರಾಗಿ ಸಹಿ ಮಾಡಿರಬೇಕು. ನಾಮಪತ್ರ ಸಲ್ಲಿಕೆ ವೇಳೆ ಚುನಾವಣಾಧಿಕಾರಿ ಕಚೇರಿಯ 100 ಮೀ. ವ್ಯಾಪ್ತಿಯೊಳಗೆ ಮೂರು ವಾಹನಗಳ ಪ್ರವೇಶಕ್ಕೆ ಮಾತ್ರ ಅವಕಾಶ. ಆರ್‌ಒ ಕೊಠಡಿಗೆ ಅಭ್ಯರ್ಥಿ ಸೇರಿ ಐದು ಮಂದಿ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಬಹುದು ಎಂದು ವಿವರ ನೀಡಿದರು.ನಾಮಪತ್ರ ಸಲ್ಲಿಕೆಯ ಸಮಯದಿಂದೇ ಅಭ್ಯರ್ಥಿಯ ಚುನಾವಣಾ ಖರ್ಚು ವೆಚ್ಚಗಳ ಲೆಕ್ಕಾಚಾರ ಆರಂಭವಾಗಲಿದ್ದು, ಒಂದೇ ಬ್ಯಾಂಕ್ ಖಾತೆಯ ಮೂಲಕ ಎಲ್ಲ ರೀತಿಯ ಆರ್ಥಿಕ ವ್ಯವಹಾರವನ್ನು ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.ಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಇದ್ದರು.
ಸಾಧ್ಯವಾದಷ್ಟೂ ಮತಗಟ್ಟೆಗೇ ಬಂದು ಮತ ಹಾಕಿ85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಕಲಚೇತನರಿಗೆ (ಶೇ. 40ಕ್ಕಿಂತ ಹೆಚ್ಚಿನ ಅಂಗವಿಕಲತೆ) ಮನೆಯಿಂದಲೇ ಮತದಾನ ಮಾಡುವ ಅವಕಾಶವಿದೆ. ಈ ರೀತಿ ಮತದಾನ ಮಾಡುವುದನ್ನು ಆಯ್ಕೆ ಮಾಡಿಕೊಂಡರೆ ಎರಡು ಸಲ ನಿಗದಿತ ದಿನಾಂಕ ನೀಡಲಾಗುವುದು. ಎರಡೂ ಸಲವೂ ಅವರು ಮನೆಯಲ್ಲಿ ಇಲ್ಲದಿದ್ದರೆ ಮತದಾನ ಅವಕಾಶದಿಂದ ವಂಚಿತರಾಗಲಿದ್ದಾರೆ. ಅವರಿಗೆ ಮತಗಟ್ಟೆಗೆ ತೆರಳಿ ಮತದಾನ ಮಾಡುವ ಅವಕಾಶ ಇರುವುದಿಲ್ಲ. ಆದ್ದರಿಂದ ಸಾಧ್ಯವಾದಷ್ಟು ಮತಗಟ್ಟೆಗೇ ಬಂದು ಮತ ಚಲಾಯಿಸಿ. ಇಂತಹ ಮತದಾರರಿಗೆ ಅಗತ್ಯವಾದ ರ್ಯಾಂಪ್, ವೀಲ್ ಚೇರ್, ಸ್ವಯಂ ಸೇವಕರ ವ್ಯವಸ್ಥೆಯನ್ನು ಮತಗಟ್ಟೆಗಳಲ್ಲಿ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ತಿಳಿಸಿದರು.ಮತದಾನ ಹೆಚ್ಚಿಸಲು ವಿಶೇಷ ಕಾರ್ಯಕ್ರಮ2019ರ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ. 77.9ರಷ್ಟು ಮತದಾನವಾಗಿದೆ. ಆದರೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಪ್ರಮಾಣ ತೀರ ಕಡಿಮೆ ಇದೆ. ಕಡಿಮೆ ಮತದಾನ ಆಗಿರುವ ಒಟ್ಟು 72 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಈ ಮತಗಟ್ಟೆಗಳಲ್ಲಿ ವಿಶೇಷ ಸ್ವೀಪ್ ಕಾರ್ಯಕ್ರಮದ ಮೂಲಕ ಮತದಾರರನ್ನು ಮತ ಚಲಾವಣೆಗೆ ಪ್ರೋತ್ಸಾಹಿಸಲು ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮತದಾರರನ್ನು ಮತದಾನಕ್ಕೆ ಪ್ರೇರೇಪಿಸಲು 14 ಮಂದಿ ಜಿಲ್ಲಾ ಐಕಾನ್‌ಗಳನ್ನು ಆಯ್ಕೆ ಮಾಡಲಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಆನಂದ್ ತಿಳಿಸಿದರು.ಬುಡಕಟ್ಟು ಸಮುದಾಯಗಳಾದ ಮಲೆಕುಡಿಯರು, ಕೊರಗರು, ತೃತೀಯ ಲಿಂಗಿಗಳು ಸೇರಿದಂತೆ ದುರ್ಬಲ ವರ್ಗಗಳನ್ನು ಗುರಿಯಾಗಿಟ್ಟುಕೊಂಡು ಪ್ರತ್ಯೇಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಅವರು ಹೇಳಿದರು.
ಮಾದರಿ ಮತಗಟ್ಟೆಗಳುಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ 9 ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಮಹಿಳಾ ಸಿಬ್ಬಂದಿಯಿಂದಲೇ ನಿರ್ವಹಿಸಲ್ಪಡುವ ಐದು ಸಖಿ ಕೇಂದ್ರಗಳು, ವಿಕಲಚೇತನರಿಂದಲೇ ನಿರ್ವಹಿಸಲ್ಪಡುವ ಒಂದು ಕೇಂದ್ರ, ಒಂದು ಯುವ, ಒಂದು ಜನಾಂಗೀಯ ಮತ್ತು ಒಂದು ಥೀಮ್ ಆಧಾರಿತ ಮತಗಟ್ಟೆಗಳು ಇರಲಿವೆ ಎಂದು ಡಾ.ಆನಂದ್ ತಿಳಿಸಿದರು.