ಕನ್ನಡಪ್ರಭ ವಾರ್ತೆ, ತುಮಕೂರು
ತಪ್ಪಿದಲ್ಲಿ ಆಗಸ್ಟ್ 15 ರಿಂದ ಸರ್ಕಾರದ ವಿರುದ್ಧ ಅಸಹಕಾರ ಚಳವಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮಾದಿಗ ಸಮುದಾಯದ ಮುಖಂಡರು ಬುಧವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ, ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೆ ವಿಳಂಬ ಮಾಡುತ್ತಿರುವುದು ಪರಿಶಿಷ್ಟ ಜಾತಿಯವರಲ್ಲಿ ಆತಂಕ ಸೃಷ್ಟಿಯಾಗಿದೆ. ಸರ್ಕಾರ ಕೂಡಲೇ ನಾಗಮೋಹನ್ ದಾಸ್ ವರದಿ ಪಡೆದು ಒಳಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿ ಆಗಸ್ಟ್ 1 ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಲಾಗುತ್ತದೆ. ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಅಂದು ಮಾದಿಗ ಸಮುದಾಯದ ಸಾವಿರಾರು ಜನ ಸೇರಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಒಳಮೀಸಲಾತಿ ಜಾರಿಯ ಒಂದೊಂದು ದಿನದ ವಿಳಂಬವೂ ಪರಿಶಿಷ್ಟ ಜಾತಿಯವರು ಆಯುಷ್ಯ ಕಳೆದುಕೊಳ್ಳುವಂತಾಗಿದೆ. ನಿರುದ್ಯೋಗಿಗಳ ವಯೋಮಿತಿ ಮೀರಿ ಉದ್ಯೋಗಾವಕಾಶ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಲೋಕಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಮಂಡಳಿಯ ನೇಮಕಾತಿಗಳಿಗಾಗಿ ಸುಮಾರು ಎರಡು ಲಕ್ಷ ಜನ ಒಳಮೀಸಲಾತಿಗಾಗಿ ಕಾಯುವಂತಾಗಿದೆ. ಈ ಸಮಸ್ಯೆಗೆ ಒಳಮೀಸಲಾತಿಯೊಂದೇ ಪರಿಹಾರವಾಗಿದೆ ಎಂದು ಹೇಳಿದರು.ಅತಿ ಹಿಂದುಳಿದ ಮತ್ತು ಅವಕಾಶ ವಂಚಿತ ಸಮುದಾಯಗಳಿಗೆ ನ್ಯಾಯ ಒದಗಿಸಲು, ಅಸಮಾನತೆಯನ್ನು ಸರಿಪಡಿಸಲು ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಸಮುದಾಯಗಳಿಗೂ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ನೀಡಲು ಆಯಾ ರಾಜ್ಯ ಸರ್ಕಾರಗಳಿಗೆ ಅವಕಾಶ ನೀಡಿ ಸರ್ವೋಚ್ಛ ನ್ಯಾಯಾಲಯವುದು 1.8.2024 ರಂದು ಆದೇಶ ನೀಡಿತ್ತು. ಇದಾಗಿ ವರ್ಷವಾದರೂ ನಮ್ಮ ರಾಜ್ಯದಲ್ಲಿ ಒಳಮೀಸಲಾತಿ ಜಾರಿ ಮಾಡದೆ ಸರ್ಕಾರ ವಿಳಂಬ ಮಾಡುತ್ತಿದೆ. ಸರ್ಕಾರಕ್ಕೆ ಎಚ್ಚರಿಕೆ, ಗಡುವು ನೀಡಲು ಇದೇ ಆಗಸ್ಟ್ 1 ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು. 15 ರಿಂದ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದರು.
ಒಳಮೀಸಲಾತಿ ಜಾರಿ ವಿಳಂಬದಿಂದಾಗಿ ನಮ್ಮ ಸಮುದಾಯದಲ್ಲಿ ತೀವ್ರ ಅಸಮಾಧಾನ ಹಾಗೂ ಆತಂಕ ಉಂಟಾಗಿದೆ. ವಿಳಂಬ ನೀತಿಯಿಂದ ನಮ್ಮ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು, ಕಾರ್ಮಿಕರು, ಮಹಿಳೆಯರು, ಒಟ್ಟಾಗಿ ಇಡೀ ಸಮುದಾಯ ತಮಗೆ ಸಿಗಬೇಕಾದ ನ್ಯಾಯಯುತ ಹಕ್ಕುಗಳಿಂದ ವಂಚಿತವಾಗುತ್ತಿದ್ದಾರೆ ಎಂದರು.
ಮುಖಂಡ ಪಿ.ಎನ್.ರಾಮಯ್ಯ, ಒಳಮೀಸಲಾತಿಗಾಗಿ 35 ವರ್ಷಗಳಿಂದ ಮಾದಿಗ ಸಮುದಾಯದವರು ವಿವಿಧ ಸ್ವರೂಪದ ಹೋರಾಟಗಳನ್ನು ಮಾಡುತ್ತಾ ಬಂದಿದ್ದಾರೆ. ಆದರೆ ಸರ್ಕಾರಗಳು ಹೋರಾಟದ ದಾರಿ ತಪ್ಪಿಸುವ ಕುತಂತ್ರವನ್ನೇ ಅನುಸರಿಸಿಕೊಂಡುಬರುತ್ತಿವೆ ಎಂದು ಆರೋಪಿಸಿದರು.