ಕನ್ನಡಪ್ರಭ ವಾರ್ತೆ ಚಿತ್ರದುರ್ಗಪ್ರತಿಭೆ ಗುರುತಿಸುವಲ್ಲಿ ತಾರತಮ್ಯ ನೀತಿ ಅನಸರಿಸುವುದು, ಪೂರ್ವಗ್ರಹಿಯಾಗಿ ನಡೆದುಕೊಳ್ಳುವುದು ಸರಿಯಲ್ಲವೆಂದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಕೆ.ಅನ್ವರ್ ಭಾಷಾ ಹೇಳಿದರು. ನಗರದ ಮಹಾರಾಣಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಶಾಲಾ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಎಲ್ಲಾ ಮಕ್ಕಳಲ್ಲಿಯೂ ಪ್ರತಿಭೆ ಹಾಗೂ ಕ್ರಿಯಾಶೀಲತೆ ಇರುತ್ತದೆ. ಅಂತಹ ಪ್ರತಿಭೆಯನ್ನು ಶಿಕ್ಷಕರು ಹಾಗೂ ಪೋಷಕರು ಗುರುತಿಸಿ, ಕಲೆ ಅನಾವರಣಗೊಳಿಸಲು ಪ್ರೋತ್ಸಾಹ ನೀಡಬೇಕು ಎಂದರು.
ಚಿತ್ರದುರ್ಗ ಜಿಲ್ಲೆಯ ಆಡಳಿತ ವ್ಯವಸ್ಥೆ, ವಿದ್ಯಾಭ್ಯಾಸ ಹಾಗೂ ಪ್ರತಿಭೆ ಕ್ರಿಯಾಶೀಲತೆಯಿಂದ ಕೂಡಿದೆ. ಯಾರಲ್ಲಿ ಪ್ರತಿಭೆ ಇರುತ್ತದೆಯೋ ಅಂತಹವರನ್ನು ಗುರುತಿಸಿ ಆಯ್ಕೆ ಮಾಡಬೇಕು. ಇದರಲ್ಲಿ ಯಾವುದೇ ತಾರತಮ್ಯ ಆಗಬಾರದು. ವಿದ್ಯಾರ್ಥಿಗಳು ಬಹಳ ನಿರೀಕ್ಷೆಯೊಂದಿಗೆ ಆಸೆ ಇಟ್ಟುಕೊಂಡು ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿರುತ್ತಾರೆ. ಅವರಿಗೆ ನಿರಾಸೆಯನ್ನುಂಟು ಮಾಡಬಾರದು. ನೈಜ, ನ್ಯಾಯಬದ್ಧವಾದ ತೀರ್ಪು ನೀಡಬೇಕು ಎಂದು ಶಿಕ್ಷಕರಿಗೆ ಕಿವಿ ಮಾತು ಹೇಳಿದರು.ಅಪರ ಜಿಲ್ಲಾಧಿಕಾರಿ ಬಿ.ಟಿ ಕುಮಾರಸ್ವಾಮಿ ಮಾತನಾಡಿ, ಚಿತ್ರದುರ್ಗ ಜಿಲ್ಲೆ ಕಲೆ, ಸಾಹಿತ್ಯ, ಸಂಪ್ರದಾಯಕ್ಕೆ ಹೆಸರುವಾಸಿಯಾಗಿದೆ. ಮಕ್ಕಳಲ್ಲಿ ಉತ್ತಮ ಪ್ರತಿಭೆ ಇದೆ. ಅವರ ಸಾಮರ್ಥ್ಯವನ್ನು ಕೇವಲ ಅಂಕಪಟ್ಟಿಯಿಂದ ಅಳೆಯುವಂತಾಗಬಾರದು. ಪ್ರತಿಭೆಗಳಿಂದಲೂ ಜೀವನ ಕಟ್ಟಿಕೊಳ್ಳಬಹುದು. ಹೀಗಾಗಿ ಮಕ್ಕಳು ಯಾವುದೇ ಹಂತದಲ್ಲಿ ಆತ್ಮಸೈರ್ಯ ಕಳೆದುಕೊಳ್ಳಬಾರದು. ಮಕ್ಕಳಲ್ಲಿರುವ ಕಲೆ ಗುರುತಿಸಿ ಹೊರ ಹಾಕಬೇಕು. ಆಗ ಮಾತ್ರ ಉತ್ತಮ ನಾಗರಿಕ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ್ ರೆಡ್ಡಿ ಪ್ರಾಸ್ತಾವಿಕ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳ ಪ್ರತಿಭೆ ಹೊರ ಹಾಕಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಪೋಷಕರು, ಶಿಕ್ಷಕರು, ಮಕ್ಕಳಿಗೆ ನೈತಿಕವಾಗಿ ಊರುಗೋಲು ಆಗಿ ನಿಲ್ಲಬೇಕು. ಚಿತ್ರದುರ್ಗ ಜಿಲ್ಲೆಯಲ್ಲಿ ಅಪಾರ ಜ್ಞಾನ ಹಾಗೂ ಕಲೆ ಹೊಂದಿರುವ ಮಕ್ಕಳು ಇದ್ದಾರೆ. ಹೀಗಾಗಿ ಮಕ್ಕಳು ಪ್ರತಿಯೊಂದು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನಗಳಿಸಬೇಕೆಂಬ ಪ್ರಯತ್ನ ಮಾಡಬೇಕು ಎಂದು ಹೇಳಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ. ಕುಮಾರಸ್ವಾಮಿ ಮಾತನಾಡಿದರು.5 ರಿಂದ 7 ತರಗತಿ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಾದ ಕಂಠಪಾಠ, ಕವನ, ಪದ್ಯ, ವಾಚನ, ಕಥೆ ಹೇಳುವುದು, ಕಂಠಪಾಠ-ಇಂಗ್ಲೀಷ್, ಕಂಠಪಾಠ-ಹಿಂದಿ, ಕಂಠಪಾಠ-ಉರ್ದು, ಆಶು ಭಾಷಣ, ಧಾರ್ಮಿಕ ಪಠಣ-ಸಂಸ್ಕೃಂತ, ಧಾರ್ಮಿಕ ಪಠಣ-ಅರೇಬಿಕ್, ಅಭಿನಯ ಗೀತೆ, ಲಘು ಸಂಗೀತ, ಭಕ್ತಿ ಗೀತೆ, ಛದ್ಮವೇಷ, ಮಿಮಿಕ್ರಿ ಸ್ಪರ್ಧೆಗಳು ನಡೆದವು.
8 ರಿಂದ 12 ತರಗತಿ ವಿದ್ಯಾರ್ಥಿಗಳಿಗೆ ಭಾಷಣ-ಕನ್ನಡ, ಕವನ, ಪದ್ಯ, ವಾಚನ, ಭಾಷಣ-ಇಂಗ್ಲಿಷ್, ಚರ್ಚಾ ಸ್ಪರ್ಧೆ, ಆಶು ಭಾಷಣ, ಭಾಷಣ-ಹಿಂದಿ, ಧಾರ್ಮಿಕ ಪಠಣ-ಸಂಸ್ಕೃಂತ, ಭರತನಾಟ್ಯ, ಗಝಲ್ ಧಾರ್ಮಿಕ ಪಠಣ-ಅರೇಬಿಕ್, ಕವ್ವಾಲಿ ಧಾರ್ಮಿಕ ಪಠಣ-ಅರೇಬಿಕ್, ಭಾವಗೀತೆ, ಜಾನಪದ ಗೀತೆ, ಜಾನಪದ ನೃತ್ಯ, ಛದ್ಮವೇಷ, ಮಿಮಿಕ್ರಿ, ಕ್ಷಿಜ್ ಸ್ಪರ್ಧೆಗಳು ಜರುಗಿದವು.ಮದಕರಿ ವಿದ್ಯಾಸಂಸ್ಥೆ ಅಧ್ಯಕ್ಷ ಸಂದೀಪ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್, ಸಮಗ್ರ ಶಿಕ್ಷಣ ಅಭಿಯಾನದ ಸಮನ್ವಯಾಧಿಕಾರಿ ವೆಂಕಟೇಶ್, ಎಸ್‍ಎಸ್‍ಎಲ್‍ಸಿ ನೋಡಲ್ ಅಧಿಕಾರಿ ಎನ್.ಆರ್.ತಿಪ್ಪೇಸ್ವಾಮಿ, ಶಾಲಾ ಶಿಕ್ಷಣ ಇಲಾಖೆ ವಿದ್ಯಾಧಿಕಾರಿ ಸಿದ್ದಪ್ಪ, ಜಿಲ್ಲಾ ಸಹ ಶಿಕ್ಷಕ ಸಂಘದ ಅಧ್ಯಕ್ಷ ಶಿವಣ್ಣ, ತಾಲೂಕು ಸಹ ಶಿಕ್ಷಕ ಸಂಘದ ಅಧ್ಯಕ್ಷ ಬಸವರಾಜಪ್ಪ, ವಿಜ್ಞಾನ ವಿಷಯದ ಪರಿವೀಕ್ಷಕ ಗೋವಿಂದಪ್ಪ, ಗಣಿತ ವಿಷಯದ ಪರಿವೀಕ್ಷಕಿ ಸವಿತಾ, ಕನ್ನಡ ವಿಷಯದ ಪರಿವೀಕ್ಷಕ ಶಿವಣ್ಣ ಇದ್ದರು.