ಬಸವರಾಜ ಸರೂರ
ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಸಂಚಾರ ದಟ್ಟಣೆ ಅಧಿಕವಾಗಿದ್ದು, ಜನರು ಪರದಾಡುವಂತಾಗಿದೆ. ಕೆಲವು ವರ್ಷಗಳ ಹಿಂದೆ ನಗರದ ಮೂರು ಕಡೆಗಳಲ್ಲಿ (ಕೋರ್ಟ ಸರ್ಕಲ್, ಹಲಗೇರಿ ಕ್ರಾಸ್, ಪೊಸ್ಟ್ ಸರ್ಕಲ್) ಸಿಗ್ನಲ್ ದೀಪಗಳನ್ನು ಅಳವಡಿಸಲಾಗಿತ್ತು. ಪ್ರಾರಂಭದ ಕೆಲವು ದಿನಗಳಲ್ಲಿ ಮಾತ್ರ ಕಾರ್ಯನಿರ್ವಹಿಸಿದ ಎರಡು ಕಡೆಯ ಸಿಗ್ನಲ್ ದೀಪಗಳು ನಂತರ ಬಂದ್ ಆಗಿ ವರುಷಗಳೇ ಗತಿಸಿವೆ. ಆ ಪೈಕಿ ಕೋರ್ಟ್ ಬಳಿಯ ಸಿಗ್ನಲ್ ದೀಪ ಕಳೆದ ತಿಂಗಳವರೆಗೂ ಕಾರ್ಯನಿರ್ವಹಿಸಿತ್ತು. ಇಕ್ಕಟ್ಟಾಗಿರುವ ಎಂ.ಜಿ. ರಸ್ತೆ: ನಗರದ ಪ್ರಮುಖ ಮಾರುಕಟ್ಟೆ ಪ್ರದೇಶವಾದ ಎಂ.ಜಿ. ರಸ್ತೆಯಲ್ಲಿಯಂತೂ ಸಂಚಾರ ಪರಿಸ್ಥಿತಿ ಆ ದೇವರಿಗೆ ಪ್ರೀತಿ ಎನ್ನುವಂತಿರುತ್ತದೆ. ಅದರಲ್ಲಿಯೂ ಪ್ರತಿ ಅಮಾವಾಸ್ಯೆ ಮತ್ತು ಪ್ರಮುಖ ಹಬ್ಬದ ದಿನಗಳಲ್ಲಿ ಜನರು ಯಾಕಾದರೂ ಇಲ್ಲಿಗೆ ಬಂದಿದ್ದೇವಪ್ಪಾ ಎಂದುಕೊಳ್ಳುವಂತಾಗುತ್ತದೆ. ಹೂವು ಮಾರಾಟಗಾರರು ರಸ್ತೆ ಬದಿಯಲ್ಲಿಯೇ ನಿಂತು ವ್ಯಾಪಾರ ಮಾಡುವುದರಿಂದ ಸಂಚಾರಕ್ಕೆ ಸಾಕಷ್ಟು ಅಡೆತಡೆಯಾಗುತ್ತದೆ. ವಾಹನ ಸವಾರರು ಮುಂದಕ್ಕೆ ಸಾಗಲು ಪೇಚಾಡಬೇಕಾತ್ತದೆ. ಸಂಚಾರಿ ಪೊಲೀಸರು ಕರ್ತವ್ಯದಲ್ಲಿದ್ದರೂ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಗುತ್ತದೆ. ಸುವ್ಯವಸ್ಥಿತವಲ್ಲದ ಪಾರ್ಕಿಂಗ್: ಎಂ.ಜಿ. ರಸ್ತೆ ಮತ್ತು ಬಸ್ ನಿಲ್ದಾಣದಿಂದ ರೈಲ್ವೆ ಸ್ಟೇಷನ್ ರಸ್ತೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಸ್ವಲ್ಪ ಉತ್ತಮವಾಗಿದೆ. ಬಸ್ ನಿಲ್ದಾಣದಿಂದ ಹರಿಹರ ಕಡೆ ತೆರಳುವ ರಸ್ತೆಯಲ್ಲಿನ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಅಚ್ಚುಕಟ್ಟುತನವಿಲ್ಲ. ರಸ್ತೆಯ ಎರಡೂ ಬದಿಗಳಲ್ಲಿ ವಾಹನ ಸವಾರರು ಮನಸೋಇಚ್ಛೆ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಇದೇ ರಸ್ತೆಯ ಕೆಲವು ಪ್ರತಿಷ್ಠಿತ ಅಂಗಡಿಗಳ ಬಳಿಯಂತೂ ಮಧ್ಯಾಹ್ನ 4ರಿಂದ ರಾತ್ರಿ 9.30ರ ವರೆಗೆ ಪ್ರತಿದಿನ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸಲಾಗಿರುತ್ತದೆ. ಇದರಿಂದ ಈ ರಸ್ತೆ ಮಾರ್ಗವಾಗಿ ತೆರಳುವ ವಾಹನಗಳಾಗಲಿ ಅಥವಾ ಜನರಾಗಲಿ ಮೈಯೆಲ್ಲಾ ಕಣ್ಣಾಗಿ ಮುಂದಕ್ಕೆ ಸಾಗಬೇಕಾಗಿದೆ. ಸ್ವಲ್ಪ ಯಾಮಾರಿದರೂ ಸಾಕು ಅಪಘಾತ ಕಟ್ಟಿಟ್ಟ ಬುತ್ತಿ. ಎಡಿಬಿ ರಸ್ತೆಯಲ್ಲಿಯೂ ಪರಿಸ್ಥಿತಿ ಇದೇ ರೀತಿಯಿದ್ದು, ಅಲ್ಲಿ ಕೂಡ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲವಾಗಿದೆ. ನಗರದಲ್ಲಿನ ಸಂಚಾರ ವ್ಯವಸ್ಥೆ ನಿಯಂತ್ರಣ ತಪ್ಪಿ ಹೋಗಿದೆ. ಕೆಲವು ಕಡೆಗಳಲ್ಲಿ ರಸ್ತೆಯಲ್ಲಿಯೇ ವಾಹನಗಳನ್ನು ಪಾರ್ಕಿಂಗ್ ಮಾಡಲಾಗಿರುತ್ತದೆ. ಹಾಳಾಗಿರುವ ಸಿಗ್ನಲ್ ದೀಪಗಳನ್ನು ಸರಿಪಡಿಸಿ ಕಾರ್ಯನಿರ್ವಹಿಸುವಂತೆ ಮಾಡಬೇಕು ಎಂದು ವಕೀಲರಾದ ಅಶೋಕ ಸೋಮಕ್ಕಳವರ ಹೇಳುತ್ತಾರೆ.ಬಿಸಿಲಿನ ಪ್ರಖರತೆಯಿಂದ ಸಿಗ್ನಲ್ ಕಾರ್ಯಕ್ಷಮತೆ ಕುಂಠಿತಗೊಂಡಿದ್ದು, ಬ್ಯಾಟರಿಗಳು ಕೆಟ್ಟು ಹೋಗಿವೆ. ಕೋರ್ಟ್ ಎದುರಿನ ಸಿಗ್ನಲ್‌ನ ದುರಸ್ತಿಗೆ ಅನುದಾನ ಬಂದಿದೆ. ಸಂಬಂಧಪಟ್ಟ ಗುತ್ತಿಗೆದಾರರು ತ್ವರಿತಗತಿಯಲ್ಲಿ ರಿಪೇರಿ ಮಾಡಲಿದ್ದಾರೆ. ನಗರದ ಸಂಚಾರ ನಿಯಮದಲ್ಲಿ ಸುಧಾರಣೆ ತರುವ ಉದ್ದೇಶದಿಂದ ಹಲಗೇರಿ ಕ್ರಾಸ್, ತಹಸೀಲ್ದಾರ್ ಕಚೇರಿ ಎದುರು ಹೊಸದಾಗಿ ಟ್ರಾಫಿಕ್ ಸಿಗ್ನಲ್ ಅಳವಡಿಸಲು ಅನುದಾನ ಬಂದಿದ್ದು ಆದಷ್ಟು ಶೀಘ್ರ ಕೆಲಸ ಪ್ರಾರಂಭವಾಗಲಿದೆ ಎಂದು ರಾಣಿಬೆನ್ನೂರು ನಗರ ವೃತ್ತದ ಸಿಪಿಐ ಡಾ. ಶಂಕರ ಹೇಳುತ್ತಾರೆ.