ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಬಸವರಾಜ ಹೊರಟ್ಟಿ ಅವರು ವಿಧಾನ ಪರಿಷತ್ ಸದಸ್ಯರಾಗಿ 45 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೊರಟ್ಟಿ ಅಭಿಮಾನಿಗಳ ಬಳಗ ನಗರದ ನೆಹರು ಮೈದಾನದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕಿಕ್ಕಿರಿದು ತುಂಬಿದ್ದ ಮೈದಾನದಲ್ಲಿ ಬರೋಬ್ಬರಿ 25 ನಿಮಿಷಗಳ ಕಾಲ ಮಾತನಾಡಿದ ಸಿದ್ದರಾಮಯ್ಯ, ತಮ್ಮ ಭಾಷಣದುದ್ದಕ್ಕೂ ಹೊರಟ್ಟಿ ಹಾಗೂ ತಮ್ಮ ಸ್ನೇಹದ ಕ್ಷಣಗಳನ್ನು ಮೆಲುಕು ಹಾಕಿದರು.
ಹೊರಟ್ಟಿ ಅವರಿಗೆ ಪಕ್ಷಾತೀತವಾಗಿ ಅಭಿನಂದನೆ ಸಲ್ಲಿಸುತ್ತಿದ್ದೇವೆ. ಇಲ್ಲಿ ಎಲ್ಲ ಪಕ್ಷದವರು ಇದ್ದೇವೆ. ಹೀಗೆ ಎಲ್ಲರೂ ಸೇರಿ ಅಭಿನಂದನೆ ಸಲ್ಲಿಸಬೇಕೆಂದರೆ ಆ ವ್ಯಕ್ತಿ ಅಜಾತಶತ್ರು ಇರಬೇಕು. ಸ್ನೇಹಜೀವಿಯಾಗಿರಬೇಕು. ಎಲ್ಲರೊಂದಿಗೆ ಹೊಂದಿಕೊಂಡು ಹೋಗುವಂತಹ ಮನಸ್ಥಿತಿ ಇರಬೇಕು. ಅಂದಾಗ ಮಾತ್ರ ಎಲ್ಲರೂ ಸೇರುತ್ತೇವೆ, ಅಭಿನಂದನೆ ಸಲ್ಲಿಸುತ್ತೇವೆ. ಈ ಎಲ್ಲ ಗುಣಗಳು ಹೊರಟ್ಟಿ ಅವರಲ್ಲಿ ಉಂಟು. ಹೀಗಾಗಿ, ಎಲ್ಲರೂ ಸೇರಿ ಅಭಿನಂದಿಸುತ್ತಿದ್ದೇವೆ ಎಂದರು.ಎರಡು ತರಹದ ಮನುಷ್ಯರನ್ನು ಕಾಣುತ್ತೇವೆ. ಹುದ್ದೆ, ಅಧಿಕಾರದಿಂದ ವ್ಯಕ್ತಿತ್ವ ರೂಪಿಸಿಕೊಳ್ಳುವವರು ಒಂದು ಬಗೆಯಾದರೆ, ಇನ್ನೊಂದು ಬಗೆ, ಯಾರು ಯಾವ ಹುದ್ದೆ ಅಥವಾ ಸ್ಥಾನಕ್ಕೆ ಹೋಗುತ್ತಾರೋ ಆ ಹುದ್ದೆಯ ಹಿರಿಮೆ ಹೆಚ್ಚಿಸುತ್ತಾರೆ. ಹೊರಟ್ಟಿ ಅವರದು ಎರಡನೆಯ ಬಗೆಯ ವ್ಯಕ್ತಿತ್ವ. ಯಾವ ಹುದ್ದೆಯನ್ನು ಹೊರಟ್ಟಿ ಅವರು ಅಲಂಕರಿಸಿದ್ದಾರೋ ಆ ಹುದ್ದೆಯ ಹಿರಿಮೆಯನ್ನು ಅವರು ಹೆಚ್ಚಿಸಿದವರು ಎಂದು ಬಣ್ಣಿಸಿದರು.
ಹಿಂದೆ ಜನತಾ ಪರಿವಾರ ಇಬ್ಭಾಗವಾದಾಗ ಸಂಯುಕ್ತ ಜನತಾದಳ ಹಾಗೂ ಜಾತ್ಯತೀತ ಜನತಾದಳಗಳನ್ನು ಒಂದು ಮಾಡಲು ಹೊರಟ್ಟಿ ಬಹಳಷ್ಟು ಶ್ರಮಿಸಿದ್ದರು. ಅವರ ತೋಟದಲ್ಲೇ ಈ ಬಗ್ಗೆ ಎಲ್ಲರೂ ಒಪ್ಪಿಕೊಂಡಿದ್ದೇವು. ಆದರೆ, ಬೆಂಗಳೂರಿಗೆ ಹೋದ ಬಳಿಕ ಒಮ್ಮತ ಬರಲಿಲ್ಲ. ಹೊರಟ್ಟಿ ಶ್ರಮ ಫಲಕಾರಿಯಾಗಲಿಲ್ಲ ಎಂದು ನೆನಪಿಸಿಕೊಂಡರು.
ಇದಕ್ಕೂ ಮೊದಲು ಲ್ಯಾಮಿಂಗ್ಟನ್ ಸ್ಕೂಲ್‌ನಿಂದ ತೆರೆದ ವಾಹನದಲ್ಲಿ ಬಸವರಾಜ ಹೊರಟ್ಟಿ ಅವರನ್ನು ಮೆರವಣಿಗೆ ಮೂಲಕ ನೆಹರು ಮೈದಾನದ ವೇದಿಕೆಗೆ ಕರೆತರಲಾಯಿತು.