ಹುಬ್ಬಳ್ಳಿ: ರಾಜ್ಯದಲ್ಲಿ ಸರ್ಕಾರಿ ಶಾಲೆಗಳಿಗೆ ಹೆಚ್ಚಾಗಿ ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ಮಕ್ಕಳೇ ಬರುತ್ತಿದ್ದಾರೆ. ಮಕ್ಕಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಿಕ್ಷಣ ಕೊಡಬೇಕು. ಅವರನ್ನು ಪಾಸು ಮಾಡಿಸುವ ಮೂಲಕ ಪೋಷಕರಲ್ಲಿ ವಿಶ್ವಾಸ ಮೂಡಿಸುವ ಕಾರ್ಯವಾಗಬೇಕಿದೆ ಎಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮೀ ಮಹೇಶ ಹೇಳಿದರು.
ಕೊನೆಯ ಸ್ಥಾನ
ಮಕ್ಕಳ ಭವಿಷ್ಯದ ಮೈಲುಗಲ್ಲಾಗಿರುವ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ವಿಶ್ಲೇಷಿಸಿದಾಗ ಕರ್ನಾಟಕ ದೇಶದಲ್ಲೇ ಕೊನೆ ಸ್ಥಾನದಲ್ಲಿರುವುದು ಕಳವಳಕಾರಿ ಸಂಗತಿ. ಈ ಮೂಲಕ ಸಾಕಷ್ಟು ಮಾನವ ಸಂಪನ್ಮೂಲವನ್ನು ಕಳೆದುಕೊಳ್ಳುತ್ತಿದ್ದೇವೆ. ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ಉನ್ನತ ಶಿಕ್ಷಣ, ಖಾಸಗಿ ವಿವಿಗಳು, ಮೆಡಿಕಲ್- ಎಂಜಿನೀಯರಿಂಗ್ ಕಾಲೇಜಗಳನ್ನು ಹೊಂದಿದ್ದು, ಇಲ್ಲಿನ ಸೀಟುಗಳು ರಾಜ್ಯದ ಮಕ್ಕಳಿಗೆ ಸಿಗುತ್ತಿಲ್ಲ. ಇದಕ್ಕೆ ಯಾರು ಹೊಣೆ. ಅನ್ಯ ರಾಜ್ಯಗಳಲ್ಲಿ ಶೇ. 90-95 ರಷ್ಟು ಸಾಧಿಸುವ ಫಲಿತಾಂಶ ನಮ್ಮಲ್ಲೇಕೆ ಆಗುತ್ತಿಲ್ಲ. ಇದಕ್ಕೆ ನಾವೆಲ್ಲರೂ ಹೊಣೆ ಎಂಬ ಅರಿವು ಪ್ರತಿಯೊಬ್ಬ ಶಿಕ್ಷಕರಲ್ಲೂ ಮೂಡಬೇಕಿದೆ. ಟ್ಯೂಷನ್ ಗಳಲ್ಲಿ ಹೇಳಿಕೊಡುವ ತಂತ್ರಗಳನ್ನು ಶಾಲಾ ಮಕ್ಕಳಿಗೂ ತಿಳಿಸುವ ಮೂಲಕ ಕನಿಷ್ಟ ಅಂಕಗಳನ್ನು ಪಡೆದು ಉತ್ತೀರ್ಣರಾಗುವ ಮನೋಸ್ಥೈರ್ಯವನ್ನು ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಮೂಡಿಸಬೇಕಿದೆ ಎಂದರು.
ಸಮಾಜ ಕಲ್ಯಾಣ ಹಾಗೂ ಹಿಂದುವಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಇಲಾಖೆಯಿಂದ ನಡೆಯುತ್ತಿರುವ ಸರ್ಕಾರಿ ಹಾಸ್ಟೆಲ್ ಗಳ ಮಕ್ಕಳ ಫಲಿತಾಂಶ ಕೂಡ ತುಂಬ ಕಡಿಮೆ ಇದೆ. ಆ ಶಾಲೆಗಳ ಶಿಕ್ಷಕರಿಗೂ ಕಾರ್ಯಾಗಾರ ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ, ಜಿಪಂ ಸಿಇಒ ಅವರಿಗೆ ನಿರ್ದೇಶನ ನೀಡಿದರು.ನೂರರಷ್ಟು ಫಲಿತಾಂಶಕ್ಕೆ ಶ್ರಮ
ಅಪರ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಮಾತನಾಡಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ. ಕಲಿಕೆ ಖಾತರಿಪಡಿಸಿಕೊಳ್ಳುತ್ತಿದ್ದೇವೆ. 29 ಅಂಶಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಿದ್ದೇವೆ. ಇದೀಗ ಮಾದರಿ ಪ್ರಶ್ನೆ ಪತ್ರಿಕೆ ಬಿಡಿಸುವಿಕೆ ಸೇರಿ ಇತರ ಅಂಶಗಳನ್ನು ಎಲ್ಲ ಶಿಕ್ಷಕರ ಮೂಲಕ ಮಕ್ಕಳಿಗೆ ತಿಳಿಸಿಕೊಡುತ್ತೇವೆ. ಈ ಮೂಲಕ ಬೆಳಗಾವಿ ವಿಭಾಗ ಮಟ್ಟದಲ್ಲಿ ನೂರರಷ್ಟು ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಸಾಧಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.ಕಲಿಕೆಯ ವಿಶ್ವಾಸ ಮೂಡಿಸಿ
ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಪಠ್ಯಕ್ರಮ ಪೂರ್ಣಗೊಳಿಸುವುದಷ್ಟೇ ಶಿಕ್ಷಕರ ಕೆಲಸವಲ್ಲ. ಮಕ್ಕಳಲ್ಲಿ ಕಲಿಕೆಯ ವಿಶ್ವಾಸ ಮೂಡಿಸಿ ಪರೀಕ್ಷೆ ಪಾಸು ಮಾಡುವ ಸಾಮರ್ಥ್ಯ ಬೆಳೆಸುವುದು ಶಿಕ್ಷಕರ ಜವಾಬ್ದಾರಿ. ಸರ್ಕಸ್‌ನಲ್ಲಿ ಸೈಕಲ್ ತುಳಿಯುವ ಆನೆಯನ್ನು ಪಳಗಿಸಿದ ತರಬೇತಿದಾರನಂತೆ ಶಿಕ್ಷಕರು ಕೆಲಸ ಮಾಡಬೇಕು. ಅಂದಾಗ ಮಾತ್ರ ಮಕ್ಕಳು ಶಿಕ್ಷಣ ಕಲಿಕೆಗೆ ಒಲವು ತೋರುತ್ತಾರೆ ಎಂದರು.ಪ್ರೌಢಶಾಲಾ ಪರೀಕ್ಷಾ ಮಂಡಳಿ ನಿರ್ದೇಶಕ ಪ್ರಕಾಶ ನಿಟಾಲಿ, ಇಲಾಖೆಯ ಹಿರಿಯ ಅಧಿಕಾರಿಗಳಾದ ಗೋಪಾಲಕೃಷ್ಣ, ಈಶ್ವರ ನಾಯಕ, ಜಿಪಂ ಸಿಇಒ ಭುವನೇಶ ಪಾಟೀಲ ದೇವಿದಾಸ, ಜಯಶ್ರೀ ಕಾರೆಕರ, ದೇಶಪಾಂಡೆ ಫೌಂಡೇಶನ್ ಸಿಇಒ ಪಿ.ಎನ್. ನಾಯಕ ಸೇರಿದಂತೆ ಹಲವರಿದ್ದರು. ಡಿಡಿಪಿಐ ಎಸ್.ಎಶ್. ಕೆಳದಿಮಠ ಸ್ವಾಗತಿಸಿದರು.