ಹುಬ್ಬಳ್ಳಿ:
ಈ ನಡುವೆ ಪ್ರವಾಸದ ಖರ್ಚು-ವೆಚ್ಚ, ಆಗಿರುವ ಲಾಭದ ಬಗ್ಗೆ ಎರಡು ದಿನದಲ್ಲಿ ಸಾರ್ವಜನಿಕವಾಗಿ ಬಹಿರಂಗ ಪಡಿಸುವುದಾಗಿ ಮೇಯರ್ ಜ್ಯೋತಿ ಪಾಟೀಲ ಸ್ಪಷ್ಟಪಡಿಸಿದರು.
ಮೇಯರ್ ಜ್ಯೋತಿ ಪಾಟೀಲ ಹಾಗೂ ಆಯುಕ್ತ ಡಾ. ರುದ್ರೇಶ ಘಾಳಿ ನೇತೃತ್ವದಲ್ಲಿ 43 ಜನ ಪಾಲಿಕೆ ಸದಸ್ಯರು, 10 ಅಧಿಕಾರಿ ತಂಡ ಇಂದೋರ್, ಅಹ್ಮದಬಾದ್ ಸೇರಿದಂತೆ ವಿವಿಧೆಡೆ 5 ದಿನ ಪ್ರವಾಸಕ್ಕೆ ತೆರಳಿದ್ದರು. ಇದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪಕ್ಕೊಳಗಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಪಾಲಿಕೆ ಸದಸ್ಯರನ್ನು ತರಾಟೆಗೆ ತೆಗೆದುಕೊಂಡಿದ್ದರು.ಈ ಹಿನ್ನೆಲೆಯಲ್ಲಿ ಮಂಗಳವಾರ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಗಮನ ಸೆಳೆದ ಸದಸ್ಯ ತಿಪ್ಪಣ್ಣ ಮಜ್ಜಗಿ, ಪ್ರವಾಸದ ಉದ್ದೇಶವೇನು? ಖರ್ಚಾಗಿರುವುದೆಷ್ಟು? ಸಾರ್ವಜನಿಕರ ಎದುರಿಗೆ ಬಹಿರಂಗ ಪಡಿಸಿ? ಈ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಪಾಲಿಕೆ ಬಗ್ಗೆ ಅಪಸ್ವರ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.
ರಾಮಪ್ಪ ಬಡಿಗೇರ್ ಮಾತನಾಡಿ, ಪ್ರವಾಸದಿಂದ ಸದಸ್ಯರಿಗೆ ಸಾಕಷ್ಟು ತಿಳಿವಳಿಕೆ ಬರುತ್ತದೆ. ಅಲ್ಲಿ ಯಾವ ರೀತಿ ವ್ಯವಸ್ಥೆ ಇದೆ. ಇಲ್ಲಿ ಏನೆಲ್ಲ ಬದಲಾವಣೆ ಮಾಡಿಕೊಳ್ಳಬಹುದು ಎಂಬುದರ ಅರಿವಾಗುತ್ತದೆ. ಅಲ್ಲಿ ಪೌರಕಾರ್ಮಿಕರ ಸಂಖ್ಯೆ ಹೆಚ್ಚಿದೆ. ಇಲ್ಲಿ ಅಷ್ಟಿಲ್ಲ ಎಂದು ತಿಳಿಸಿದರು.
ಸದಸ್ಯ ವೀರಣ್ಣ ಸವಡಿ ಮಾತನಾಡಿ, ಅನುಷ್ಠಾನವಾದಾಗ ಮಾತ್ರ ಪ್ರವಾಸದ ಉಪಯೋಗವಾಗುತ್ತದೆ. ಆದರೆ ಪಾಲಿಕೆಯಲ್ಲಿ ಯಾವುದೇ ಯೋಜನೆ ಸರಿಯಾಗಿ ಅನುಷ್ಠಾನವಾಗಲ್ಲ. ಯಾವುದೇ ಪಕ್ಷದ ಸರ್ಕಾರವಿದ್ದರೂ ನಮಗೆ ಅನುದಾನ ನೀಡುವುದಿಲ್ಲ. ರಾಜ್ಯ ಸರ್ಕಾರ ನಮಗೆ ಸ್ಪಂದಿಸುತ್ತಲೇ ಇಲ್ಲ. ಇಂದೋರ್‌ನಲ್ಲಿನ ಪರಿಸ್ಥಿತಿ ಇಲ್ಲಿ ಬರಬೇಕೆಂದರೆ ನಮ್ಮ ಕಡೆಯೂ ಇಚ್ಛಾಶಕ್ತಿ ಬೇಕು. ಸರ್ಕಾರವೂ ಸ್ಪಂದಿಸಬೇಕು ಎಂದರು.
ಈ ನಡುವೆ ಅತ್ತ ಪಾಲಿಕೆಯ ಸಾಮಾನ್ಯ ಸಭೆಯೊಳಗೆ ಪ್ರವಾಸದ ಕುರಿತಂತೆ ಬಿಸಿ ಬಿಸಿ ಚರ್ಚೆಯಾಗುತ್ತಿದ್ದರೆ, ಸಭೆಯ ಹೊರಗೆ ಪಾಲಿಕೆ ಪ್ರಾಂಗಣದಲ್ಲಿ ಸದಸ್ಯರ ಪ್ರವಾಸ ಖಂಡಿಸಿ, ಇಂದೋರ್‌ದಲ್ಲಿ ಸದಸ್ಯರು ತೆಗೆಸಿಕೊಂಡ ಫೋಟೋ ಹಾಗೂ ಹುಬ್ಬಳ್ಳಿಯಲ್ಲಿನ ಕಸದ ರಾಶಿಯ ಫೋಟೋ ಹಿಡಿದು ಸಂಜೀವ ದುಮಕನಾಳ ಏಕಾಂಗಿಯಾಗಿ ಧರಣಿ ನಡೆಸಿದರು. ಈ ಮೂಲಕ ಸಾರ್ವಜನಿಕರ ಗಮನ ಸೆಳೆದರು. ನಗರದಲ್ಲಿ ಇಷ್ಟೊಂದು ಸಮಸ್ಯೆಗಳಿದ್ದರೂ, ಪಾಲಿಕೆ ಸದಸ್ಯರು ಅಧ್ಯಯನದ ನೆಪದಲ್ಲಿ ಮಜಾ ಮೋಜು ಮಾಡಿ ಬಂದಿದ್ದಾರೆ ಎಂದು ಟೀಕಿಸಿದರು. ಜತೆಗೆ ಕಸದ ರಾಶಿಯನ್ನು ಚೀಲದಲ್ಲಿ ತುಂಬಿಕೊಂಡು ಬಂದು ಪಾಲಿಕೆ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸಿದರು.