ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ: ಶೇ.86.50ರಷ್ಟು ಮತದಾನ

KannadaprabhaNewsNetwork |  
Published : Oct 24, 2026, 02:00 AM IST
ಬಳ್ಳಾರಿ ನಗರದ ಪ್ರಧಾನ ಅಂಚೆ ಕಚೇರಿ ಬಳಿಯ ಬಾಲಕಿಯರ ಪ್ರೌಢಶಾಲೆಯ ಮತಕೇಂದ್ರದಲ್ಲಿ ಹಕ್ಕು ಚಲಾಯಸಲು ಸಾಲುಗಟ್ಟಿ ನಿಂತಿದ್ದ ಶಿಕ್ಷಕರು.  | Kannada Prabha

ಸಾರಾಂಶ

ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 3,393 ಶಿಕ್ಷಕ ಮತದಾರರಿದ್ದು, ಇವರಲ್ಲಿ 1,814 ಪುರುಷರು ಹಾಗೂ 1,579 ಮಹಿಳೆಯರು ಸೇರಿದ್ದಾರೆ

ಬಳ್ಳಾರಿ: ಈಶಾನ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಗೆ ಶುಕ್ರವಾರ ಜಿಲ್ಲಾದ್ಯಂತ ಶಾಂತಿಯುತವಾಗಿ ಮತದಾನ ನಡೆದಿದ್ದು, ಸಂಜೆ 4 ಗಂಟೆ ವೇಳೆ ಒಟ್ಟು ಶೇ. 86.50 ರಷ್ಟು ದಾಖಲೆಯ ಮತದಾನವಾಗಿದೆ.

ಜಿಲ್ಲೆಯ ಒಂಬತ್ತು ಮತಗಟ್ಟೆಗಳಲ್ಲಿ ಶಿಕ್ಷಕ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಚುನಾವಣಾ ಪ್ರಕ್ರಿಯೆ ಸುಸೂತ್ರವಾಗಿ ನಡೆದಿದೆ.

ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಹಿನ್ನೆಲೆ ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದವು. ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಶಿಕ್ಷಕರ ಮತ ಸೆಳೆಯಲು ವ್ಯಾಪಕ ಪ್ರಚಾರ ನಡೆಸಿದ್ದರು. ಶುಕ್ರವಾರ ನಡೆದ ಮತದಾನದೊಂದಿಗೆ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಇದೀಗ ಎಲ್ಲರ ಚಿತ್ತ ಮತ ಎಣಿಕೆಯತ್ತ ನೆಟ್ಟಿದೆ.

ಬೆಳಗ್ಗೆಯಿಂದಲೇ ಮತದಾನ ಚುರುಕು: ಬಳ್ಳಾರಿ ನಗರದ ಪ್ರಧಾನ ಅಂಚೆ ಕಚೇರಿ ಬಳಿಯ ಬಾಲಕಿಯರ ಪ್ರೌಢಶಾಲೆ ಹಾಗೂ ತಾಲೂಕು ಕಚೇರಿಯ ಮತಗಟ್ಟೆಗಳು ಸೇರಿದಂತೆ ಜಿಲ್ಲೆಯಾದ್ಯಂತ ಒಟ್ಟು ಒಂಬತ್ತು ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಬೆಳಗ್ಗೆಯಿಂದಲೇ ಶಿಕ್ಷಕ ಮತದಾರರು ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಬೆಳಗ್ಗೆ 10 ಗಂಟೆಯ ವೇಳೆಗೆ ಜಿಲ್ಲೆಯಲ್ಲಿ ಶೇ.12.05ರಷ್ಟು ಮತದಾನ ದಾಖಲಾಗಿತ್ತು. ಬಳಿಕ ಮತದಾನದ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ಮಧ್ಯಾಹ್ನ 12 ಗಂಟೆಯ ವೇಳೆಗೆ ಶೇ.42.82ರಷ್ಟು ಮತದಾನವಾಗಿತ್ತು. ದಿನದ ಅಂತ್ಯಕ್ಕೆ ಮತದಾನದ ಪ್ರಮಾಣ ಶೇ.89.08ಕ್ಕೆ ತಲುಪಿದೆ. ಮತದಾನದ ಆರಂಭಿಕ ಎರಡು ಗಂಟೆಗಳಲ್ಲಿ ನಿಧಾನಗತಿಯಲ್ಲಿದ್ದ ಮತದಾನ ಪ್ರಕ್ರಿಯೆ ನಂತರ ಚುರುಕುಗೊಂಡಿತು.

ಕೊನೆ ಹಂತದ ಮತಯಾಚನೆ: ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ವಿಧಾನಪರಿಷತ್ ಸದಸ್ಯ ಶಶಿಲ್ ನಮೋಶಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಶರಣಪ್ಪ ಮಟ್ಟೂರು ಸ್ಪರ್ಧಿಸಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ನಗರದಲ್ಲಿ ಕೊನೆ ಹಂತದ ಚುನಾವಣೆ ಪ್ರಚಾರ ನಡೆಸಿ ತಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿಕೊಳ್ಳುವ ದೃಶ್ಯ ಕಂಡು ಬಂದವು. ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ, ಪಕ್ಷದ ಜಿಲ್ಲಾ ಪ್ರಮುಖರಾದ ಡಾ.ಅರುಣಾ ಕಾಮಿನೇನಿ, ಗುರ್ರಂ ವೆಂಕಟರಮಣ, ಎಸ್.ಮಲ್ಲನಗೌಡ, ಗುತ್ತಿಗನೂರು ವಿರುಪಾಕ್ಷಗೌಡ, ಕೆ.ಎಂ.ಮಹೇಶ್ವರಸ್ವಾಂಇ, ಕೇದಾರಸ್ವಾಮಿ, ಡಾ.ರೇಣುಕಾ ಮಂಜುನಾಥ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ಬೆಣಕಲ್ ಬಸವರಾಜಗೌಡ, ವಿಷ್ಣು ಬೋಯಪಾಟಿ, ಶೋಭಾ ಕಾಳಿಂಗ, ಎಲ್.ಮಾರೆಣ್ಣ ಮತ್ತಿತರರು ಕೊನೆ ಹಂತದ ಮತಯಾಚನೆಯಲ್ಲಿ ತೊಡಗಿದ್ದರು. ಗ್ರಾಮೀಣ ಶಾಸಕ ನಾಗೇಂದ್ರ ನಗರದ ಎರಡು ಮತ ಕೇಂದ್ರಗಳಿಗೆ ಭೇಟಿ ನೀಡಿದರು.

3, 393 ಶಿಕ್ಷಕ ಮತದಾರರು: ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 3,393 ಶಿಕ್ಷಕ ಮತದಾರರಿದ್ದು, ಇವರಲ್ಲಿ 1,814 ಪುರುಷರು ಹಾಗೂ 1,579 ಮಹಿಳೆಯರು ಸೇರಿದ್ದಾರೆ. ಜಿಲ್ಲೆಯ ವಿವಿಧ ಶಾಲಾ-ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಹ ಶಿಕ್ಷಕರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರು. ಚುನಾವಣೆಯ ಹಿನ್ನೆಲೆ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಜಿಲ್ಲೆಯಲ್ಲಿ ಹಲವು ಸುತ್ತಿನ ಪ್ರಚಾರ ನಡೆಸಿದ್ದರು. ಶಿಕ್ಷಕರನ್ನು ನೇರವಾಗಿ ಭೇಟಿಯಾಗಿ ಬೆಂಬಲ ಕೋರಿದ್ದಲ್ಲದೆ, ಶಿಕ್ಷಕರ ವಿವಿಧ ಸಂಘಟನೆಗಳ ಮುಖಂಡರ ಮೂಲಕವೂ ಮತಗಳನ್ನು ಕ್ರೋಡೀಕರಿಸುವ ಪ್ರಯತ್ನ ನಡೆದಿತ್ತು.

ಜಿಲ್ಲೆಯಲ್ಲಿ ಶೇ. 86.50ರಷ್ಟು ಮತದಾನವಾಗಿರುವುದು, ಶಿಕ್ಷಕ ಮತದಾರರು ಚುನಾವಣೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸಿರುವುದಕ್ಕೆ ಸಾಕ್ಷಿಯಾಗಿದೆ. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿರುವುದು ಯಾರಿಗೆ ವರದಾನವಾಗಲಿದೆ, ಯಾರಿಗೆ ಹಿನ್ನಡೆಯಾಗಲಿದೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಆರಂಭವಾಗಿವೆ.

ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಇದೀಗ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಮತ ಎಣಿಕೆಗಾಗಿ ಎದುರು ನೋಡುತ್ತಿದ್ದಾರೆ. ಶಿಕ್ಷಕರ ವಿಶ್ವಾಸ ಗಳಿಸುವಲ್ಲಿ ಯಾರು ಯಶಸ್ವಿಯಾಗಿದ್ದಾರೆ ಎಂಬುದನ್ನು ಚುನಾವಣಾ ಫಲಿತಾಂಶವೇ ನಿರ್ಧರಿಸಲಿದೆ.

ಮತದಾರರ ವಿವರ ಹಾಗೂ ಅಂತಿಮ ಅಂಕಿ-ಅಶ:

ಒಟ್ಟು ನೋಂದಾಯಿತ ಮತದಾರರು: 3,393 (ಪುರುಷರು-1,814, ಮಹಿಳೆಯರು-1,579)

ಚಲಾವಣೆಯಾದ ಒಟ್ಟು ಮತಗಳು: 2,935

ಮತ ಚಲಾಯಿಸಿದ ಪುರುಷರು: 1,615 (ಶೇ.89.08)

ಮತ ಚಲಾಯಿಸಿದ ಮಹಿಳೆಯರು: 1,320 (ಶೇ.83.54)

ಹಂತ-ಹಂತವಾಗಿ ಏರಿಕೆಯಾದ ಮತದಾನದ ಪ್ರಮಾಣ:

ಬೆಳಗ್ಗೆಯಿಂದಲೇ ಮತಗಟ್ಟೆಗಳಿಗೆ ಶಿಕ್ಷಕ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಕಂಡುಬಂತು.

ಬೆಳಿಗ್ಗೆ 10 ಗಂಟೆಗೆ- ಒಟ್ಟು 409 ಮತಗಳು (ಶೇ.12.05) ಚಲಾವಣೆಯಾಗಿದ್ದವು.

ಮಧ್ಯಾಹ್ನ 12 ಗಂಟೆಗೆ- ಮತದಾನದ ಪ್ರಮಾಣ ತೀವ್ರಗತಿಯಲ್ಲಿ ಏರಿಕೆಯಾಗಿ 1,453 ಮತಗಳು (ಶೇ.42.82) ದಾಖಲಾದವು.

ಮಧ್ಯಾಹ್ನ 2 ಗಂಟೆಗೆ- ಮತದಾನ ಪ್ರಮಾಣ 2,333 ಮತಗಳೊಂದಿಗೆ ಶೇ.68.76 ಕ್ಕೆ ತಲುಪಿತು.

ಸಂಜೆ 4 ಗಂಟೆಗೆ (ಅಂತಿಮ ಅವಧಿ)- ಒಟ್ಟು 2,935 ಮತಗಳು ಚಲಾವಣೆಯಾಗುವುದರೊಂದಿಗೆ ಮತದಾನವು ಶೇ.86.50 ತಲುಪಿ ಪೂರ್ಣಗೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಖ್ಯರಸ್ತೆ ಅಗಲೀಕರಣ ವಿಚಾರದಲ್ಲಿ ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ
2 ವರ್ಷದ ಬಾಲಕಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ