ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ: ಮತದಾನಕ್ಕೆ ಬಳ್ಳಾರಿ ಜಿಲ್ಲಾಡಳಿತ ಸಜ್ಜು!

KannadaprabhaNewsNetwork |  
Published : Oct 23, 2026, 01:45 AM IST
( ಈ ವರದಿಗೆ ಜಿಲ್ಲಾಧಿಕಾರಿಗಳ ಫೋಟೋ ಬಳಸಿಕೊಳ್ಳುವುದು)  | Kannada Prabha

ಸಾರಾಂಶ

ಜಿಲ್ಲೆಯ ಒಟ್ಟು ಮತದಾರರ ಪೈಕಿ 1,814 ಪುರುಷರು ಹಾಗೂ 1,579 ಮಹಿಳಾ ಮತದಾರರಿದ್ದಾರೆ

ಬಳ್ಳಾರಿ: ಕರ್ನಾಟಕ ವಿಧಾನ ಪರಿಷತ್‌ನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಅ. 23ರಂದು ಮತದಾನ ನಡೆಯಲಿದ್ದು, ಜಿಲ್ಲೆಯಾದ್ಯಂತ ಶಾಂತಿಯುತ ಹಾಗೂ ಪಾರದರ್ಶಕ ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿ ಒಟ್ಟು 3,393 ಶಿಕ್ಷಕ ಮತದಾರರಿದ್ದು, ಮತದಾನಕ್ಕಾಗಿ 9 ಮತಗಟ್ಟೆ ಸ್ಥಾಪಿಸಲಾಗಿದೆ. ಮತಗಟ್ಟೆಗಳಿಗೆ ಅಗತ್ಯ ಮೂಲಸೌಕರ್ಯ, ಸಿಬ್ಬಂದಿ ನಿಯೋಜನೆ, ಭದ್ರತಾ ವ್ಯವಸ್ಥೆ ಸೇರಿದಂತೆ ಎಲ್ಲ ಪೂರ್ವ ಸಿದ್ಧತೆ ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿ ಕೆ.ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ.

ಜಿಲ್ಲೆಯ ಒಟ್ಟು ಮತದಾರರ ಪೈಕಿ 1,814 ಪುರುಷರು ಹಾಗೂ 1,579 ಮಹಿಳಾ ಮತದಾರರಿದ್ದಾರೆ. 8 ಮುಖ್ಯ ಮತಗಟ್ಟೆಗಳು ಹಾಗೂ ಬಳ್ಳಾರಿ ನಗರದಲ್ಲಿ ಒಂದು ಹೆಚ್ಚುವರಿ ಮತಗಟ್ಟೆ ಸ್ಥಾಪಿಸಲಾಗಿದೆ. ಎಲ್ಲ ಮತಗಟ್ಟೆಗಳ ಭೌತಿಕ ಪರಿಶೀಲನೆ ನಡೆಸಿ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ.

ಬಳ್ಳಾರಿ ನಗರದಲ್ಲೇ 2,203 ಮತದಾರರು: ಜಿಲ್ಲೆಯ ಒಟ್ಟು ಶಿಕ್ಷಕ ಮತದಾರರ ಪೈಕಿ ಬಳ್ಳಾರಿ ನಗರದಲ್ಲಿಯೇ ಅತಿ ಹೆಚ್ಚು ಮತದಾರರಿದ್ದಾರೆ. ನೂತನ ಜಿಲ್ಲಾಡಳಿತ ಭವನದ ತಾಲೂಕು ಕಚೇರಿ ಸಭಾಂಗಣದ ಮತಗಟ್ಟೆಯಲ್ಲಿ 939 ಹಾಗೂ ನಗರದ ಅಂಚೆ ಕಚೇರಿ ಸಮೀಪದ ಸರ್ಕಾರಿ ಬಾಲಕಿಯರ ಜೂನಿಯರ್ ಕಾಲೇಜಿನ ಎರಡು ಮತಗಟ್ಟೆಗಳಲ್ಲಿ 1,264 ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಉಳಿದಂತೆ ಕಂಪ್ಲಿ ಪುರಸಭೆ ಕಚೇರಿಯಲ್ಲಿ 216, ಕುರುಗೋಡು ತಾಲೂಕು ಕಚೇರಿಯಲ್ಲಿ 120, ಸಂಡೂರು ತಾಲೂಕು ಕಚೇರಿಯಲ್ಲಿ 387, ಸಿರುಗುಪ್ಪ ತಾಲೂಕು ಕಚೇರಿಯಲ್ಲಿ 313, ತೆಕ್ಕಲಕೋಟೆ ಪಪಂ ಕಚೇರಿಯಲ್ಲಿ 96 ಹಾಗೂ ಕರೂರು ನಾಡ ಕಚೇರಿಯಲ್ಲಿ 58 ಮತದಾರರು ಮತ ಚಲಾಯಿಸಲಿದ್ದಾರೆ. ಚುನಾವಣಾ ಕಾರ್ಯಕ್ಕಾಗಿ 9 ಪ್ರಮುಖ ಹಾಗೂ 3 ಮೀಸಲು ಸೇರಿದಂತೆ ಒಟ್ಟು 12 ಮತಗಟ್ಟೆ ತಂಡ ನಿಯೋಜಿಸಲಾಗಿದೆ. ಅದೇ ರೀತಿ 9 ಪ್ರಮುಖ ಹಾಗೂ 3 ಮೀಸಲು ಸೇರಿದಂತೆ 12 ಮೈಕ್ರೋ ಅಬ್ಸರ್ವರ್‌ಗಳನ್ನು ನೇಮಕ ಮಾಡಲಾಗಿದೆ. ಚುನಾವಣಾ ಕರ್ತವ್ಯಕ್ಕೆ ನಿಯೋಜಿತ ಸಿಬ್ಬಂದಿಗೆ ಅ.12 ಹಾಗೂ 17ರಂದು ಬಳ್ಳಾರಿಯ ನೂತನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತರಬೇತಿ ನೀಡಲಾಗಿದೆ. ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕಲು ವಿಶೇಷ ನಿಗಾ ತಂಡ ರಚಿಸಲಾಗಿದೆ. ಪ್ರತಿ ಮತಗಟ್ಟೆಗೆ ಎರಡರಂತೆ ಒಟ್ಟು 18 ಮತಪೆಟ್ಟಿಗೆ ಸಿದ್ಧಪಡಿಸಲಾಗಿದೆ. ಚುನಾವಣಾ ಸಾಮಗ್ರಿಗಳ ಸುರಕ್ಷಿತ ಸಾಗಣೆಗೆ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಎಲ್ಲ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್: ಮತದಾನ ಪ್ರಕ್ರಿಯೆಯ ಮೇಲೆ ನಿಗಾ ವಹಿಸಲು ಕಲಬುರಗಿಯ ಚುನಾವಣಾಧಿಕಾರಿಗಳ ಕಚೇರಿ ಮೂಲಕ ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ನೇರ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಮತಗಟ್ಟೆಗಳ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಪ್ರಚಾರ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ. ಮತದಾನ ಮುಗಿದ ಬಳಿಕ ಮತಪೆಟ್ಟಿಗೆಗಳು ಹಾಗೂ ಚುನಾವಣಾ ಸಾಮಗ್ರಿ ಬಳ್ಳಾರಿಯ ಜಿಲ್ಲಾಡಳಿತ ಭವನದ ತಾಲೂಕು ಕಚೇರಿಯಲ್ಲಿ ಸ್ಥಾಪಿಸಿರುವ ಸ್ವೀಕರಣಾ ಕೇಂದ್ರಕ್ಕೆ ತರಲಾಗುವುದು. ಚುನಾವಣೆ ಹಿನ್ನೆಲೆ ಅ.21ರ ಸಂಜೆ 4 ಗಂಟೆಯಿಂದ ಅ.24ರ ಬೆಳಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಬಳ್ಳಾರಿ ನಗರದಲ್ಲೇ ಶೇ.65ರಷ್ಟು ಮತದಾರರು!: ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯ ಒಟ್ಟು 3,393 ಮತದಾರರ ಪೈಕಿ 2,203 ಮಂದಿ ಬಳ್ಳಾರಿ ನಗರ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಮತ ಚಲಾಯಿಸಲಿದ್ದಾರೆ. ಅಂದರೆ ಜಿಲ್ಲೆಯ ಒಟ್ಟು ಮತದಾರರಲ್ಲಿ ಸುಮಾರು ಶೇ. 65ರಷ್ಟು ಮತದಾರರು ನಗರದಲ್ಲಿಯೇ ಕೇಂದ್ರೀಕೃತವಾಗಿದ್ದಾರೆ. ಹೀಗಾಗಿ ಬಳ್ಳಾರಿ ನಗರದ ಮತದಾನಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಉಳಿದ ಆರು ಕೇಂದ್ರಗಳಲ್ಲಿ ಒಟ್ಟು 1,190 ಮತದಾರರಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಮತಗಟ್ಟೆಗೆ ತೆರಳಿದ ಸಿಬ್ಬಂದಿ
ಕಿಮ್ಸ್ ಆಸ್ಪತ್ರೆಗೆ ರೈಲ್ವೆ ಸೇತುವೆ ನಿರ್ಮಾಣಕ್ಕೆ ವರದಿ ಕೇಳಿದ ರೈಲ್ವೆ ಇಲಾಖೆ