ಶಿವಕುಮಾರ ಕುಷ್ಟಗಿ
ಯಾವುದೇ ವಾಣಿಜ್ಯ ಕಟ್ಟಡ ನಿರ್ಮಾಣವಾಗಬೇಕಾದರೆ ಹೆದ್ದಾರಿಯಿಂದ ಇಂತಿಷ್ಟು ಅಂತರವಿರಬೇಕು (ಸೆಟ್ ಬ್ಯಾಕ್) ಎಂಬ ಕಟ್ಟುನಿಟ್ಟಿನ ನಿಯಮವಿದೆ. ಆದರೆ, ಗದಗ ಸಾರಿಗೆ ಸಂಸ್ಥೆಯ ಜಿಲ್ಲಾ ಕಚೇರಿ ಮುಂಭಾಗದ ಹೆದ್ದಾರಿ ಪಕ್ಕ ನಿರ್ಮಿಸಿರುವ ನೂತನ ವಾಣಿಜ್ಯ ಮಳಿಗೆಗಳಿಗೆ ನಿಗದಿತ ಪ್ರಮಾಣದ ಸೆಟ್‌ಬ್ಯಾಕ್ ಬಿಟ್ಟಿಲ್ಲ. ಅವೈಜ್ಞಾನಿಕ ನಿರ್ಮಾಣದಿಂದಾಗಿ ಭವಿಷ್ಯದಲ್ಲಿ ಹೆದ್ದಾರಿ ವಿಸ್ತರಣೆಯಾದಲ್ಲಿ ಈ ಮಳಿಗೆಗಳು ನೆಲಸಮವಾಗುವ ಸಾಧ್ಯತೆ ಇದೆ. ಅಲ್ಲದೆ, ರಸ್ತೆಯ ಪಕ್ಕದಲ್ಲೇ ವಾಹನಗಳ ನಿಲುಗಡೆಗೆ ಜಾಗವಿಲ್ಲದೆ ಸಂಚಾರ ದಟ್ಟಣೆಗೂ ಇದು ಕಾರಣವಾಗಲಿದೆ.
ಸ್ಥಳಾವಕಾಶವಿಲ್ಲ: ಈ ಕಟ್ಟಡ ನಿರ್ಮಾಣದ ಅತಿದೊಡ್ಡ ತಾಂತ್ರಿಕ ಲೋಪವೆಂದರೆ ಅಗ್ನಿ ಸುರಕ್ಷತೆ. ಈ ವಾಣಿಜ್ಯ ಮಳಿಗೆಗಳ ಹಿಂಭಾಗದಲ್ಲಿ ದಶಕಗಳ ಇತಿಹಾಸವಿರುವ ಸಾರಿಗೆ ಸಂಸ್ಥೆಯ ಹಳೆಯ ಕಚೇರಿ ಕಟ್ಟಡವಿದೆ. ಈ ಹಳೆಯ ಕಟ್ಟಡದಲ್ಲಿ ಸಂಸ್ಥೆಯ ಸಾವಿರಾರು ನೌಕರರ ಅತ್ಯಂತ ಪ್ರಮುಖ ಸೇವಾ ದಾಖಲೆಗಳು ಮತ್ತು ಕಡತಗಳನ್ನು ಸಂರಕ್ಷಿಸಿಡಲಾಗಿದೆ.ಹೊಸ ಮಳಿಗೆಯಲ್ಲಿ ಇಕ್ಕಟ್ಟಾದ ಜಾಗ ಬಿಡಲಾಗಿದೆ. ಒಂದೊಮ್ಮೆ ಹಳೆಯ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದರೆ, ಅಗ್ನಿಶಾಮಕ ದಳದ ವಾಹನ ಒಳಗೆ ಪ್ರವೇಶಿಸಲು ದಾರಿಯೂ ಇಲ್ಲದಂತಾಗಿದೆ. ನ್ಯಾಷನಲ್ ಬಿಲ್ಡಿಂಗ್ ಕೋಡ್ (ಎನ್ಬಿಸಿ) ಪ್ರಕಾರ ವಾಣಿಜ್ಯ ಕಟ್ಟಡದ ಸುತ್ತಲೂ ತುರ್ತು ವಾಹನಗಳ ಓಡಾಟಕ್ಕೆ ಮುಕ್ತ ಅವಕಾಶವಿರಬೇಕು. ಆದರೆ ಇಲ್ಲಿ ನಿಯಮಗಳ ಬದಲು ಕಟ್ಟಡವೇ ಎದ್ದು ನಿಂತಿದೆ.
ಆದರೆ, ಗದಗ ನಗರದಲ್ಲಿ ಮಾತ್ರ ಬಸ್ ನಿಲ್ದಾಣದ ಬದಲು ಜಿಲ್ಲಾ ಸಾರಿಗೆ ಕಚೇರಿ ಮುಂದೆ ನಿರ್ಮಿಸಿರುವುದು ಯಾರ ಹಿತಾಸಕ್ತಿಗಾಗಿ ಎಂಬುದು ನಿಗೂಢವಾಗಿದೆ. ಸ್ಥಳೀಯ ಸಾರಿಗೆ ಅಧಿಕಾರಿಗಳಾಗಲಿ ಅಥವಾ ಅನುದಾನ ನೀಡಿದ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗಾಗಲಿ ಈ ಸ್ಥಳ ಬದಲಾವಣೆ ಮತ್ತು ತಾಂತ್ರಿಕ ಲೋಪಗಳ ಬಗ್ಗೆ ಅರಿವಿಲ್ಲದಿರುವುದು ಆಡಳಿತಾತ್ಮಕ ವೈಫಲ್ಯಕ್ಕೆ ಸಾಕ್ಷಿಯಾಗಿದೆ.
ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಪ್ರಾಧಿಕಾರಗಳ ಬೈಲಾ ಹಾಗೂ ಸ್ಥಳೀಯ ಸಂಸ್ಥೆಗಳ ಬೈಲಾಗಳ ಉಲ್ಲಂಘನೆ ಮಾಡಿ ಸೆಟ್‌ಬ್ಯಾಕ್ ಬಿಡದೇ ಕಟ್ಟಡ ನಿರ್ಮಾಣ ಮಾಡಲಾಗಿದೆ. ಅಗ್ನಿ ಅವಘಡ ಸಂಭವಿಸಿದರೆ ಸಾವಿರಾರು ನೌಕರರ ಭವಿಷ್ಯ ನಿರ್ಧರಿಸುವ ದಾಖಲೆಗಳು ಸುಟ್ಟು ಭಸ್ಮವಾಗುವ ಭೀತಿ ಇದೆ. ಕಟ್ಟಡ ಸಿದ್ಧವಾಗಿದೆ. ಟೆಂಡರ್ ಕೂಡ ಕರೆಯಲಾಗಿದೆ. ಆದರೆ ಇದುವರೆಗೂ 6 ತಿಂಗಳು ಕಳೆದರೂ ಉದ್ಘಾಟನೆ ಮಾತ್ರ ಆಗಿಲ್ಲ.