ಲೋಕಸಭೆ ಚುನಾವಣೆ ಅಭ್ಯರ್ಥಿ ಆಗೋದಿಲ್ಲ: ಶಾಸಕ ಶಿವಲಿಂಗೇಗೌಡ ಸ್ಪಷ್ಟನೆ

KannadaprabhaNewsNetwork |  
Published : Jan 21, 2024, 01:38 AM IST
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿದರು | Kannada Prabha

ಸಾರಾಂಶ

ಹಾಸನದಲ್ಲಿ ಕಾಂಗ್ರೆಸ್ ಆಂತರಿಕ ಕಲಹ ತಾರಕಕ್ಕೇರಿದೆ. ಪಕ್ಷದ ನಾಯಕರ ಆರೋಪ, ಪ್ರತ್ಯಾರೋಪ ಮುಂದುವರಿದಿದೆ. ಈಗ ತಾವು ಲೋಕಾಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಸ್ಪಷ್ಟಪಡಿಸಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಹಾಸನದಲ್ಲಿ ಮುಂದುವರೆದ ಕಾಂಗ್ರೆಸ್ ಆಂತರಿಕ ಕಲಹ । ಪಕ್ಷದ ನಾಯಕರ ಆರೋಪ, ಪ್ರತ್ಯಾರೋಪ ಕನ್ನಡಪ್ರಭ ವಾರ್ತೆ ಹಾಸನ

ಹಾಸನದಲ್ಲಿ ಕಾಂಗ್ರೆಸ್ ಆಂತರಿಕ ಕಲಹ ತಾರಕಕ್ಕೇರಿದೆ. ಪಕ್ಷದ ನಾಯಕರ ಆರೋಪ, ಪ್ರತ್ಯಾರೋಪ ಮುಂದುವರಿದಿದೆ. ಈಗ ತಾವು ಲೋಕಾಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಸ್ಪಷ್ಟಪಡಿಸಿದ್ದಾರೆ.

ಜಿಲ್ಲಾ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ‘ರಾಜ್ಯ ನಿಗಮ ಮಂಡಳಿಗೆ ನೇಮಕ ಸಂಬಂಧ ಒಟ್ಟು ೭೫ ಜನರ ಹೆಸರು ಅಂತಿಮವಾಗಿ ಬಂದಿದೆ. ಆದರೆ ಸಿಎಂ ಕಚೇರಿಯಲ್ಲಿ ಅದ್ಯಾಕೊ ತಡವಾಗುತ್ತಿದೆ. ಈ ಹಿಂದೆ ಅರಸೀಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಶಶಿಧರ್ ಅವರಿಂದ ಸ್ಥಾನ ಬಿಡಿಸಿ ಕೊಟ್ಟಿಲ್ಲ. ಯಾರು ಕೂಡ ಅವರ ಸ್ಥಾನವನ್ನು ಬಿಟ್ಟು ಕೊಟ್ಟಿಲ್ಲ. ನಾನು ಪಕ್ಷಕ್ಕೆ ಸೇರ್ಪಡೆ ವೇಳೆ ಅವರು ಮತ್ತೆ ಚುನಾವಣೆಗೆ ನಾನು ನಿಲ್ಲೋದಿಲ್ಲ ಎಂದೇ ಹೇಳಿದರು. ಸ್ವತಃ ನಮ್ಮ ಉಸ್ತುವಾರಿ ಸುರ್ಜೆವಾಲ ಅವರೇ ಶಶಿಧರ್‌ಗೆ ಕರೆ ಮಾಡಿ ಖಾತ್ರಿ ಮಾಡಿಕೊಂಡರು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಜಿಲ್ಲೆಯಲ್ಲಿ ಲಿಂಗಾಯಿತರಿಗೆ ಅನ್ಯಾಯ ಆಯ್ತು ಅಂತೀರಾ! ಲಿಂಗಾಯಿತರಿಗೆ ಟಿಕೆಟ್ ಕೊಡದ ಕಾರಣ ಎರಡು ಮೂರು ಕಡೆ ಸೋಲಾಯ್ತು ಎಂಬ ತಮ್ಮದೇ ಪಕ್ಷದ ನಾಯಕ ಬಿ. ಶಿವರಾಮ್ ಹೇಳಿಕೆ ಸರಿಯಲ್ಲ. ಲಿಂಗಾಯಿತರಿಗೆ ಅನ್ಯಾಯ ಆಗಿದ್ದರೆ ಇವರು ಸ್ಪರ್ಧೆ ಮಾಡಿದ ಬೇಲೂರಿನಲ್ಲೇ ಸ್ಥಾನ ಬಿಟ್ಟು ಕೊಡಬೇಕಿತ್ತು. ಈಗ ಇದ್ದಕ್ಕಿದ್ದ ಹಾಗೆ ಲಿಂಗಾಯಿತರ ಮೇಲೆ ಅಭಿಮಾನ ಉಕ್ಕಿ ಹರಿಯುತ್ತಿದೆ’ ಎಂದು ಬಿ.ಶಿವರಾಂ ಅವರಿಗೆ ತಿರುಗೇಟು ನೀಡಿದರು.

‘ಒಂದು ಕಡೆ ನೀತಿ ಗೆಟ್ಟೋರು ಅಂತೀರಾ, ಇನ್ನೊಂದು ಕಡೆ ನನ್ನನ್ನೇ ಎಂಪಿ ಕ್ಯಾಂಡಿಡೇಟ್ ಆಗಲಿ ಅಂತೀರಾ, ಯಾಕಾಗಿ ಇದನ್ನೆಲ್ಲಾ ಮಾಡುತ್ತಿದ್ದೀರಾ! ಇದನ್ನೇ ನಾನು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನೆ ಮಾಡುತ್ತೆನೆ. ವಲಸೆ ಬಂದೋರು ಅಂತೀರಾಲ್ಲ, ಜಗದೀಶ್ ಶೆಟ್ಟರ್ ಬರದೆ ಹೋಗಿದ್ದರೆ, ಲಕ್ಷ್ಮಣ ಸವದಿ, ನಾನು, ಸೇರಿ ಹಲವರು ಬಂದೆವಲ್ಲ, ಅದರಿಂದ ಪಕ್ಷ ಗೆದ್ದಿದೆ. ಸುಮ್ಮನೆ ನಮ್ಮನ್ನು ವಲಸಿಗರು ನೀತಿಗೆಟ್ಟೋರು ಅಂತಾ ಹೇಳಿದ್ರೆ ಹೇಗೆ? ಸಾರ್ವಜನಿಕವಾಗಿ ಪಕ್ಷದ ಘನತೆ ಹಾಳು ಮಾಡುತ್ತಿದ್ದೀರಿ’ ಎಂದು ಟೀಕಿಸಿದರು.

‘ಬೇಲೂರಲ್ಲಿ ಹೋಗಿ ಹೊಡೆದಾಡಿಸಿದ್ರಿ. ನನ್ನ ಕ್ಷೇತ್ರಕ್ಕೆ ಬಂದು ನನಗೆ ಹೇಳದೆ ಸಭೆ ಮಾಡಿದ್ರಿ. ಇದು ಪಕ್ಷ ಗೆಲ್ಲಿಸೋ ರೀತಿಯಾ? ನನ್ನನ್ನು ಅವಿರೋದವಾಗಿ ಕಳಿಸಿದ್ರು. ನಾನು ಪಾರ್ಲಿಮೆಂಟ್‌ಗೆ ಹೋಗೋದಿಲ್ಲ. ತಾವು ಲೋಕಸಭಾ ಚುನಾವಣೆ ಅಭ್ಯರ್ಥಿ ಆಗೋದಿಲ್ಲ’ ಎಂದು ಶಾಸಕ ಶಿವಲಿಂಗೇಗೌಡ ಹೇಳಿದರು.

‘ಇಂದಿನಿಂದ ಕೊಬ್ಬರಿ ಖರೀದಿಗೆ ನೋಂದಣಿ ಆರಂಭವಾಗಲಿದೆ. ಕೊಬ್ಬರಿ ವರ್ಷವಿಡೀ ಬೆಳೆ ಇರಲಿದೆ. ಆದರೆ ಕೇಂದ್ರ ಸರ್ಕಾರ ಜನವರಿಯಿಂದ ಏಪ್ರಿಲ್‌ವರೆಗೆ ಮಾತ್ರ ಖರೀದಿಗೆ ಅವಕಾಶ ನೀಡಿದೆ. ವರ್ಷವಿಡೀ ಕೊಬ್ಬರಿ ಖರೀದಿಗೆ ಅವಕಾಶ ಸಿಗಬೇಕು ಎಂಬುದು ನಮ್ಮ ಒತ್ತಾಯ. ರಾಜ್ಯದಲ್ಲಿ ಬರಗಾಲ ಇದೆ. ಆದರೆ ಇದುವರೆಗೆ ಕೇಂದ್ರ ಸರ್ಕಾರ ಒಂದು ರುಪಾಯಿ ಹಣ ಬಿಡುಗಡೆ ಮಾಡಿಲ್ಲ. ಇವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎನ್ನಿಸೋದಿಲ್ಲವೇ? ನಮ್ಮ ರಾಜ್ಯದಿಂದ ೪ ಲಕ್ಷ ಕೋಟಿ ರು. ಕೇಂದ್ರಕ್ಕೆ ತೆರಿಗೆ ಸಂಗ್ರಹವಾಗುತ್ತದೆ. ಕಾನೂನಾತ್ಮಕವಾಗಿ ಸಿಗಬೇಕಾದ ಪರಿಹಾರ ನಮಗೆ ಕೊಡಬೇಕು. ಕೇಂದ್ರದಿಂದ ನಿಯೋಗ ಬಂತು, ಅದ್ಯಯನವೂ ಆಯಿತು. ಆದರೆ ಪರಿಹಾರ ನೀಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಮನನ್ನು ಬಿಜೆಪಿಗೆ ಒತ್ತೆ ಇಟ್ಟಿಲ್ಲ

‘ಹಿಂದಿನ ಚುನಾವಣೆಯಲ್ಲಿ ಪುಲ್ವಾಮ ವಿಚಾರ ಇಟ್ಟು ಚುನಾವಣೆ ಗೆದ್ದರು. ಈ ಬಾರಿ ರಾಮ ಮಂದಿರ ಮುಂದಿಟ್ಟು ಚುನಾವಣೆ ಗೆಲ್ಲಲು ಹೊರಟಿದ್ದಾರೆ. ನಾನೂ ರಾಮನ ಪರಮ ಭಕ್ತ. ಹತ್ತಾರು ವರ್ಷ ರಾಮನ ಫೋಟೋ ಇಟ್ಟುಕೊಂಡು ಭಜನೆ ಮಾಡಿದ್ದೇನೆ. ನಾವೇನು ರಾಮನನ್ನು ಬಿಜೆಪಿಗೆ ಒತ್ತೆ ಇಟ್ಟಿಲ್ಲ. ನಾವು ರಾಮನ ಭಕ್ತರೇ ಆಗಿದ್ದೇವೆ. ನಾವೂ ಜೈ ಶ್ರೀರಾಮ್ ಅಂತೀವಿ. ಅಲ್ಲಿ ಅವರು ಉದ್ಘಾಟನೆ ಮಾಡಿದ್ರೆ ನಾವು ಮನೆಯಲ್ಲಿ ಫೋಟೋ ಇಟ್ಟು ಪೂಜೆ ಮಾಡ್ತೇವೆ’ ಎಂದು ಶಾಸಕ ಶಿವಲಿಂಗೇಗೌಡ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ