ಕನ್ನಡಪ್ರಭ ವಾರ್ತೆ ಮಂಡ್ಯ
ಹಿಂದುಳಿದ ವರ್ಗಗಳ ಆಯೋಗದಿಂದ ಸೆ.೨೨ರಿಂದ ಹಮ್ಮಿಕೊಂಡಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಗೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಸೋಮವಾರ ನಗರದ ಹೊಸಹಳ್ಳಿ ಬಡಾವಣೆಯ ಎಚ್.ಸಿ.ಬಸವರಾಜು ಅವರ ಮನೆಯಿಂದ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರ ನಡೆಸುತ್ತಿರುವ ಸಮೀಕ್ಷೆ ಜಾತಿ ಸಮೀಕ್ಷೆಯಾಗಿರುವುದಿಲ್ಲ. ಇದು ಜನರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿ ತಿಳಿಯಲು ಕೈಗೊಂಡಿರುವ ಸಮೀಕ್ಷೆಯಾಗಿದೆ. ಸಮೀಕ್ಷೆದಾರರು ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ನಿಖರ ಮಾಹಿತಿ ನೀಡುವಂತೆ ಮನವಿ ಮಾಡಿದರು.
ಸಮೀಕ್ಷೆದಾರರು ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಸಹನೆಯಿಂದ ವರ್ತಿಸಬೇಕು. ಅವರಿಗೆ ಅರ್ಥವಾಗುವ ರೀತಿ ನೀಡಿರುವ ಪ್ರಶ್ನಾವಳಿಗಳ ಪ್ರಶ್ನೆಯನ್ನು ಕೇಳಿ ಉತ್ತರ ಪಡೆಯಿರಿ ಎಂದರು.ಜಿಲ್ಲೆಯಲ್ಲಿ ೫೨೯೦೩೨ ಕುಟುಂಬಗಳಿದ್ದು, ೪೪೪೬ ಗಣತಿದಾರರನ್ನು ನೇಮಕ ಮಾಡಲಾಗಿದೆ. ಒಬ್ಬ ಗಣತಿದಾರರಿಗೆ ೧೨೦ ಕುಟುಂಬಗಳಂತೆ ಬ್ಲಾಕ್ ಹಂಚಿಕೆ ಮಾಡಲಾಗಿದೆ. ೨೦ ಗಣತಿದಾರರಿಗೆ ಒಬ್ಬ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ ಎಂದರು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಮನೆಯ ಮುಖ್ಯಸ್ಥರ ಹೆಸರು, ತಂದೆ-ತಾಯಿಯ ಹೆಸರು, ಮನೆ ವಿಳಾಸ ಮೊಬೈಲ್ ಸಂಖ್ಯೆ, ರೇಷನ್ ಕಾರ್ಡ್ ಸಂಖ್ಯೆ ಆಧಾರ್ ಸಂಖ್ಯೆ, ಮತದಾರರ ಗುರುತಿನ ಚೀಟಿ ಸಂಖ್ಯೆ, ಕುಟುಂಬದ ಒಟ್ಟು ಸದಸ್ಯರು, ಧರ್ಮ, ಜಾತಿ, ಉಪಜಾತಿ, ಜಾತಿ ವರ್ಗ, ಜಾತಿ ಪ್ರಮಾಣ ಪತ್ರ, ಪ್ರಮಾಣ ಪತ್ರ ಸಂಖ್ಯೆ, ಜನ್ಮ ದಿನಾಂಕ, ವಯಸ್ಸು, ಲಿಂಗ, ವೈವಾಹಿಕ ಸ್ಥಿತಿ ಜನ್ಮಸ್ಥಳ, ವಿದ್ಯಾಭ್ಯಾಸದ ಮಟ್ಟ, ಮನೆಯ ಮುಖ್ಯ ಉದ್ಯೋಗ ಹೀಗೆ ಒಟ್ಟು ೬೦ ಪ್ರಶ್ನೆಗಳನ್ನು ಕೇಳಲಾಗುವುದು ಎಂದು ರಾಜ್ಯ ಸಂಪನ್ಮೂಲ ಅಧಿಕಾರಿ ಚಂದ್ರಶೇಖರ್ ಅವರು ವಿವರಿಸಿದರು.ಇದೇ ಸಂದರ್ಭದಲ್ಲಿ ಶಾಸಕ ಪಿ.ರವಿಕುಮಾರ್, ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಂಜುಳಾ ಇತರರಿದ್ದರು.