ಗುಂಡ್ಲುಪೇಟೆಯಲ್ಲ, ಇದು ಕಸದ ‘ಪೇಟೆʼ..?

KannadaprabhaNewsNetwork | Published : Dec 17, 2023 1:45 AM

ಸಾರಾಂಶ

ಗುಂಡ್ಲುಪೇಟೆಯ ಪಟ್ಟಣದ ಬಳಿ ತ್ಯಾಜ್ಯದ ರಾಶಿ ಬಿದ್ದಿದೆ. ಶಿವಾನಂದ ವೃತ್ತದ ಬಳಿ (ಚಾಮರಾಜನಗರ ರಸ್ತೆ) ಪ್ಲಾಸ್ಟಿಕ್‌ ತ್ಯಾಜ್ಯ ಚಾಮರಾಜನಗರ ಕಡೆಯಿಂದ ಬರುವ ಜನರಿಗೆ ಸ್ವಾಗತ ಕೋರುತ್ತಿದೆ. ಸಾರ್ವಜನಿಕರು, ಸವಾರರು ಮೂಗು ಮುಚ್ಚಿ ಓಡಾಡುವ ಸ್ಥಿತಿ ಇದೆ.

ಶಿವಾನಂದ ವೃತ್ತದ ಬಳಿ ತ್ಯಾಜ್ಯದಿಂದಲೇ ಸ್ವಾಗತ । ಶಾಸಕರ ಸಭೆ ನಡೆದರೂ ನಿರ್ಣಯ ಪುಸ್ತಕದಲ್ಲಿ ಮಾತ್ರ । ಸಭೆಗಳು ನಡೆದರೂ ಕ್ರಮ ಇಲ್ಲಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಗುಂಡ್ಲುಪೇಟೆ ಪಟ್ಟಣದಲ್ಲಿ ನಮ್ಮ ನಡೆ ಗುಂಡ್ಲುಪೇಟೆ ಸ್ವಚ್ಛತೆ ಕಡೆಗೆ ಜಾಗೃತಿ ಅಭಿಯಾನ ನಡೆಯುತ್ತಿದೆ. ಮತ್ತೊಂದೆಡೆ ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ ಕಸ ಹಾಗೂ ಪ್ಲಾಸ್ಟಿಕ್‌ ತ್ಯಾಜ್ಯ ಬಿದ್ದಿದೆ.

ಇನ್ನೊಂದೆಡೆ ಪಟ್ಟಣದ ಶಿವಾನಂದ ವೃತ್ತದ ಬಳಿ (ಚಾಮರಾಜನಗರ ರಸ್ತೆ) ಪ್ಲಾಸ್ಟಿಕ್‌ ತ್ಯಾಜ್ಯ ಚಾಮರಾಜನಗರ ಕಡೆಯಿಂದ ಬರುವ ಜನರಿಗೆ ಸ್ವಾಗತ ಕೋರುತ್ತಿದೆ. ಅದು ಗಾಳಿ ಬಂದರೆ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು, ಬೈಕ್‌ ಸವಾರರ ಮೈ ಮೇಲೆಲ್ಲ ರಾಚುತ್ತಿದೆ.

ಪುರಸಭೆಯಲ್ಲಿ ಆಡಳಿತಾಧಿಕಾರಿಗಳು, ಪುರಸಭೆ ಮುಖ್ಯಾಧಿಕಾರಿಗಳು ಇದ್ದರೂ ಪಟ್ಟಣದಲ್ಲಿ ಸ್ವಚ್ಛತೆ ಕಡೆ ಹೆಚ್ಚಿನ ಗಮನ ಹರಿಸುತ್ತಿಲ್ಲ.ಜೊತೆಗೆ ಪಟ್ಟಣದ ಬಹುತೇಕ ಪಟ್ಟಣದೊಳಗಿನ ರಸ್ತೆಗಳಲ್ಲಿ ಕಸದ ರಾಶಿ ಬಿದ್ದು ಒದ್ದಾಡುತ್ತಿದೆ.

ಪಟ್ಟಣದ ಹಳ್ಳದ ಕೇರಿಯ ಬಹುತೇಕ ರಸ್ತೆಗಳಲ್ಲಿ ಕಸ, ಕಡ್ಡಿಗಳೊಂದಿಗೆ ಪ್ಲಾಸ್ಟಿಕ್‌ ಬಿದ್ದಿದೆ. ಬಿಡಾಡಿಗಳು, ಜಾನುವಾರು ಹೆದ್ದಾರಿಯಲ್ಲಿ ಬಿದ್ದು ಒದ್ದಾಡುತ್ತಿದೆ. ಹೆದ್ದಾರಿಯ ಬೀದಿ ದೀಪ ಉರಿಯುತ್ತಿಲ್ಲ. ಒಳ ಚರಂಡಿಯ ಮ್ಯಾನ್‌ ಹೋಲ್‌ಗಳು ಕೆಲ ಕಡೆ ತುಂಬಿ ತುಳುಕುತ್ತಿದ್ದರೂ ಈ ಬಗ್ಗೆ ಪುರಸಭೆ ಅಧಿಕಾರಿಗಳು ಗಮನಕ್ಕೆ ಹರಿಸುತ್ತಿಲ್ಲ ಎಂದು ನಾಗರಿಕರು ದೂರಿದ್ದಾರೆ.

ಕಾಟಾಚಾರದ ಸಭೆ

ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಅಧ್ಯಕ್ಷತೆಯಲ್ಲಿಯೇ ಪುರಸಭೆ ಆಡಳಿತಾಧಿಕಾರಿ ಹಾಗೂ ಪುರಸಭೆ ಮುಖ್ಯಾಧಿಕಾರಿಗಳು, ಪುರಸಭೆ ಸದಸ್ಯರು ಹಾಜರಿದ್ದ ಪುರಸಭೆ ಕಚೇರಿಯಲ್ಲ್‌ ಸಭೆಗಳು ನಡೆದಿವೆ. ಆದರೆ ಸಭೆಯಲ್ಲಾದ ತೀರ್ಮಾನಗಳು ಪುಸ್ತಕದಲ್ಲಿ ಮಾತ್ರ ಉಳಿದಿವೆ ಎಂದು ಪಟ್ಟಣದ ಜನರು ವ್ಯಂಗ್ಯವಾಡಿದ್ದಾರೆ.

ಪುರಸಭೆ ಆಡಳಿತಾಧಿಕಾರಿ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಪಟ್ಟಣದ ಬಗ್ಗೆ ಕಾಳಜಿ ಇಲ್ಲ ಎಂಬುದು ಜಗಜ್ಜಾಹೀರಾಗಿದೆ. ಶಾಸಕರು ಇನ್ನಾದರೂ ತಾವೇ ಅಧ್ಯಕ್ಷತೆ ವಹಿಸಿದ್ದ ಪುರಸಭೆಯ ಸಭೆಯಲ್ಲಾದ ತೀರ್ಮಾನಗಳು ಕಾರ್ಯರೂಪಕ್ಕೆ ಬಂದಿದೆಯಾ ಎಂದು ಪ್ರಶ್ನಿಸಲಿ ಎಂದು ಜನರು ಒತ್ತಾಯಿಸಿದ್ದಾರೆ.

ಪಟ್ಟಣದಲ್ಲಿ ಸ್ವಚ್ಛತೆ, ಬೀದಿ ದೀಪ, ಕುಡಿವ ನೀರಿನ ಸಂಬಂಧ ಪುರಸಭೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳ ಮಾತಿಗೆ ಕಿಂಚತ್ತು ಬೆಲೆ ಇಲ್ಲ. ಜನಸಾಮಾನ್ಯರ ಮಾತಿಗೆ ಇನ್ನೆಲ್ಲಿ ಬೆಲೆ ಸಿಗುತ್ತದೆ? ಜಿಲ್ಲಾಧಿಕಾರಿ ಪುರಸಭೆ ಬಗ್ಗೆ ಗಮನ ಹರಿಸಲಿ.

ಹೀನಾ ಕೌಶರ್‌, ಪುರಸಭೆ ಸದಸ್ಯೆ.

ಗುಂಡ್ಲುಪೇಟೆ ಪಟ್ಟಣದ ಶಿವಾನಂದ ವೃತ್ತದ ಚಾಮರಾಜನಗರ ರಸ್ತೆಯಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯಗಳು ಗುಂಡ್ಲುಪೇಟೆಗೆ ಬರುವ ಜನರನ್ನು ಸ್ವಾಗತಿಸುತ್ತಿವೆ.

ಗುಂಡ್ಲುಪೇಟೆ ಹಳೇ ಆಸ್ಪತ್ರೆಯ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿರುವ ಕಸದ ರಾಶಿ.

ಗುಂಡ್ಲುಪೇಟೆ ಪಟ್ಟಣದ ಕೆಆರ್‌ಸಿ ರಸ್ತೆಯಲ್ಲಿ ಚರಂಡಿ ಕಸ ರಸ್ತೆಯ ಮೇಲೆ ಬಿದ್ದಿರುವುದು.

Share this article