ಮೂರಲ್ಲ, ವೀರಶೈವ ಲಿಂಗಾಯತ ಒಂದೇ ಕುಟುಂಬ: ರಮೇಶ್‌

KannadaprabhaNewsNetwork | Updated : Dec 27 2023, 01:32 AM IST

ಸಾರಾಂಶ

ವೀರಶೈವ ಲಿಂಗಾಯತರ ಕುರಿತು ವಿಜಾಪುರ ಶಾಸಕ ಬಸನಗೌಡಾ ಯತ್ನಾಳ ನೀಡಿದ ಹೇಳಿಕೆಯನ್ನು ಲಿಂಗಾಯತ ಮಹಾಸಭಾ ಖಂಡಿಸಿದ್ದು, ವೀರಶೈವ ಲಿಂಗಾಯತ ಮೂರಲ್ಲ ಒಂದೇ ಪರಿವಾರ ಎಂದು ಹೇಳಿದೆ

ದಾವಣಗೆರೆ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಮ್ಮಿಕೊಂಡಿದ್ದ 24ನೇ ಮಹಾ ಅಧಿವೇಶನದಲ್ಲಿ ಮೂರು ಮನೆಯಲ್ಲ, ಒಂದೇ ಮನೆ. ಅದೂ ವೀರಶೈವ ಲಿಂಗಾಯತ ಮನೆ ಎಂಬುದನ್ನು ಮಹಾ ಅಧಿವೇಶನವನ್ನು ಟೀಕಿಸಿದ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅರಿಯಲಿ ಎಂದು ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಜೆ.ರಮೇಶ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಸವನಗೌಡ ಪಾಟೀಲ್ ಯತ್ನಾಳ ಟೀಕಿಸಿರುವಂತೆ ಏನೂ ಆಗಿಲ್ಲ. ಇದನ್ನು ಸಮಾಜದ ಹಿರಿಯ ಮುಖಂಡರಾದ ಬಸವಗೌಡ ಪಾಟೀಲ್ ಯತ್ನಾಳ್ ಅರಿಯಲಿ ಎಂದರು.

ವೇದಿಕೆಗಳಲ್ಲಿ ಬಸವಾದಿ ಶರಣ-ಶರಣೆಯರು, ಶರಣರ ವಚನಗಳನ್ನು ಪ್ರಸ್ತಾಪಿಸುವ ಯತ್ನಾಳ್ ನಿಜ ಬದುಕಿನಲ್ಲೂ ವಚನದ ಸಾರಗಳನ್ನು ಅರಿತು, ಬಾಳಬೇಕು. ಕಳ ಬೇಡ, ಕೊಲ ಬೇಡ, ಹುಸಿಯ ನುಡಿಯಲು ಬೇಡ ಎಂಬ ಬಸವಣ್ಣನ ವಚನದಂತೆ ಯತ್ನಾಳ್‌ರಂತಹವರು ಬಾಳಿ, ಇತರರಿಗೂ ಆದರ್ಶವಾಗಬೇಕು ಎಂದು ತಿರುಗೇಟು ನೀಡಿದರು.

ಯತ್ನಾಳ್‌ಗೆ ಒಂದು ಕಡೆ ಸ್ವಪಕ್ಷದ ನಾಯಕರ ಮೇಲೆ ಪ್ರೀತಿ ಇಲ್ಲದಂತೆ, ಸ್ವಜಾತಿ ನಾಯಕರ ಮೇಲೂ ವಿಶ್ವಾಸವಿಲ್ಲದಂತೆ ಮಾತನಾಡುತ್ತಾರೆ. ಯತ್ನಾಳ್‌ಗೆ ಸ್ವತಃ ತಮ್ಮ ಮೇಲೆಯೇ ಗೌರವ, ಅಭಿಮಾನ, ನಂಬಿಕೆ ಇದ್ದಂತಿಲ್ಲ. ನಮಗೊಂದು ಅನುಮಾನವೂ ಕಾಡುತ್ತಿದೆ. ಯಾರನ್ನೂ ಒಪ್ಪದ ನೀವು ನಿಮ್ಮನ್ನು ನೀವೇ ಒಪ್ಪುತ್ತೀರಾ? ಈ ಬಗ್ಗೆ ನಿಮ್ಮ ಮನೆಸ್ಸಿಗೆ ನೀವೇ ಪ್ರಶ್ನೆ ಕೇಳಿಕೊಳ್ಳಿ. ಸಮಾಜ ಸಂಘಟಿಸುವ ಬುದ್ಧಿಯನ್ನು ದೇವರು ನಿಮಗೆ ನೀಡಲಿ ಎಂದು ಅವರು ತಿಳಿಸಿದರು.

ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ತಮ್ಮ 93ನೇ ವಯಸ್ಸಿನಲ್ಲೂ ಪ್ರತಿಯೊಬ್ಬ ಕಾರ್ಯಕರ್ತರಿಗೂ ಸಲಹೆ, ಸೂಚನೆ ನೀಡುತ್ತಾ ಮಹಾಸಭಾದ ಎಲ್ಲಾ ಘಟಕಗಳು, ಸಮಾಜ ಒಳ ಪಂಗಡಗಳನ್ನು ಒಗ್ಗೂಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಹಿರಿಯ ನಾಯಕರಿಗೆ ಶಕ್ತಿ ತುಂಬುವ ಕೆಲಸ ನಿಮ್ಮಂತಹ ಯುವ ನಾಯಕರಿಂದ ಆಗಬೇಕೆ ಹೊರತು ಮಹಾಧಿವೇಶನದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವುದಲ್ಲ ಎಂದು ಅವರು ಸಲಹೆ ನೀಡಿದರು.

ಮಹಿಳಾ ಘಟಕದ ಅಧ್ಯಕ್ಷೆ ಶುಭಾ ಐನಳ್ಳಿ, ಪ್ರಧಾನ ಕಾರ್ಯದರ್ಶಿ ಪುಷ್ಪಾ ವಾಲಿ ಇತರರು ಇದ್ದರು.

ಹಗುರ ಮಾತು ಖಂಡನೀಯ: ಸಮಾಜದ ನಾಯಕರಾದ ಡಾ.ಶಾಮನೂರು ಶಿವಶಂಕರಪ್ಪ, ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಮುತ್ಸದ್ದಿ ನಾಯಕರ ಬಗ್ಗೆ ಯಾರೇ ಹಗುರ ಮಾತನಾಡಿದರೂ ಅದು ಖಂಡನೀಯ ಎಂದು ಚಿತ್ರ ನಿರ್ಮಾಪಕ, ಮಹಾಸಭಾದ ರಾಜ್ಯ ಕಾರ್ಯ ನಿರ್ವಾಹಕ ಉಮೇಶ ಬಣಕಾರ್ ಹೇಳಿದರು. ಬಿಎಸ್‌ವೈ ಬಗ್ಗೆ ಪದ ಬಳಕೆ ಕೇಂದ್ರದ ಮಾಜಿ ಸಚಿವರೂ ಆದ ಬಸವನಗೌಡ ಪಾಟೀಲ್‌ ಯತ್ನಾಳ್‌ರಿಗೆ ಶೋಭೆ ತರುವುದಿಲ್ಲ. ಈಗಷ್ಟೇ ಸಿನಿಮಾ ಶುರುವಾಗಿದೆ. ಇದು ಇನ್ನೂ ಟ್ರೈಲರ್ ಅಷ್ಟೇ. ಸಿನಿಮಾ ಇನ್ನೂ ಇದೆ. ಯತ್ನಾಳ್‌ರಿಗೆ ಸ್ವತಃ ಶಾಮನೂರು ಶಿವಶಂಕರಪ್ಪನವರಿಗೆ ತಿಳಿ ಹೇಳುವ ಮೂಲಕ ಸಮಾಜ ಸಂಘಟನೆ, ಸಮಾಜದ ಬಲವರ್ಧನೆಗೆ ಕೈಜೋಡಿಸುವಂತೆ ಮನ ಪರಿವರ್ತಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

Share this article