ರಾಮನಗರ: ನನಗೆ ವಯಸ್ಸಾಗಿದೆ ನಿಜ. ಆದರೆ, ಬಡ ಜನರ ಕಷ್ಟಕ್ಕೆ ಸ್ಪಂದಿಸುವ ತುಡಿತಕ್ಕೆ ಮತ್ತು ರಾಜಕಾರಣದ ಅನುಭವಕ್ಕೆ ಇನ್ನೂ ವಯಸ್ಸಾಗಿಲ್ಲ. ಬೀಡಿ ಕಾರ್ಮಿಕರಿಗೆ ಅಸಲಿ ಹಕ್ಕುಪತ್ರ ಸಿಗುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅವರಿಗೆ ಕೆಪಿಸಿಸಿ ಉಪಾಧ್ಯಕ್ಷ ಹಾಜಿ ಸೈಯದ್ ಜಿಯಾವುಲ್ಲಾ ತಿರುಗೇಟು ನೀಡಿದರು.
ಬೀಡಿ ಕಾರ್ಮಿಕರು ತ್ರಿಶಂಕು ಸ್ಥಿತಿಗೆ ಸಿಲುಕಲು ನಗರಸಭೆಯಲ್ಲಿ ಆಡಳಿತ ನಡೆಸುತ್ತಿರುವವರು ಕಾರಣವೇ ಹೊರತು ಮತ್ಯಾರು ಅಲ್ಲ. ರಾಜೀವ್ ಗಾಂಧಿ ವಸತಿ ನಿಗಮವು 489 ಹಕ್ಕುಪತ್ರಗಳನ್ನು ನಗರಸಭೆಗೆ ಹಸ್ತಾಂತರ ಮಾಡಿತ್ತು. ಇದರಲ್ಲಿ 35 ಫಲಾನುಭವಿಗಳು 40 ಸಾವಿರ ಸಾಲ ಮರುಪಾವತಿಸಿದ ಕಾರಣ ಹಕ್ಕುಪತ್ರವನ್ನು ನೇರವಾಗಿ ವಿತರಿಸಲಾಗಿದೆ. ಉಳಿದ 454 ಫಲಾನುಭವಿಗಳು ಸಾಲ ಮರುಪಾವತಿ ಮಾಡಿದ ಮೇಲೆ ಹಕ್ಕುಪತ್ರಗಳನ್ನು ನೀಡುವಂತೆ ನಗರಸಭೆ ಕಚೇರಿಗೆ ಹಸ್ತಾಂತರ ಮಾಡಿದ್ದರು.
ಈ ಮಧ್ಯೆ ರಾಜ್ಯಸರ್ಕಾರವೇ ಫಲಾನುಭವಿಗಳ 40 ಸಾವಿರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಿತು. ಆದರೂ, ನಗರಸಭೆ ಹಕ್ಕುಪತ್ರಗಳನ್ನು ನೀಡಲು ವಿಳಂಬ ಧೋರಣೆ ಅನುಸರಿಸಿತು. ಅಸಲಿ ಹಕ್ಕುಪತ್ರಗಳು ಕಳುವಾಗಿದೆ ಎಂದು ಸಬೂಬು ಹೇಳಿ ನಗರಸಭೆ ಅಧಿಕಾರಿಗಳು, ನನ್ನಲ್ಲಿದ್ದ ಜೆರಾಕ್ಸ್ ಪ್ರತಿಗಳನ್ನು ಪಡೆದು ಅವುಗಳನ್ನೇ ಕಲರ್ ಜೆರಾಕ್ಸ್ ಮಾಡಿ ಫಲಾನುಭವಿಗಳಿಗೆ ಹಂಚಿ ದಿಕ್ಕು ತಪ್ಪಿಸಿದ್ದಾರೆ. ಇದರಿಂದ ಅಸಲಿ ಹಕ್ಕು ಪತ್ರವೂ ಇಲ್ಲದೆ ಖಾತೆಯನ್ನು ಮಾಡಿಸಿಕೊಳ್ಳಲಾಗದ ಸ್ಥಿತಿಯಲ್ಲಿ ಬಡವರು ಸಿಲುಕಿದ್ದಾರೆ ಎಂದು ಕಿಡಿಕಾರಿದರು.ವಿವೇಚನ ರಹಿತ ಮಾತು ಹಾಸ್ಯಾಸ್ಪದ:
ಬೀಡಿ ಕಾರ್ಮಿಕರ ಹಕ್ಕು ಪತ್ರಗಳ ವಿಚಾರವಾಗಿ ಶಾಸಕ ಇಕ್ಬಾಲ್ ಹುಸೇನ್ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸುತ್ತೇನೆ. ಶಾಸಕರು ನನ್ನೊಂದಿಗೆ ಸಂಬಂಧಿಸಿದ ಸಚಿವರ ಜೊತೆ ಚರ್ಚಿಸಿದರೆ ಹತ್ತು ನಿಮಿಷಗಳಲ್ಲಿ ಸಮಸ್ಯೆ ಬಗೆಹರಿಯುತ್ತದೆ ಎಂದು ಹೇಳಿದರು.
ಬೀಡಿ ಕಾಲೋನಿಯಲ್ಲಿ ಕೇವಲ ಒಂದು ವಾರ ಮಾತ್ರ ಕಸ ವಿಲೇವಾರಿ ಪ್ರಕ್ರಿಯೆ ನಡೆಯಿತು. ಈಗಲೂ ಅಲ್ಲಿ ಕಸದ ರಾಶಿ ಇದ್ದು, ಜನರು ಅನಾರೋಗ್ಯಪೀಡಿತರಾಗುವ ಭಯದಲ್ಲಿ ಬದುಕು ನಡೆಸುತ್ತಿದ್ದಾರೆ. ಆದರೆ, ನಗರಸಭೆ ಅಧ್ಯಕ್ಷರು ಮಾನವೀಯತೆ ದೃಷ್ಟಿಯಿಂದ ಬೀಡಿ ಕಾಲೋನಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಿರುವುದಾಗಿ ಸುಳ್ಳು ಹೇಳುತ್ತಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಮಹಮ್ಮದ್ ಇಸ್ಮಾಯಿಲ್ , ಮುಖಂಡರಾದ ಅತಾವುಲ್ಲಾ, ಫಲಾನುಭವಿಗಳು ಹಾಗೂ ಬೀಡಿ ಕಾರ್ಮಿಕರ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ ಪದಾಧಿಕಾರಿಗಳು ಇದ್ದರು.
ಶಾಸಕ ಇಕ್ಬಾಲ್ ಹುಸೇನ್ ರಾಮನಗರ ಕ್ಷೇತ್ರದ ಪ್ರಥಮ ಪ್ರಜೆ. ಅವರನ್ನೇ ಸಾರ್ವಜನಿಕವಾಗಿ ನಿಂದಿಸುವಂತೆ ಏರು ಧ್ವನಿಯಲ್ಲಿ ಮಾತನಾಡುವುದು ಎಷ್ಟು ಸರಿ. ಪ್ರತಿಯೊಬ್ಬರಿಗೂ ಅವರದೆ ಆದ ವ್ಯಕ್ತಿತ್ವ ಮತ್ತು ಜನಪ್ರಿಯತೆ ಇರುತ್ತದೆ. ಇದನ್ನು ತಿಳಿದು ಸಾರ್ವಜನಿಕವಾಗಿ ವರ್ತನೆ ಮಾಡಬೇಕು. ಇದು ನಗರದ ಪ್ರಥಮ ಪ್ರಜೆಯಾಗಿರುವ ನಗರಸಭೆ ಅಧ್ಯಕ್ಷರಿಗೆ ಅರಿವಿಲ್ಲದಿರುವುದು ನೋವಿನ ಸಂಗತಿ. ಅವರ ನಡವಳಿಕೆ ರಾಜಕಾರಣಿಗಳಿಗೆ ಶೋಭೆ ತರುವುದಿಲ್ಲ.
31ಕೆಆರ್ ಎಂಎನ್ 3.ಜೆಪಿಜಿ