ಮುಂದಿನ ವರ್ಷ ಮಕ್ಕಳಿಗೆ ನೋಟ್ ಪುಸ್ತಕ : ಸಿಎಂ

KannadaprabhaNewsNetwork |  
Published : Sep 06, 2025, 01:00 AM IST
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿದರು. ಸಚಿವರಾದ ಡಾ.ಎಂ.ಸಿ. ಸುಧಾಕರ್, ಮಧು ಬಂಗಾರಪ್ಪ, ವಿಧಾನ ಪರಿಷತ್ ಸದಸ್ಯರಾದ ರಾಮೋಜಿ ಗೌಡ, ಪುಟ್ಟಣ್ಣ, ಡಿ.ಟಿ ಶ್ರೀನಿವಾಸ್ ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯ ಸರ್ಕಾರಿ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕಗಳ ಜತೆಗೆ ನೋಟ್ ಪುಸ್ತಕಗಳನ್ನೂ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

 ಬೆಂಗಳೂರು :  ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯ ಸರ್ಕಾರಿ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕಗಳ ಜತೆಗೆ ನೋಟ್ ಪುಸ್ತಕಗಳನ್ನೂ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮಾಜಿ ರಾಷ್ಟ್ರಪತಿ ಡಾ। ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ ಅಂಗವಾಗಿ ಶುಕ್ರವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಇತ್ತೀಚೆಗೆ ಮಕ್ಕಳಲ್ಲಿ ಮೊಬೈಲ್ ಗೀಳು ಹೆಚ್ಚಾಗಿ ಓದಿನ ಕಡೆಗೆ ಏಕಾಗ್ರತೆ ಇಲ್ಲದಂತಾಗಿದೆ. ಮಕ್ಕಳ ಚಿತ್ತವನ್ನು ಓದಿನ ಕಡೆ ಸೆಳೆಯಲು ‘ಮೊಬೈಲ್ ಬಿಡಿ, ಪುಸ್ತಕ ಹಿಡಿ ಮತ್ತು ಓದು’ ಕಾರ್ಯಕ್ರಮ ಜಾರಿ ಮಾಡಿದ್ದೇವೆ. ಅದರ ಯಶಸ್ಸಿಗೆ ಎಲ್ಲಾ ಶಿಕ್ಷಕರು ಪ್ರಯತ್ನಿಸಬೇಕು ಎಂದು ಹೇಳಿದರು.

ಪದವಿ ಮತ್ತು ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಒಂದು ಬಾರಿ ವೇತನ ಬಡ್ತಿ ಮತ್ತು ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿಗೆ ಅವಕಾಶ ಕಲ್ಪಿಸಲು ಸಿ ಆ್ಯಂಡ್ ಆರ್ ನಿಯಮ 2017ಕ್ಕೆ ತಿದ್ದುಪಡಿ ತರಲು ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ನಮ್ಮ ಸರ್ಕಾರ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಒದಗಿಸಲು ₹27 ಕೋಟಿ ಒದಗಿಸಿದೆ. ಮಕ್ಕಳಿಗೆ ಹಾಲು, ಮೊಟ್ಟೆ, ರಾಗಿ ಮಾಲ್ಟ್, ಬಿಸಿಯೂಟ, ಶೂ-ಸಾಕ್ಸ್, ವಿದ್ಯಾಸಿರಿ ಕಾರ್ಯಕ್ರಮ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ರಾಜ್ಯ ಸರ್ಕಾರವೂ ಶಿಕ್ಷಣ ಕ್ಷೇತ್ರಕ್ಕೆ ಗರಿಷ್ಠ ಆದ್ಯತೆ ನೀಡುತ್ತಿದೆ. ಶಿಕ್ಷಣ ಇಲಾಖೆಗಳಿಗೆ ₹65,000 ಕೋಟಿ ವಿನಿಯೋಗಿಸುತ್ತಿದೆ. ಬಡವರ ಮಕ್ಕಳು ಸೇರಿ ಎಲ್ಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಪಣ ತೊಡಬೇಕು. ಪ್ರಶಸ್ತಿ ಸ್ವೀಕರಿಸಿದ ಶಿಕ್ಷಕರು ಈ ನಿಟ್ಟಿನಲ್ಲಿ ಹೆಚ್ಚಿನ ಶ್ರಮ ವಹಿಸಬೇಕು. ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಸಿಕ್ಕಾಗ ಮಾತ್ರ ಸಮ ಸಮಾಜ, ಸಮಾನ ಅವಕಾಶಗಳ ಸಾಂವಿಧಾನಿಕ ಆಶಯಗಳು ಈಡೇರಿದಂತಾಗುತ್ತದೆ ಎಂದು ಹೇಳಿದರು.

ಶಿಕ್ಷಕರಾದವರು ಮೌಢ್ಯ ನಂಬಿಕೊಂಡರೆ ಹೇಗೆ? ಶಿಕ್ಷಕರಾದವರು ತಾವು ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡುತ್ತಿದ್ದೇವೆಯೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮಕ್ಕಳಲ್ಲಿ ವೈಜ್ಞಾನಿಕತೆ, ವೈಚಾರಿಕತೆ, ಪರಧರ್ಮ ಸಹಿಷ್ಣುತೆ, ಎಲ್ಲರನ್ನೂ ಗೌರವಿಸುವುದು, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಕಲಿಸಬೇಕು. ಅರಿವಿನ ಕಿಡಿ ಹತ್ತಿಸಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ಮುಂದಿನ ವರ್ಷದಿಂದ ನೈತಿಕ ಶಿಕ್ಷಣವನ್ನು ಪ್ರತ್ಯೇಕ ವಿಷಯವಾಗಿ ಪರಿಚಯಿಸಲಾಗುತ್ತದೆ. ನಮ್ಮ ಸರ್ಕಾರ 18,000 ಶಾಲಾ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 5 ಸಾವಿರ ಶಿಕ್ಷಕರ ನೇಮಕಕ್ಕೆ ಅನುಮೋದನೆ ನೀಡಲಾಗಿದೆ. ಕೆಪಿಎಸ್ ಶಾಲೆಗಳ ಸಂಖ್ಯೆ 800ಕ್ಕೆ ಏರಿಸಲಾಗಿದೆ. ಎಲ್‌ಕೆಜಿ ಶಾಲೆಗಳ ಸಂಖ್ಯೆಯನ್ನು 1,000ದಿಂದ 4,000ಕ್ಕೆ ಏರಿಸಲಾಗಿದೆ. ಶಾಲಾ ಮಕ್ಕಳಿಗೆ ಎಲ್ಲಾ ದಿನಗಳಂದು ಮೊಟ್ಟೆ ನೀಡಲಾಗುತ್ತಿದೆ. 50 ಪಿಯು ಕಾಲೇಜು, ಪ್ರೌಢಶಾಲೆಗಳಿಗೆ ಅನುಮೋದನೆ ನೀಡಲಾಗಿದೆ. ಅಡುಗೆ ಸಿಬ್ಬಂದಿಯ ಗೌರವಧನ ಹೆಚ್ಚಳಕ್ಕೆ ಚಿಂತನೆ ಇದೆ ಎಂದು ತಿಳಿಸಿದರು.

ಉನ್ನತ ಶಿಕ್ಷಣ ಸಚಿವ ಡಾ। ಎಂ.ಸಿ.ಸುಧಾಕರ್ ಮಾತನಾಡಿ, ರಾಜ್ಯ ಶಿಕ್ಷಣ ನೀತಿ ಜಾರಿಗೊಳಿಸುವ ಕುರಿತು ಶೀಘ್ರದಲ್ಲೇ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. 200 ಬೋಧಕರ ನೇಮಕಾತಿ ಕೆಲಸ ಪ್ರಗತಿಯಲ್ಲಿದೆ. ಅನೇಕ ವರ್ಷಗಳಿಂದ ದುಡಿಯುತ್ತಿರುವ ಅತಿಥಿ ಶಿಕ್ಷಕರಿಗೆ ನ್ಯಾಯ ಕೊಡಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯರಾದ ರಾಮೋಜಿ ಗೌಡ, ಪುಟ್ಟಣ್ಣ, ಡಿ.ಟಿ ಶ್ರೀನಿವಾಸ್, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಮಹೇಶ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!