ಶಿವಮೊಗ್ಗ: ಅತ್ಯಂತ ಹಿಂದುಳಿದ ಸಮಾಜ ಎಂದು ಹಣೆಪಟ್ಟಿ ಕಟ್ಟಿಕೊಂಡಿದ್ದ 24 ಮನೆ ಸಾಧುಶೆಟ್ಟಿ ಸಮಾಜ ಈಗ ಎಲ್ಲ ರಂಗಗಳಲ್ಲೂ ಅಭಿವೃದ್ಧಿ ಹೊಂದುವ ಮೂಲಕ ಸಾಧನೆ ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂದು ತೋರಿಸಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದ ಮಿಷನ್ ಕಾಂಪೌಂಡ್ ಬಡಾವಣೆಯಲ್ಲಿ ಸೋಮವಾರ ಶಿವಮೊಗ್ಗ ಜಿಲ್ಲಾ 24ಮನೆ ಸಾಧುಶೆಟ್ಟಿ ಮಹಿಳಾ ಸಂಘದ ವತಿಯಿಂದ ನಿರ್ಮಾಣಗೊಂಡ ಶ್ರೀ ಕಾಮಾಕ್ಷಿ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿ, ಈ ಸಮಾಜದಲ್ಲೀಗ ಎಲ್ಲರೂ ವಿದ್ಯಾವಂತರಾಗುತ್ತಿದ್ದು, ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿರುವುದು ಸಂತೋಷ ತಂದಿದೆ ಎಂದರು.ನಗರದ ಗಣಪತಿ ದೇವಸ್ಥಾನ, ದೊಡ್ಡಮ್ಮ ದೇವಸ್ಥಾನ ಸೇರಿದಂತೆ ಅನೇಕ ದೇವಾಲಯಗಳ ಅಭಿವೃದ್ಧಿಗೆ ಈ ಸಮಾಜ ದುಡಿದಿದೆ. ಕ್ರೀಡೆಯಲ್ಲೂ ಮತ್ತು ಪಠ್ಯೇತರ ಚಟುವಟಿಕೆಗಳಲ್ಲೂ ಈ ಸಮಾಜದ ಯುವಕರು ಮುಂದಿದ್ದಾರೆ. ಸಮಾಜದ ಎಲ್ಲರೂ ಕೈಜೋಡಿಸಿದರೆ ಯಾವುದೂ ಅಸಾಧ್ಯವಲ್ಲ, ಇತ್ತೀಚೆಗೆ ಈ ಸಮಾಜದಿಂದ ಐಎಎಸ್, ಕೆಎಎಸ್ ಕೂಡ ಆಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.ಸಮಾಜದ ಅಧ್ಯಕ್ಷ ಉಮಾಪತಿ ಮಾತನಾಡಿ, ಭಾರಿ ಬಡತನದಲ್ಲಿದ್ದ ಸಮಾಜ ಇದು. ಅಂದು ಕಂಟ್ರ್ಯಾಕ್ಟರ್ ಮುನಿಯಪ್ಪನ ಕುಟುಂಬ ಮತ್ತು ರಾಮಮಂದಿರ ಬಿಟ್ಟರೆ ಬೇರೇನೂ ಇರಲಿಲ್ಲ. ಬಳಿಕ ಸಚಿವ ಈಶ್ವರಪ್ಪ ಅವರು ದೊಡ್ಡಮ್ಮ ದೇವಸ್ಥಾನಕ್ಕೆ ಒಂದು ಕೋಟಿ ರು. ಅನುದಾನ ಬಿಡುಗಡೆಗೊಳಿಸಿದರು. ಅವರು ನಮ್ಮ ಸಮಾಜದ ಮೇಲೆ ಒಂದು ಕಣ್ಣಿಟ್ಟು ಪ್ರತಿಯೊಂದು ಸಂದರ್ಭದಲ್ಲೂ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಾ ಆರ್ಥಿಕ ಅನುದಾನ ಬಿಡುಗಡೆಗೊಳಿಸಿ ಸಹಕರಿಸಿದ್ದಾರೆ. ಸಮಾಜ ಅವರಿಗೆ ಋಣಿಯಾಗಿರುತ್ತದೆ ಎಂದರು.ನಮ್ಮ ಸಮಾಜದ ಮಹಿಳೆಯರಲ್ಲಿ ವಿನಂತಿಸುವುದೇನೆಂದರೆ ನೀವು ಮಕ್ಕಳಿಗೆ ಆಸ್ತಿ ಮಾಡಬೇಡಿ. ವಿದ್ಯಾವಂತರನ್ನಾಗಿ ಮಾಡಿ. ವಿದ್ಯಾವಂತ ಮಕ್ಕಳೇ ದೇಶದ ಆಸ್ತಿ ಎಂದರು.ಸೆ. 28ರಿಂದ ಜಾತಿಗಣತಿ ಸಮೀಕ್ಷೆ ನಡೆಯುತ್ತಿದ್ದು, ನಮ್ಮಲ್ಲಿ ಅನೇಕ ಉಪ ಪಂಗಡಗಳಿವೆ. ರಾಜ್ಯದಲ್ಲಿ ಅತ್ಯಂತ ಕಡಿಮೆ ಸಂಖ್ಯೆಯನ್ನು ಹಿಂದಿನ ಸಮೀಕ್ಷೆ ತೋರಿಸಿತ್ತು. ಈಗ ನಾವೆಲ್ಲರೂ ಒಂದಾಗಿ ಸಾಧುಶೆಟ್ಟಿ ಎಂದೇ ನಮೂದಿಸಬೇಕು ಎಂದು ಕರೆ ನೀಡಿದರು.ಮಹಿಳಾ ಸಂಘದ ಅಧ್ಯಕ್ಷರಾದ ನಾಗರತ್ನ ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಷತ್ ಸದಸ್ಯರಾದ ಡಾ.ಧನಂಜಯ ಸರ್ಜಿ, ಡಿ.ಎಸ್.ಅರುಣ್, ಪ್ರಮುಖರಾದ ವಿ.ರಾಜು, ಎನ್.ರಮೇಶ್, ಶೋಭಾ.ಕೆ.ಆರ್., ಕೇಶವಮೂರ್ತಿ, ಜಿ.ಅಶ್ವಿನಿ, ಆರ್.ಮೋಹನ್ ಕುಮಾರ್, ಎಸ್.ಎಲ್.ಕೃಷ್ಣಮೂರ್ತಿ, ಡಿ.ಗೋವಿಂದರಾಜ್, ನರಸಿಂಹ ಗಂಧದಮನೆ, ಎಸ್. ಶಿವಾನಂದ್, ಡಿ.ಜಿ.ಕಿರಣ್, ಚೈತ್ರಾ ಮೋಹನ್, ಲೀಲಾವತಿ ರಾಮು, ಬಿ.ರಘು, ಸೋಮಶೇಖರ್, ಹಾಗೂ ಸಾಧುಶೆಟ್ಟಿ ಸಮಾಜದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.