ಹಾನಗಲ್ಲ: ಸುಳ್ಳು ಹೇಳಿ ರಾಜಕಾರಣ ಮಾಡಿ ಜನರ ದಾರಿ ತಪ್ಪಿಸುವುದು ಸುಲಭ. ಆದರೆ, ಚುನಾವಣೆಗಾಗಿ ಯಾವುದೇ ಕಾರಣಕ್ಕೂ ಹೀಗೆ ಮಾಡುವುದಿಲ್ಲ. ಆತ್ಮಸಾಕ್ಷಿಗೆ ವಿರುದ್ಧವಾಗಿ ಎಂಥ ಸಂದರ್ಭದಲ್ಲಿಯೂ ಸಹ ನಡೆಯುವುದಿಲ್ಲ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಜನ ಪ್ರೀತಿ, ವಿಶ್ವಾಸ ತೋರಿದ್ದಾರೆ, ಶಕ್ತಿ ತುಂಬಿ ಆಶೀರ್ವದಿಸಿದ್ದಾರೆ. ಕಾನೂನು ಮತ್ತು ನಿಯಮಾವಳಿಗಳ ಚೌಕಟ್ಟಿಯಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಜನಸೇವೆಗೆ ಬದ್ಧ. ಹಿಂದಿನ ಕಾಲದ ಪರಿಸ್ಥಿತಿ ಈಗಿಲ್ಲ, ಕಾಲ ಬದಲಾದಂತೆ ವ್ಯವಸ್ಥೆಯೂ ಬದಲಾಗಿದೆ. ಆಡಳಿತದಲ್ಲಿ ಹೊಸತನ ಬಂದಿದೆ. ಕಾನೂನು ಬಿಗಿಯಾಗಿದೆ. ಹಾಗಾಗಿ ಪರಿಸ್ಥಿತಿಯನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ಶಕ್ತಿ ಕುಂದದAತೆ ಜಾಗೃತಿ ವಹಿಸಬೇಕಿದೆ. ಸುಳ್ಳು, ಅಪಪ್ರಚಾರಗಳಿಗೆ ಕಿವಿಗೊಟ್ಟರೆ ಸಿದ್ಧಾಂತ ಮತ್ತು ಮೌಲ್ಯಗಳಿಗೆ ಬೆಲೆ ಇಲ್ಲದಂತಾಗಲಿದೆ ಎಂದು ಹೇಳಿದ ಅವರು ಕಾಂಗ್ರೆಸ್ ಮಣಿಸಲು ವಿರೋಧಿಗಳು ಕುತಂತ್ರ ಹೆಣೆದಿದ್ದಾರೆ. ಇಲ್ಲಸಲ್ಲದ ಸಂಗತಿಗಳನ್ನು ಎಳೆದು ತರುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಪ್ರತಿ ಬೂತ್‌ಗಳಲ್ಲಿಯೂ ಕಾರ್ಯಕರ್ತರು ಜಾಗೃತಿ ವಹಿಸಬೇಕಿದೆ. ನಾಯಕತ್ವದೊಂದಿಗೆ ಗಟ್ಟಿ ಹೆಜ್ಜೆ ಹಾಕಿದರೆ ತಮಗೂ ಸಹ ದೃಢವಾಗಿ ಮತ್ತೆರಡು ಹೆಜ್ಜೆ ಹಾಕಲು ಸಾಧ್ಯವಾಗಲಿದೆ ಎಂದರು.
ತಾಲೂಕಿನಲ್ಲಿ ಶಿಕ್ಷಣ, ನೀರಾವರಿ, ವಿದ್ಯುತ್ ಹೀಗೆ ಬಹಳಷ್ಟು ಕ್ಷೇತ್ರಗಳಲ್ಲಿ ಸಾಕಷ್ಟು ಸುಧಾರಣೆ ತರಲಾಗುತ್ತಿದೆ. ನೀರಾವರಿ ಕಾಲುವೆ, ಚೆಕ್ ಡ್ಯಾಂ, ಗೇಟ್‌ಗಳ ಸುಧಾರಣೆಯನ್ನು ರು. 50 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಪ್ರತಿಯೊಂದು ಗ್ರಾಮಗಳಲ್ಲಿಯೂ ಅಲ್ಲಿನ ಮುಖಂಡರು, ಹಿರಿಯರ ಸಲಹೆಯಂತೆ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ರು. 50 ಕೋಟಿ ಅನುದಾನ ದೊರಕಿಸಲಾಗಿದೆ. ಹೊಸದಾಗಿ 3 ಸರ್ಕಾರಿ ಪ್ರೌಢಶಾಲೆ ಆರಂಭಿಸಲಾಗಿದೆ. 9 ಶಾಲೆಗಳನ್ನು ಕೆಪಿಎಸ್ ಮಾದರಿಯಲ್ಲಿ ಮೇಲ್ದರ್ಜೆಗೇರಿಸಲಾಗಿದೆ. ವಿದ್ಯುತ್ ಗ್ರಿಡ್‌ಗಳ ವ್ಯವಸ್ಥೆಯಲ್ಲಿ ಅಮೂಲಾಗ್ರ ಸುಧಾರಣೆ ತಂದು ಗುಣಮಟ್ಟದ ವಿದ್ಯುತ್ ಪೂರೈಕೆಗೆ ಚಿತ್ತ ಹರಿಸಲಾಗಿದೆ. ವ್ಯವಸ್ಥೆಯ ಬದಲಾವಣೆಗೆ ಹಲವು ದಿಟ್ಟತನದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಶ್ರೀನಿವಾಸ ಮಾನೆ ಹೇಳಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಜಿಪಂ ಮಾಜಿ ಸದಸ್ಯರಾದ ಕೊಟ್ರಪ್ಪ ಕುದರಿಸಿದ್ದನವರ, ಮಹದೇವಪ್ಪ ಬಾಗಸರ, ಕೆಎಂಎಫ್ ನಿರ್ದೇಶಕ ಚಂದ್ರಪ್ಪ ಜಾಲಗಾರ, ಮುಖಂಡರಾದ ಬಸಣ್ಣ ಹಾಲಭಾವಿ, ಯಲ್ಲಪ್ಪ ಕಲ್ಲೇರ, ಸತ್ತಾರಸಾಬ ಅರಳೇಶ್ವರ, ಮೆಹಬೂಬ ಬ್ಯಾಡಗಿ, ಯಾಸೀರ್ ಅರಾಫತ್ ಮಕಾನದಾರ, ಭರಮಣ್ಣ ಶಿವೂರ, ಗೀತಾ ಪೂಜಾರ, ಅನಿತಾ ಶಿವೂರ, ಪ್ರಕಾಶ ಬಣಕಾರ, ಫಯಾಜ್ ಲೋಹಾರ, ವಸಂತ ವೆಂಕಟಾಪೂರ, ಮಧು ಪಾಣಿಗಟ್ಟಿ ಇದ್ದರು.