ಹುಬ್ಬಳ್ಳಿ:
ಡಿ.4ರಂದು ಬೆಂಗೇರಿಯ ಉದಯ ನಗರದ ಅಕ್ರಮ ಬಡಾವಣೆಯಲ್ಲಿನ 47 ಮನೆಯನ್ನು ನ್ಯಾಯಾಲಯದ ಆದೇಶದಂತೆ ನೆಲಸಮಗೊಳಿಸಲಾಗಿತ್ತು. ಆ ಸಂತ್ರಸ್ತರ ಮನವಿ ಇದು.
ಈ ಜಾಗ ಮೂಲ ಮಾಲೀಕರು ಬೇರೆಯಾಗಿದ್ದರೆ, ಮತ್ತೊಬ್ಬ ತನ್ನದೆ ಜಾಗವೆಂದು ₹ 50 ಬಾಂಡ್‌ನಲ್ಲಿ ಖರೀದಿ ಪತ್ರ ಬರೆದು ಕೊಟ್ಟಿದ್ದ. ಹೀಗಾಗಿ ಆ ಜಾಗದಲ್ಲಿ ಬಡವರು ಲಕ್ಷಾಂತರ ರುಪಾಯಿ ವ್ಯಯಿಸಿ ಸೂರು ಕಟ್ಟಿಕೊಂಡು 20ರಿಂದ 30 ವರ್ಷ ವಾಸವಾಗಿದ್ದರು. ವಿದ್ಯುತ್ ಸಂಪರ್ಕ, ನೀರು ಸರಬರಾಜು ಸೇರಿದಂತೆ ಕೊಳಚೆ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಪರಿಚಯ ಪತ್ರವನ್ನು ನೀಡಲಾಗಿತ್ತು. ಆದರೆ, ಜಾಗದ ಮೂಲ ಮಾಲಿಕ, ಈ ಜಾಗ ತಮ್ಮದು. ಇಲ್ಲಿ ಅಕ್ರಮ ಮನೆಗಳನ್ನು ನಿರ್ಮಿಸಿಕೊಂಡಿದ್ದು ತೆರವುಗೊಳಿಸಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದರು. ಸೂಕ್ತ ದಾಖಲೆ ಪರಿಶೀಲಿಸಿದ ಕೋರ್ಟ್ ಮನೆ ತೆರವಿಗೆ ಆದೇಶಿಸಿದ್ದರಿಂದ ತೆರವು ಕಾರ್ಯಾಚರಣೆ ಮಾಡಲಾಗಿದೆ.ಆಗ ಮಾಲಿಕರು ಒಂದೊಂದು ಮನೆಗೆ ₹ 2 ಲಕ್ಷ ಪರಿಹಾರ ನೀಡಿದ್ದಾರೆ. ಆದರೆ, ಇಷ್ಟು ವರ್ಷ ಅಲ್ಲಿ ವಾಸವಾಗಿದ್ದ ಕೂಲಿ ಕಾರ್ಮಿಕರೆಲ್ಲರೂ ನಿರಾಶ್ರಿತರಾದರು. ಇವರ ಪರವಾಗಿ ಯಾವೊಬ್ಬ ಜನಪ್ರತಿನಿಧಿ ಸರ್ಕಾರದಿಂದ ಪರ್ಯಾಯ ವಸತಿ ಸೌಲಭ್ಯ ಕಲ್ಪಿಸುವ ಚಕಾರ ಎತ್ತಲಿಲ್ಲ. ಅತ್ತ ಕೂಲಿಕಾರ್ಮಿಕರು ಸಹ ನಾವು ಅಕ್ರಮ ಬಡಾವಣೆಯಲ್ಲಿದ್ದು ಯಾರನ್ನು ಪರಿಹಾರ ಕೇಳುವುದು ಎಂದು ಬಾಡಿಗೆ ಮನೆಯಲ್ಲಿ ದಿನ ದೂಡುತ್ತಿದ್ದಾರೆ.
ಇವರಿಗೂ ಪರಿಹಾರ ಕೊಡಿ:ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡ ಮನೆ ತೆರವು ಮಾಡಿ ಇದೀಗ ಅವರಿಗೆ ಪರ್ಯಾಯ ಸೂರು ಕಲ್ಪಿಸಲು ಸರ್ಕಾರ ಮುಂದಾಗಿದೆ. ಕೇರಳ ಸರ್ಕಾರ ಹಾಗೂ ಕೆ.ಸಿ. ವೇಣುಗೋಪಾಲ ಹೇಳುತ್ತಿದ್ದಂತೆ ಎರಡೇ ದಿನದಲ್ಲಿ ಪರಿಹಾರ ನೀಡುವುದಾಗಿ ಘೋಷಿಸಿದೆ. ಆದರೆ, ಹುಬ್ಬಳ್ಳಿಯ ಉದಯಗನಗರ ನಿವಾಸಿಗಳು ಸ್ಥಳೀಯರಾಗಿದ್ದು ಅವರಿಗೂ ವಸತಿ ಸೌಲಭ್ಯ ಕಲ್ಪಿಸಲು ಸರ್ಕಾರ ಕ್ರಮಕೈಗೊಳ್ಳಬೇಕೆಂಬ ಕೂಗು ಕೇಳಿ ಬರುತ್ತಿದೆ.
ಉದಯ ನಗರ ಸೇರಿದಂತೆ ಮಹಾನಗರದಲ್ಲಿ ಸೂರು ಇಲ್ಲದೆ ಅನೇಕರು ಬಾಡಿಗೆ ಮನೆಯಲ್ಲಿ ವಾಸವಿದ್ದು ರಾಜ್ಯ ಸರ್ಕಾರ ಕೇರಳ ನಾಗರಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮುತುವರ್ಜಿ ವಹಿಸಿದಂತೆ ತನ್ನದೆ ರಾಜ್ಯದ ಜನರ ಪರವಾಗಿಯೂ ಕ್ರಮಕೈಗೊಳ್ಳಬೇಕೆಂಬ ಕೂಗು ಆರಂಭವಾಗಿದೆ.