ಗವಿಸಿದ್ಧೇಶ್ವರ ಜಾತ್ರೆಗೆ ಇಂದು ವಿಧ್ಯುಕ್ತ ಚಾಲನೆ

KannadaprabhaNewsNetwork |  
Published : Jan 01, 2026, 03:15 AM IST
31ಕೆಪಿಎಲ್ 4 ವಿದ್ಯುತ್ ದೀಪಗಳ ಅಲಂಕಾರಗೊಂಡಿರುವ ಶ್ರೀ ಗವಿಸಿದ್ಧೇಶ್ವರ ದ್ವಾರಬಾಗಿಲು 31ಕೆಪಿಎಲ್4ಎ,ಬಿ. ತೆಪ್ಪೋತ್ಸವಕ್ಕೆ ಸಿದ್ಧಗೊಂಡಿರುವುದು.31ಕೆಪಿಎಸ್ 4 ಸಿ ಮೆರವಣಿಗೆಯಲ್ಲಿ ಶ್ರೀ ಗವಿಸಿದ್ಧೇಶ್ವರ ಮೂರ್ತಿಯನ್ನು  ತರುತ್ತಿರುವುದು. | Kannada Prabha

ಸಾರಾಂಶ

ನಮ್ಮದು ಕೃಷಿ ಪ್ರಧಾನ ನಾಡಾಗಿದ್ದು ಈ ಹಿನ್ನೆಲೆಯಲ್ಲಿ ನಂದಿ,ಈಶ್ವರ,ಸೂರ್ಯ, ಚಂದ್ರ, ವರುಣ, ಪ್ರಕೃತಿ ಇವುಗಳಿಗೆ ಪೂಜೆ ಸಲ್ಲಿಸುವದು ನಮ್ಮ ಪ್ರಥಮ ಕರ್ತವ್ಯ

ಕೊಪ್ಪಳ: ದಕ್ಷಿಣ ಭಾರತದ ಮಹಾ ಕುಂಭಮೇಳ ಎಂದು ಪ್ರಸಿದ್ಧಿಯಾಗಿರುವ ಶ್ರೀಗವಿಸಿದ್ಧೇಶ್ವರ ಜಾತ್ರಾಮಹೋತ್ಸವಕ್ಕೆ ಜ.1 ರಂದು ವಿಧ್ಯುಕ್ತ ಚಾಲನೆ ದೊರೆಯಲಿದೆ. ಬೆಳಗ್ಗೆ ಗವಿಸಿದ್ಧನ ಗದ್ದುಗೆಗೆ ವಿಶೇಷ ಅಭಿಷೇಕ ಮತ್ತು ಮುದ್ದಾಬಳ್ಳಿಯಿಂದ ತಂದಿರುವ ಮೂರ್ತಿಯ ಸ್ಥಾಪನೆಯೊಂದಿಗೆ ಚಾಲನೆ ದೊರೆಯಲಿದ್ದು, ಸಂಜೆ ತೆಪ್ಪೋತ್ಸವ ನಡೆಯಲಿದೆ.

ಇಂದು ಬಸವಪಟ ಆರೋಹಣ ಕಾರ್ಯಕ್ರಮ: ಶ್ರೀಗವಿಮಠದ ಜಾತ್ರೆ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳು ಪ್ರಾರಂಭವಾಗುತ್ತಿದ್ದು, ಜ.1ರ ಮಧ್ಯಾಹ್ನ 2 ಗಂಟೆಗೆ ಬಸವ ಪಟ ಕಾರ್ಯಕ್ರಮ ಶ್ರೀಗವಿಸಿದ್ಧೇಶ್ವರ ಕರ್ತೃ ಗದ್ದುಗೆ ಬಳಿ ಜರುಗಲಿದೆ.

ಜಾತ್ರಾಮಹೋತ್ಸವದ ಅಂಗವಾಗಿ ಮಹಾರಥೋತ್ಸವದ ಮುನ್ನಾ ದಿನ ಬಸವಪಟ ಆರೋಹಣ ಎಂಬ ಧಾರ್ಮಿಕ ಕಾರ್ಯಕ್ರಮವೂ ಜರುಗುತ್ತದೆ. ನಮ್ಮದು ಕೃಷಿ ಪ್ರಧಾನ ನಾಡಾಗಿದ್ದು ಈ ಹಿನ್ನೆಲೆಯಲ್ಲಿ ನಂದಿ,ಈಶ್ವರ,ಸೂರ್ಯ, ಚಂದ್ರ, ವರುಣ, ಪ್ರಕೃತಿ ಇವುಗಳಿಗೆ ಪೂಜೆ ಸಲ್ಲಿಸುವದು ನಮ್ಮ ಪ್ರಥಮ ಕರ್ತವ್ಯವಾಗಿದೆ. ಶ್ರೀಗವಿಸಿದ್ಧನ ಸನ್ನಿಧಿಯ ಈ ನಾಡಿನಲ್ಲಿ ಸದಾಕಾಲ ಉತ್ತಮ ಮಳೆ,ಉತ್ತಮ ಬೆಳೆ ಬಂದು ರೈತಾಪಿ ವರ್ಗಕ್ಕೆ ಸುಖ,ಶಾಂತಿ, ಸಮೃದ್ಧಿ ಸದಾ ದೊರೆಯಲಿ ಎಂಬ ಆಶಯಕ್ಕಾಗಿ ಬಸವಪಟ ಆರೋಹಣ ಕಾರ್ಯಕ್ರಮವು ಜರುಗುತ್ತದೆ. ಶ್ರೀಮಠದ ಜಾತ್ರಾ ಪರಂಪರೆಯಲ್ಲಿ ಬಸವಪಟ ಆರೋಹಣ ಕಾರ್ಯಕ್ರಮದ ಮೂಲಕವೇ ಜಾತ್ರೆಗೆ ವಿದ್ಯುಕ್ತವಾಗಿ ಚಾಲನೆ ಸಿಗುತ್ತದೆ. ಶಿವಾನಿ ಶಿವದಾಸ ಸ್ವಾಮಿ ಬೀದರ್ ಹಾಗೂ ತಂಡದ ಸಂಗೀತ ಕಲಾವಿದರಿಂದ ಸಂಜೆ 6 ಗಂಟೆಗೆ ಸಂಗೀತ ಕಾರ್ಯಕ್ರಮ ಜರುಗಲಿದೆ.

ಇಂದು ತೆಪ್ಪೋತ್ಸವ:ಪ್ರತಿ ವರ್ಷದಂತೆ ಈ ವರ್ಷವೂ ಶ್ರೀಮಠದ ಕೆರೆಯಲ್ಲಿ ತೆಪ್ಪೋತ್ಸವ ಜರುಗಲಿದೆ. ಜ.೧ ರಂದು ಸಂಜೆ ೫ ಗಂಟೆಗೆ ತೆಪ್ಪೋತ್ಸವ ಕಾರ್ಯಕ್ರಮ ಜರುಗಲಿದೆ. ತೆಪ್ಪೋತ್ಸವಕ್ಕೆ ಈಗಾಗಲೇ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದ್ದು ಅಂತಿಮ ಸ್ಪರ್ಷ ನೀಡಲಾಗುತ್ತದೆ. ತೆಪ್ಪೋತ್ಸವ ನೋಡಲು ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಬಗೆಬಗೆಯ ಹೂಗಳ ಅಲಂಕೃತ ತೆಪ್ಪದಲ್ಲಿ ಕತೃ ಶ್ರೀಗವಿಸಿದ್ದೇಶ್ವರರ ಮೂರ್ತಿ ಪ್ರತಿಷ್ಠಾಪಿಸಿ ತೆಪ್ಪೋತ್ಸವ ನಡೆಸೋದು ನೋಡೋದೆ ಒಂದು ಭಾಗ್ಯ ಎಂಬ ಭಾವನೆ ಭಕ್ತರಲ್ಲಿದೆ. ತೆಪ್ಪೋತ್ಸವಕ್ಕೆ ಭಕ್ತರು ಆಗಮಿಸಿ ಮಹಾಮಹಿಮ ಕತೃ ಗವಿಸಿದ್ಧೇಶನನ್ನು ಸಂಕಲ್ಪ ಮಾಡಿಕೊಂಡರೆ ಇಷ್ಟಾರ್ಥ ಸಿದ್ಧಿಸುತ್ತದೆಂಬ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ ಗವಿಮಠದ ಭಕ್ತಗಣ ತೆಪ್ಪೋತ್ಸವ ನೋಡಲು ಕಾತುರದಿಂದ ಕಾಯುತ್ತಾರೆ.

ಮಾಧ್ಯಮ ಕೇಂದ್ರ ಉದ್ಘಾಟನೆ: ಗವಿಸಿದ್ದೇಶ್ವರ ಜಾತ್ರಾಮಹೋತ್ಸವದ ಹಿನ್ನೆಲೆಯಲ್ಲಿ ನಗರದ ಶ್ರೀಗವಿಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ ಮಾಧ್ಯಮ ಕೇಂದ್ರ ಆರಂಭಿಸಲಾಗಿದೆ. ವಾರ್ತಾ ಪ್ರಸಾರ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್‌ ಮಾಧ್ಯಮ ಕೇಂದ್ರ ಮಂಗಳವಾರ ಉದ್ಘಾಟಿಸಿದರು. ಪ್ರಾಚಾರ್ಯ ಡಾ. ಚನ್ನಬಸವ ಸೇರಿದಂತೆ ಪತ್ರಿಕೆ ಹಾಗೂ ದೂರದರ್ಶನದ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರಾ ವಿದ್ಯುತ್‌ದೀಪಾಲಂಕಾರಗಳಿಂದಲೂ, ಭಕ್ತವೃಂದದಿಂದಲೂ ಶ್ರೀಮಠ ಕಳೆಗಟ್ಟಿದೆ.

ಗೆಳೆಯರ ಬಳಗದಿಂದ ವಿದ್ಯುತ್‌ ದೀಪಾಲಂಕಾರ: ಗವಿಮಠದ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಗೆಳೆಯರ ಬಳಗವೊಂದು ವಿದ್ಯುತ್‌ ದೀಪಾಲಂಕಾರದ ಭಕ್ತಿಯ ಸೇವೆ ಮಾಡಿದೆ. ಗವಿಮಠದ ಜಾತ್ರೆ ಅಂದ್ರೆ ಅದು ಧಾರ್ಮಿಕ, ಸಾಮಾಜಿಕ, ಸಾಂಪ್ರದಾಯಿಕ ಕಾರ್ಯಕ್ರಮಗಳ ಸಂಗಮ. ಹೀಗಾಗಿ ಜಾತ್ರಾ ಮಹೋತ್ಸವದಲ್ಲಿ ನಾಡಿನ ವಿವಿಧೆಡೆಯ ಭಕ್ತರು ಸಹ ತಮ್ಮ ಭಕ್ತಿ ಸೇವೆ ಸಲ್ಲಿಸುತ್ತಾರೆ. ಅದರಂತೆ ಜಿಲ್ಲೆಯ ಜಹಗೀರಗುಡುದೂರಿ ಗ್ರಾಮದ ಸ್ನೇಹಜೀವಿ ಗೆಳೆಯರ ಬಳಗ ಲೈಟಿಂಗ್ ಅರೇಂಜ್ಮೆಂಟ್ ಸೇವಾ ಮಂಡಳಿಯು ನಗರದಲ್ಲಿ ವಿವಿಧ ಬಣ್ಣ ಬಣ್ಣದ ವಿಶಿಷ್ಟ ಆಕರ್ಷಕ ಲೈಟಿಂಗ್ ವ್ಯವಸ್ಥೆ ಮಾಡಿದೆ. ನಗರದ ಬಸವೇಶ್ವರ ಸರ್ಕಲ್‌ನಲ್ಲಿರುವ ಶ್ರೀಗವಿಸಿದ್ದೇಶ್ವರ ಮಹಾದ್ವಾರಕ್ಕೆ ಉಚಿತವಾಗಿ ವಿದ್ಯುತ್‌ ದೀಪಾಲಂಕಾರ ಮಾಡುವ ಮೂಲಕ ಭಕ್ತಿ ಸೇವೆ ಸಮರ್ಪಿಸಿದೆ. ಇದು ವಿದ್ಯುತ್‌ ದೀಪಾಲಂಕಾರಕ್ಕೆ ಮತ್ತಷ್ಟು ಮೆರಗು ತಂದಿದ್ದಾರೆ. ಸುಮಾರು 10 ಜನ ಯುವಕರು ಒಂದು ದಿನ ಪೂರ್ತಿಯಾಗಿ ಈ ದೀಪಾಲಂಕಾರದಲ್ಲಿ ತೊಡಗಿ ಸೇವೆ ಸಲ್ಲಿಸಿದ್ದಾರೆ. ಈ ಮಂಡಳಿಯವರು ಶ್ರೀ ಗವಿಸಿದ್ದೇಶ್ವರ ದ್ವಾರಬಾಗಿಲಿಗೆ ಎರಡನೇ ಬಾರಿ ವಿದ್ಯುತ್‌ ದೀಪಾಲಂಕಾರ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ