ಕನ್ನಡಪ್ರಭ ವಾರ್ತೆ ಅರಕಲಗೂಡು
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ. ಪುಷ್ಪಲತಾ ಮಾತನಾಡಿ, ಯುವ ಜನತೆ ಜಾಗೃತರಾಗಿರಬೇಕು. ದೃಶ್ಯ ಮಾಧ್ಯಮಗಳ ಸೆಳೆತದಿಂದ ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರು ಪ್ರೇಮಪಾಶಕ್ಕೆ ಒಳಗಾಗಿ ತಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ರಾಜ್ಯಾದ್ಯಂತ ಹಾಗೂ ನಮ್ಮ ಜಿಲ್ಲೆಯಲ್ಲಿಯೂ ಸಾಕಷ್ಟು ಎಚ್ಐವಿ ಪಾಸಿಟಿವ್ ಪ್ರಕರಣಗಳು ಕಂಡು ಬರುತ್ತಿದ್ದು, ಆದ್ದರಿಂದ ಯುವ ಸಮುದಾಯ ಜಾಗೃತರಾಗಿ ತಮ್ಮ ತಮ್ಮ ಆರೋಗ್ಯ ಕಾಪಾಡಿಕೊಂಡು ಉತ್ತಮ ಸಮಾಜ ಕಟ್ಟುವಲ್ಲಿ ನೆರವಾಗಬೇಕು ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ನಾಗೇಶ್ ಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ನಾಗರಿಕರು ಈ ಕಾಯಿಲೆ ಬಗ್ಗೆ ಜಾಗೃತಿಯಿಂದ ಇದ್ದರೆ ಯಾರಿಗೂ ಈ ಕಾಯಿಲೆ ಹರಡುವುದಿಲ್ಲ. ಹಾಗಾಗಿ ನಮ್ಮ ವೈಯಕ್ತಿಕ ತಪ್ಪಿನಿಂದ ಕಾಯಿಲೆಯನ್ನು ತಂದುಕೊಳ್ಳಬಹುದೇ ಹೊರತು ಬೇರೆ ಯಾರಿಂದಲೂ ಈ ಕಾಯಿಲೆ ಹರಡುವುದಿಲ್ಲ, ಪ್ರತಿಯೊಬ್ಬರೂ ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಮಾಹಿತಿ ಪಡೆದುಕೊಂಡರೆ ಈ ಕಾಯಿಲೆಯಿಂದ ನಾವೆಲ್ಲರೂ ರಕ್ಷಿಸಿಕೊಳ್ಳಬಹುದು, ಆದ್ದರಿಂದ ಉತ್ತಮ ಸಮಾಜ ನಿರ್ಮಿಸಬಹುದು ಎಂದು ತಿಳಿ ಹೇಳಿದರು.ತಾಲೂಕಿನ ವಕೀಲರ ಸಂಘದ ಅಧ್ಯಕ್ಷ ಎಂ.ಆರ್. ಗಿರೀಶ್ ಮಾತನಾಡಿ, ಇವತ್ತಿನ ಯುವ ಸಮುದಾಯ ದಿನನಿತ್ಯ ಬೆಳಗ್ಗೆ ಎದ್ದ ತಕ್ಷಣ ಯೋಗ, ಧ್ಯಾನ ಮಾಡುವುದು, ರೇಡಿಯೋ ಕಾರ್ಯಕ್ರಮ ಕೇಳುವುದು ರೂಢಿಸಿಕೊಂಡರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ತಾವೆಲ್ಲರೂ ಸಮಾಜದ ಉತ್ತಮ ಪ್ರಜೆಗಳಾಗಿ ಬಾಳಬೇಕು ಎಂದು ತಿಳಿಸಿದರು.ತಾಲೂಕಿನ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ಗಂಗಾಧರ್ ಮಾತನಾಡಿ, ಯುವಜನತೆ ಹಲವಾರು ಆರೋಗ್ಯ ಮಾಹಿತಿಗಳನ್ನು ಪಡೆದುಕೊಳ್ಳಬೇಕು, ಉತ್ತಮ ಅಧ್ಯಯನ ನಡೆಸಿ ಸಾಧನೆ ಮಾಡಬೇಕು. ನಿಮ್ಮ ತಂದೆ- ತಾಯಿ, ಪೋಷಕರ ಹೆಸರನ್ನು ಬೆಳಗುವಂಥ ಮಕ್ಕಳಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆಯ ಆಪ್ತ ಸಮಾಲೋಚಕ ಪರಶುರಾಮ್ ಶಿರೂರ್ ಮಾತನಾಡಿ, ಇಡೀ ದೇಶದಲ್ಲಿ ಕರ್ನಾಟಕ ಸೋಂಕಿತರ ಸಂಖ್ಯೆಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ರಾಜ್ಯದಲ್ಲಿ ಹಾಸನ ಜಿಲ್ಲೆ 13ನೇ ಸ್ಥಾನದಲ್ಲಿದೆ. ಹಾಸನ ಜಿಲ್ಲೆಯಲ್ಲಿ 13,293 ಜನ ಸೋಂಕಿತರಿದ್ದು ಜಿಲ್ಲೆಯಲ್ಲಿ 9,876 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅದರಲ್ಲಿ 239 ಮಕ್ಕಳಲ್ಲಿ ಸೋಂಕನ್ನು ಪತ್ತೆಹಚ್ಚಲಾಗಿದೆ 2002 ರಿಂದ 2025 ವರೆಗೆ ಅರಕಲಗೂಡು ತಾಲೂಕಿನಲ್ಲಿ 913 ಸೋಂಕಿತ ಖಚಿತ ಪ್ರಕರಣಗಳನ್ನು ಕಂಡುಹಿಡಿಯಲಾಗಿದೆ ಎಂದು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ತಾಲೂಕಿನಲ್ಲಿನ ಹಲವಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಯೋಗಶಾಲಾ ತಂತ್ರಜ್ಞರಿಗೆ ಎನ್ ಸಿ ಡಿ ವಿಭಾಗದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗೆ ಮತ್ತು ವಿವಿಧ ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಷೇತ್ರ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು. ಐಟಿಐ ತರಬೇತಿ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಎಚ್ಐವಿ ಏಡ್ಸ್ ಕುರಿತು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು, ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ ಮಾಡಲಾಯಿತು.
ಪ್ರಾಚಾರ್ಯರಾದ ತೌಫಿಕ್ ಅಹಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಆರೋಗ್ಯ ಇಲಾಖೆಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಂಜುಳಾ, ಎನ್ ಸಿ ಡಿ ವಿಭಾಗದ ಡಾ. ಪ್ರೀತಮ್, ಶುಶ್ರೂಷಕರಾದ ಲಲಿತ, ಉಮೇಶ್, ಐಸಿಟಿಸಿ ಪ್ರಯೋಗಶಾಲಾ ತಂತ್ರಜ್ಞಾನದ ಗೌರಮ್ಮ, ಪ್ರಕಾಶ್, ರತ್ನ ಹಾಗೂ ಐಟಿಐ ಕಾಲೇಜಿನ ಎಲ್ಲಾ ಬೋಧಕ ಸಿಬ್ಬಂದಿ, ವಿದ್ಯಾರ್ಥಿ ಗಳು ಹಾಜರಿದ್ದರು.