ಫುಟ್‌ಪಾತ್‌ ಒತ್ತುವರಿ, ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಕಾರ್ಯಾಚರಣೆ

KannadaprabhaNewsNetwork |  
Published : May 25, 2024, 12:48 AM IST
ಫೋನ್‌-ಇನ್‌ ಕಾರ್ಯಕ್ರಮದಲ್ಲಿ ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್‌ವಾಲ್‌  | Kannada Prabha

ಸಾರಾಂಶ

ಮಂಗಳೂರು ಪೊಲೀಸ್‌ ಕಮಿಷನರ್ ಕಚೇರಿಯಲ್ಲಿ ಶುಕ್ರವಾರ ಫೋನ್‌-ಇನ್‌ ಕಾರ್ಯಕ್ರಮದಲ್ಲಿ ನಾಗರಿಕರ ಪ್ರಶ್ನೆಗೆ ಉತ್ತರಿಸಿದ ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್‌ವಾಲ್‌, ಮಂಗಳೂರು ನಗರದಲ್ಲಿ ಫುಟ್‌ಪಾತ್‌ ಒತ್ತುವರಿ ಹಾಗೂ ವಾಹನಗಳ ಪಾರ್ಕಿಂಗ್ ಉಲ್ಲಂಘನೆಗೆ ಸಂಬಂಧಿಸಿ ಸೂಕ್ತ ಕಾರ್ಯಾಚರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ನಗರದಲ್ಲಿ ಫುಟ್‌ಪಾತ್‌ ಒತ್ತುವರಿ ಹಾಗೂ ವಾಹನಗಳ ಪಾರ್ಕಿಂಗ್ ಉಲ್ಲಂಘನೆಗೆ ಸಂಬಂಧಿಸಿ ಸೂಕ್ತ ಕಾರ್ಯಾಚರಣೆ ನಡೆಸಲಾಗುವುದು ಎಂದು ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್‌ವಾಲ್‌ ಹೇಳಿದ್ದಾರೆ.

ಮಂಗಳೂರು ಪೊಲೀಸ್‌ ಕಮಿಷನರ್ ಕಚೇರಿಯಲ್ಲಿ ಶುಕ್ರವಾರ ಫೋನ್‌-ಇನ್‌ ಕಾರ್ಯಕ್ರಮದಲ್ಲಿ ಅವರು ನಾಗರಿಕರ ಪ್ರಶ್ನೆಗೆ ಉತ್ತರಿಸಿದರು.

ನಗರದ ಕಂಕನಾಡಿ, ಕೇಂದ್ರ ಮಾರುಕಟ್ಟೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ರಸ್ತೆ ಮೇಲೆ ಬೀದಿಬದಿ ವ್ಯಾಪಾರ ನಡೆಯುತ್ತಿದೆ. ತಳ್ಳು ಗಾಡಿಗಳ ವ್ಯಾಪಾರಸ್ಥರು ಅಲ್ಲೇ ಪಕ್ಕದಲ್ಲಿ ಕುರ್ಚಿ ಹಾಕಿ ಕುಳಿತುಕೊಳ್ಳುತ್ತಾರೆ. ಇದರಿಂದ ಪಾದಚಾರಿ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರೊಬ್ಬರು ಆಗ್ರಹಿಸಿದರು.

ಇವುಗಳಿಗೆಲ್ಲ ಉತ್ತರಿಸಿದ ಕಮಿಷನರ್‌ ಅನುಪಮ್‌ ಅಗರ್‌ವಾಲ್‌, ಮಂಗಳೂರಲ್ಲಿ ಸಂಚಾರ ಸಮಸ್ಯೆ ನಿವಾರಣೆಗೆ ಮಹಾನಗರ ಪಾಲಿಕೆ, ಸ್ಮಾರ್ಟ್‌ಸಿಟಿ ಹಾಗೂ ಜಿಲ್ಲಾಡಳಿತದ ಸಹಕಾರದೊಂದಿಗೆ ಕ್ರಮ ಕೈಗೊಳ್ಳಲಾಗುವುದು. ಫುಟ್‌ಪಾತ್‌ ಅತಿಕ್ರಮಣ, ನೋಂ ಪಾರ್ಕಿಂಗ್‌ಗಳಲ್ಲಿ ನಿಲುಗಡೆ ಹಾಗೂ ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಾರ್ಯಾಚರಣೆ ನಡೆಸಲಾಗುವುದು. ವಾಹನ ದಟ್ಟಣೆ ಇರುವಲ್ಲಿ ಸಂಚಾರಿ ಪೊಲೀಸರನ್ನು ನಿಯೋಜಿಸಲಾಗುವುದು ಎಂದು ಭರವಸೆ ನೀಡಿದರು.

ಕಾರುಗಳಲ್ಲಿ ಟಿಂಟ್‌ ಗ್ಲಾಸ್‌ ಅಳವಡಿಕೆಗೆ ಅವಕಾಶ ಇಲ್ಲ. ಅವುಗಳ ವಿರುದ್ಧವೂ ಕಾರ್ಯಾಚರಣೆ ನಡೆಸಲಾಗುವುದು. ಟಿಂಟ್‌ ಗ್ಲಾಸ್‌ ಕಾರುಗಳಿಗೆ ದಂಡ ವಿಧಿಸುವುದು ಮಾತ್ರವಲ್ಲ ಟಿಂಟ್‌ ಗ್ಲಾಸ್‌ ಸ್ಥಳದಲ್ಲೇ ತೆರವುಗೊಳಿಸಲು ಸೂಚಿಸಲಾಗುವುದು ಎಂದರು.

ಡಿಸಿಪಿಗಳಾದ ಸಿದ್ಧಾರ್ಥ ಗೋಯಲ್‌, ದಿನೇಶ್‌ ಕುಮಾರ್‌, ಸಂಚಾರಿ ಎಸಿಪಿ ನಝ್ಮಾ ಫರೂಕಿ ಮತ್ತಿತರರಿದ್ದರು. ಬಾಕ್ಸ್‌----

ಇ ಆಟೋ ಸಂಚಾರ ಬಿಕ್ಕಟ್ಟು ಶಮನ ಡಿಸಿ ಹೆಗಲಿಗೆ

ಮಂಗಳೂರು ನಗರದಲ್ಲಿ ಇ ಆಟೋರಿಕ್ಷಾ ಸಾಕಷ್ಟು ಸಂಖ್ಯೆಯಲ್ಲಿದ್ದು, ಇದರಿಂದಾಗಿ ಹಾಲಿ ಆಟೋರಿಕ್ಷಾಗಳ ಬಾಡಿಗೆಗೆ ತೊಂದರೆಯಾಗುತ್ತಿದೆ ಎಂಬ ಕೂಗು ಕೇಳಿಬರುತ್ತಿದೆ. ಮಾತ್ರವಲ್ಲ ಇ ಆಟೋಗಳ ಓಡಾಟಕ್ಕೆ ಹಾಲಿ ಆಟೋ ರಿಕ್ಷಾ ಚಾಲಕರು ಅವಕಾಶ ನೀಡುವುದಿಲ್ಲ ಎಂಬ ದೂರೂ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಉಭಯ ಆಟೋರಿಕ್ಷಾಗಳ ಬಿಕ್ಕಟ್ಟು ಶಮನಕ್ಕೆ ಸಭೆ ಕರೆದು ಇತ್ಯರ್ಥಪಡಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್‌ವಾಲ್‌ ಹೇಳಿದರು.

ಫೋನ್‌-ಇನ್‌ ಕಾರ್ಯಕ್ರಮದಲ್ಲೂ ಈ ಬಗ್ಗೆ ಪ್ರತ್ಯೇಕ ದೂರು ಕೇಳಿಬಂದಿದೆ. 1997ರಲ್ಲಿ ಆರ್‌ಟಿಎ ಸಭೆ ನಡೆಸಿದಾಗ ಮಂಗಳ‍ೂರಿನ ಜನಸಂಖ್ಯೆ 1.97 ಲಕ್ಷ ಇತ್ತು. ಈಗ ಇದು 7-8 ಲಕ್ಷ ತಲುಪಿದೆ. ಹಾಗಾಗಿ ಆಟೋರಿಕ್ಷಾಗಳ ಸಂಖ್ಯೆಯೂ ಜಾಸ್ತಿಯಾಗಿದೆ. ಕೇಂದ್ರ ಸರ್ಕಾರ ಹಾಗೂ ಹಸಿರುಪೀಠದ ಪರಿಸರ ಮಾಲಿನ್ಯ ತಡೆಗಟ್ಟುವ ಆದೇಶ ಹಿನ್ನೆಲೆಯಲ್ಲಿ ಇ ಆಟೋಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಹಿಂದಿನ ಜಿಲ್ಲಾಧಿಕಾರಿಗಳು ಹೆಚ್ಚಿನ ಇ ಆಟೋಗಳ ಸಂಚಾರಕ್ಕೆ ಮಿತಿ ವಿಧಿಸಿದ್ದರು. ಆದರೆ ಬದಲಾದ ಕಾಲಘಟ್ಟದಲ್ಲಿ ಪರಿಸರಸ್ನೇಹಿ ಆಟೋಗಳಿಗೆ ನಿರ್ಬಂಧ ವಿಧಿಸುವುದು ಬರುವುದಿಲ್ಲ. ಹಾಗಾಗಿ ಹೊಂದಾಣಿಕೆಯಿಂದ ಈ ಸಮಸ್ಯೆ ನಿವಾರಣೆಗೆ ಪ್ರಯತ್ನಿಸಬೇಕಾಗಿದೆ. ಈ ಕುರಿತು ಶೀಘ್ರವೇ ಸಭೆ ಕರೆದು ಸೂಕ್ತ ತೀರ್ಮಾನ ಕೈಗೊಳ್ಳುವ ಅಗತ್ಯತೆಯನ್ನು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಲಾಗಿದೆ ಎಂದರು.

PREV

Latest Stories

ಏಕರೂಪ ಸಿನಿಮಾ ಟಿಕೆಟ್‌ ದರಕ್ಕೆ ಕರಡು- ಗರಿಷ್ಠ ಟಿಕೆಟ್‌ ದರ ₹200 ನಿಗದಿ
ಶಾಲೆಯಲ್ಲಿನ ಕಲುಷಿತ ಬಿಸಿಯೂಟ ಸೇವಿಸಿ 68 ವಿದ್ಯಾರ್ಥಿಗಳು ಅಸ್ವಸ್ಥ
ರಾಷ್ಟ್ರೀಯ ಲೋಕ ಅದಾಲತ್: 58.67 ಲಕ್ಷ ಕೇಸ್ ಇತ್ಯರ್ಥ