ಕನ್ನಡಪ್ರಭ ವಾರ್ತೆ ದಾವಣಗೆರೆ
ದೂಡಾ ಯೋಜನೆ ವ್ಯಾಪ್ತಿ ಅಖ್ತರ್ ರಜಾ ವೃತ್ತದಿಂದ ಸರ್ ಮಿರ್ಜಾ ಇಸ್ಮಾಯಿಲ್ ನಗರದ ಮೂಲಕ ಮಾಗಾನಹಳ್ಳಿ ರಸ್ತೆಗೆ ಸಂಪರ್ಕಿಸುವ 120 ಅಡಿ ರಸ್ತೆ ಕಾಮಗಾರಿ ಟೆಂಡರನ್ನು ಇನ್ನು15 ದಿನದಲ್ಲೇ ಅಂತಿಮಗೊಳಿಸಿ, ಕಾಮಗಾರಿ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಪ್ರಾಧಿಕಾರದ ಆಯುಕ್ತರಿಗೆ ಆದೇಶಿಸಿದ್ದಾರೆ.ನಗರದ ದೂಡಾ ಕಚೇರಿಯಲ್ಲಿ ಶನಿವಾರ ಪ್ರಾಧಿಕಾರದ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ದೂಡಾ ವ್ಯಾಪ್ತಿಗೊಳಪಡುವ ಮಾಗಾನಹಳ್ಳಿ ರಸ್ತೆ ಸಂಪರ್ಕಿಸುವ 120 ಅಡಿ ರಸ್ತೆ ಕಾಮಗಾರಿ ಟೆಂಡರ್ ಪ್ರಕ್ರಿಯೆಯನ್ನ ತ್ವರಿತವಾಗಿ ಪೂರ್ಣಗೊಳಿಸಿ, ಕಾಮಗಾರಿ ಕೈಗೆತ್ತಿಕೊಳ್ಳುವ ಕೆಲಸ ಆಗಲಿ ಎಂದರು.
ಸುಮಾರು 120 ಅಡಿ ಅಗಲದ ರಸ್ತೆ 300 ಮೀಟರ್ ಮಾತ್ರ ಬಾಕಿ ಕಾಮಗಾರಿ ಆಗಬೇಕಿದೆ. ಇದರಿಂದ ವರ್ತುಲ ರಸ್ತೆಯಲ್ಲಿ ಬರುವ ವಾಹನಗಳಿಗೆ ನಿತ್ಯವೂ ಸಮಸ್ಯೆಯಾಗುತ್ತಿದೆ. ಈ ರಸ್ತೆ ನಿರ್ಮಾಣವಾದಲ್ಲಿ ಜಿಲ್ಲಾ ಕೇಂದ್ರದೊಳಗೆ ವಾಹನಗಳ ದಟ್ಟಣೆಯೂ ಕಡಿಮೆಯಾಗಲಿದೆ. ಜನರಿಗೂ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ತ್ವರಿತವಾಗಿ ಕಾಮಗಾರಿ ಆರಂಭಿಸಬೇಕು ಎಂದು ಸೂಚಿಸಿದರು.ದೂಡಾ ಅಧಿಕಾರಿಗಳು ಮಾತನಾಡಿ, ತಾಂತ್ರಿಕ ಬಿಡ್ ಪರಿಶೀಲಿಸಿದ ಆರ್ಥಿಕ ಬಿಡ್ ತೆರೆಯಲು ಸರ್ಕಾರಕ್ಕೆ ಅನುಮೋದನೆಗೆ ಸಲ್ಲಿಸಲಾಗಿದೆ. ಸರ್ಕಾರದ ಹಂತದಲ್ಲಿದ್ದ 15 ದಿನದೊಳಗಾಗಿ ಅನುಮೋದನೆ ಪಡೆದು, ಕಡಿಮೆ ಬಿಡ್ ಮಾಡಿದ ಗುತ್ತಿಗೆದಾರರಿಗೆ ಸಾಮರ್ಥ್ಯವನ್ನು ಆಧರಿಸಿ, ಟೆಂಡರ್ ಅಂತಿಮಗೊಳಿಸಿ, ಕಾಮಗಾರಿ ಕೈಗೊಳ್ಳಳಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಕೇಂದ್ರದ ಪ್ರಮುಖ ರಸ್ತೆಗಳಲ್ಲಿ ನಿವೇಶನಗಳು ಇರುವುದರಿಂದ ಸುಗಮ ಸಂಚಾರಕ್ಕೆ ಸಮಸ್ಯೆಯಾಗಿದ್ದು, ಅಂತಹ ಸ್ಥಳಗಳಿಗೆ ಸೂಕ್ತ ಪರಿಹಾರ ಅಥವಾ ಬದಲಿ ಸ್ವತ್ತನ್ನು ನೀಡಿ, ಸ್ವಾಧೀನಪಡಿಸಿಕೊಂಡು, ಸಾರ್ವಜನಿಕ ಹಿತದೃಷ್ಟಿಯಿಂದ ಅಭಿವೃದ್ಧಿ ಕೈಗೊಳ್ಳಲು ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮಾತನಾಡಿ, ಪಿತ್ರಾರ್ಜಿತ ಸ್ವತ್ತುಗಳಿಗೆ ವಿಳಂಬ ಇಲ್ಲದೇ, ಅನುಮೋದನೆ ನೀಡಿ, ಕುಟುಂಬದ ಆಸ್ತಿಯಲ್ಲಿ ಪಾಲುದಾರಿಕೆಯಡಿ ಚಿಕ್ಕ ಚಿಕ್ಕ 10-5 ಗುಂಟೆಗಳಲ್ಲಿ ನಿವೇಶನ ವಿಂಗಡಣೆ ಮಾಡಿಕೊಳ್ಳುವವರಿಗೆ ಅನಾವಶ್ಯಕ ತೊಂದರೆಯಾಗದಂತೆ ನಿಯಮಬದ್ಧವಾಗಿ, ತ್ವರಿತವಾಗಿ ಪ್ರಾಧಿಕಾರದ ಅಧಿಕಾರಿಗಳು ಅನುಮತಿ ನೀಡಬೇಕು ಎಂದು ಸೂಚಿಸಿದರು.ಪ್ರಾಧಿಕಾರದ ಉಳಿತಾಯದ ಹಣವನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಠೇವಣಿಯಾಗಿಡಲು ಹೆಚ್ಚು ಬಡ್ಡಿ ನೀಡುವ ಬ್ಯಾಂಕ್‌ಗಳಲ್ಲಿಡಲು ಟೆಂಡರ್ ಮೂಲಕ ಅಂತಿಮಗೊಳಿಸಲು ಸಭೆ ಅನುಮೋದನೆ ನೀಡಿತು. ಶಾಸಕರಾದ ಕೆ.ಎಸ್.ಬಸವಂತಪ್ಪ, ಬಿ.ಪಿ.ಹರೀಶ, ವಿಪ ಸದಸ್ಯ ಕೆ.ಅಬ್ದುಲ್ ಜಬ್ಬಾರ್, ಜಿಲ್ಲಾಧಿಕಾರಿ, ದೂಡಾದ ಪ್ರಭಾರ ಅಧ್ಯಕ್ಷ ಡಾ.ಎಂ.ವಿ.ವೆಂಕಟೇಶ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ.ಸಂತೋಷ, ಪ್ರಾಧಿಕಾರದ ಆಯುಕ್ತ ಹುಲಿಮನಿ ತಿಮ್ಮಣ್ಣ ಸೇರಿದಂತೆ ಪ್ರಾಧಿಕಾರಿದ ಅಧಿಕಾರಿಗಳು, ಸಿಬ್ಬಂದಿ ಇದ್ದರು.