ನೋಟಿಸ್ ಕೊಟ್ಟು, ಕಾರ್ಖಾನೆ ಬಂದ್ ಮಾಡ್ತೀವಿ: ಡಿಸಿ

KannadaprabhaNewsNetwork |  
Published : Mar 06, 2026, 02:30 AM IST
5ಕೆಪಿಎಲ್21 ಕೊಪ್ಪಳ ತಾಲೂಕಿನ ಹಿರೇಬಗನಾಳ ಗ್ರಾಮದಲ್ಲಿ ಗ್ರಾಮ ಸಭೆಯಲ್ಲಿ ಕಾರ್ಖಾನೆಯ ಗೋಳು ಹೇಳಿಕೊಳ್ಳುತ್ತಿರುವ ಮಹಿಳೆಯರು  | Kannada Prabha

ಸಾರಾಂಶ

ಸಮಸ್ಯೆಯ ತೀವ್ರತೆ ಅರ್ಥವಾಗಿದೆ. ಇದೆಲ್ಲವನ್ನು ದಾಖಲಿಸಿಕೊಂಡು ಕಾರ್ಖಾನೆಗಳಿಗೆ ನೋಟಿಸ್ ಜಾರಿ ಮಾಡಲಾಗುವುದು.

ಕೊಪ್ಪಳ: ಕಾರ್ಖಾನೆ ಧೂಳಿನ ಸಮಸ್ಯೆಯನ್ನು ಗ್ರಾಮದ ಜನರು ನಿವೇದಿಸಿಕೊಂಡಿದ್ದು, ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ, ಈ ಕುರಿತು ಕಾರ್ಖಾನೆಗಳಿಗೆ ನೋಟಿಸ್ ಜಾರಿ ಮಾಡಿ ನಂತರ ಬಂದ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಹೇಳಿದ್ದಾರೆ.

ತಾಲೂಕಿನ ಹಿರಬೇಗನಾಳ ಗ್ರಾಮದಲ್ಲಿ ಕಾರ್ಖಾನೆಯ ತ್ಯಾಜ್ಯದಿಂದ ಆಗಿರುವ ಹಾನಿ ಪರಿಶೀಲಿಸಿ ನಂತರ ಗ್ರಾಮ ಸಭೆ ನಡೆಸಿ ಮಾತನಾಡಿದರು.

ಸಮಸ್ಯೆಯ ತೀವ್ರತೆ ಅರ್ಥವಾಗಿದೆ. ಇದೆಲ್ಲವನ್ನು ದಾಖಲಿಸಿಕೊಂಡು ಕಾರ್ಖಾನೆಗಳಿಗೆ ನೋಟಿಸ್ ಜಾರಿ ಮಾಡಲಾಗುವುದು. ನೋಟಿಸ್ ಉತ್ತರವನ್ನಾಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಶಾಸಕರ ರಾಘವೇಂದ್ರ ಹಿಟ್ನಾಳಗೆ ಧೂಳಿನ ಗೋಳು ದರ್ಶನ ಮಾಡಿಸಿದ್ದ ನಂತರ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಧೂಳಿನ ಗೋಳು ದರ್ಶನ ಮಾಡಿಸಿದರು.

ಮನೆಯ ಮೇಲಿಂದ ಕರಿಬೂದಿ ಹೇಗೆ ಬೀಳುತ್ತದೆ ನೋಡಿ ಎನ್ನುವುದನ್ನು ನೀರು ಹಾಕಿ ತೋರಿಸಿದರು. ಅಷ್ಟೇ ಅಲ್ಲ, ಮನೆ ಮನೆಗೆ ಸುತ್ತಾಡಿಸಿ ಜನರು ಹೇಗೆ ನರಳುತ್ತಿದ್ದಾರೆ ಎನ್ನುವುದನ್ನು ಮನವರಿಕೆ ಮಾಡಿಸಿದರು. ನಮ್ಮೂರಲ್ಲಿ ಬೆಳೆದಿದ್ದನ್ನು ಮಾರುಕಟ್ಟೆಯಲ್ಲಿ ಕೊಳ್ಳುತ್ತಿಲ್ಲ, ಬೆಳೆ ಇಳುವರಿಯೂ ಬರುತ್ತಿಲ್ಲ ಎನ್ನುವುದನ್ನು ಹೊಲಗಳಿಗೆ ಸುತ್ತಾಡಿಸಿ ತೋರಿಸಿದರು.

ಮಹಿಳೆಯರಂತೂ ನಮ್ಮ ಕುಟುಂಬವನ್ನು ಇದರಿಂದ ಪಾರು ಮಾಡಿ, ಮಕ್ಕಳನ್ನು ನೆಲದ ಮೇಲೆ ಹಾಕುವಂತೆ ಇಲ್ಲ. ಅಷ್ಟೊಂದು ಕರಿಬೂದಿ ಮೆತ್ತಿಕೊಡಿರುತ್ತದೆ. ಮಾಡಿದ ಅಡುಗೆ ಹಾಕಿಕೊಂಡು ಊಟ ಮಾಡಲು ಆಗುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು. ಈ ಕಾರ್ಖಾನೆ ಬಂದ್ ಮಾಡಿಸಿ, ಇಲ್ಲವೇ ನಮ್ಮನ್ನಾದರೂ ಸ್ಥಳಾಂತರ ಮಾಡಿ ಎಂದು ಆಗ್ರಹಿಸಿದರು.

ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಸಮಸ್ಯೆ ಗಂಭೀರವಾಗಿದೆ. ಈ ಕಾರಣಕ್ಕಾಗಿಯೇ ನಾನು ಜಿಲ್ಲಾಧಿಕಾರಿಗಳನ್ನು ಕರೆ ತಂದಿದ್ದೇನೆ. ಅವರ ಮೂಲಕ ಕಾರ್ಖಾನೆಗಳನ್ನು ನಿಯಮಾನುಸಾರ ಬಂದ್ ಮಾಡಿಸಲಾಗುವುದು ಎಂದರು.

ಮಾಜಿ ಸಂಸದ ಸಂಗಣ್ಣ ಕರಡಿ ಮಾತಾಡಿ, ಸಮಸ್ಯೆ ಗಂಭೀರವಾಗಿದ್ದು, ಜನರು ರೋಸಿ ಹೋಗಿದ್ದಾರೆ. ಕಾರ್ಖಾನೆಗಳ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.

ಪರಿಸರ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ: ಪರಿಸರ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು, ಇವರಿಗೆ ಹಲವಾರು ಬಾರಿ ಮನವಿ ಮಾಡಿದ್ದೇವೆ, ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಭೂಮಿ ಕೊಟ್ಟು ನಾವು ತಪ್ಪು ಮಾಡಿದ್ದೇವೆ, ಭೂಮಿ ಕೊಡುವಾಗ ನಮಗೆ ಇದು ಗೊತ್ತಿರಲಿಲ್ಲ. ಕೊಟ್ಟಿರುವ ಭೂಮಿಯಲ್ಲಿ ಕಾರ್ಖಾನೆ ಮಾಡಿಕೊಳ್ಳಲಿ, ಅದು ಬಿಟ್ಟು ಜನರು ಬದುಕಲು ಆಗದಂತೆ ಧೂಳು ಹರಡುವಂತೆ ಮಾಡಿದರೆ ನಾವು ಸುಮ್ಮನಿರಲ್ಲ. ಇಂಥ ಕಾರ್ಖಾನೆ ನಮಗೆ ಬೇಡವೇ ಬೇಡ, ಮೊದಲು ಇವುಗಳನ್ನು ಬಂದ್ ಮಾಡಿ ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಕೆ.ಎಂ.ಸಯ್ಯದ್, ಗೂಳಪ್ಪ ಹಲಿಗೇರಿ, ಮಾಲಿನ್ಯ ನಿಯಂತ್ರಣಾಧಿಕಾರಿ ಹರಿಶಂಕರ ಇದ್ದರು.

ನಮಗೆ ದಯಾಮರಣಕ್ಕೆ ಅನುಮತಿ ನೀಡಿ: ಮನೆಯಲ್ಲಿ ತಾಯಿ ಅನಾರೋಗ್ಯವಾಗಿದ್ದಾಳೆ, ಪುಟ್ಟ ಮಗುವಿಗೆ ಸ್ಟ್ರೋಕ್ ಆಗಿದೆ. ಮತ್ತೊಂದು ಮಗು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದೆ. ನನಗೂ ಸಹ ಧೂಳಿನಿಂದ ಕಣ್ಣು ಆಪರೇಶನ್ ಮಾಡಿಸಬೇಕಾಗಿದೆ. ಇಂತಹ ನರಕ ಜೀವನ ನಮಗೆ ಬೇಕಾಗಿಲ್ಲ, ನಮಗೆ ದಯಾಮರಣಕ್ಕೆ ಅನುಮತಿ ನೀಡಿ ಎಂದು ಹಿರೇಬಗನಾಳ ಗ್ರಾಮದ ಮಹೇಶ ವದಗನಾಳ ಕುಟುಂಬಸ್ಥರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಮನೆಗೆ ಆಗಮಿಸಿದ್ದ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಪರಿಸರ ಅಧಿಕಾರಿಗೆ ಲಿಖಿತ ಮನವಿ ಸಲ್ಲಿಸಿ ಆತ್ಮಹತ್ಯೆ ಮಾಡಿಕೊಳ್ಳುವುದು ಕಾನೂನು ಪ್ರಕಾರ ಅಪರಾಧ. ಇಂಥ ಕೆಟ್ಟ ಪರಿಸರದಲ್ಲಿ ನಾವು ಬದುಕಲು ಆಗುತ್ತಿಲ್ಲ. ಆರೋಗ್ಯ ಹದಗೆಟ್ಟು ಹೋಗಿದ್ದು, ಕೂಡಲೇ ನಮಗೆ ದಯಾಮರಣಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿಕೊಂಡರು.

ನಮ್ಮ ಮನೆಯೊಂದರಲ್ಲಿಯೇ ಈ ಸಮಸ್ಯೆಯಿಲ್ಲ. ಯಾವುದೇ ಮನೆಗೂ ಹೋಗಿ, ಅಲ್ಲಿ ನೆಬ್ಯುಲೈಸೇಶನ್ ಹಾಕಿಕೊಂಡೇ ಬದುಕಬೇಕಾಗಿದೆ. ಎಲ್ಲರ ಮನೆಯಲ್ಲಿಯೂ ನೆಬ್ಯುಲೈಸೇಶನ್ ಯಂತ್ರ ಇಟ್ಟುಕೊಂಡಿದ್ದೇವೆ. ಇಂಥ ದುಸ್ಥಿತಿ ಯಾರಿಗೂ ಬೇಡ ಎಂದು ಪರಿಪರಿಯಾಗಿ ಬೇಡಿಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮರಕ್ಕೆ ಗೂಡ್ಸ್ ವಾಹನ ಡಿಕ್ಕಿ: ಇಬ್ಬರು ಸಾವು
ದುಬೈನಲ್ಲಿ ಸಿಲುಕಿದ್ದ ಬಳ್ಳಾರಿಗರು ಸುರಕ್ಷಿತವಾಗಿ ವಾಪಸ್