ಕನ್ನಡಪ್ರಭ ವಾರ್ತೆ ಹುನಗುಂದ
ಉತ್ತರ ಕರ್ನಾಟಕ ಭಾಗದ ಲಿಂಗಾಯತ ಸಮಾಜದ ಪ್ರಬಲ ನಾಯಕರು ಹಾಗೂ ಅಭಿವೃದ್ಧಿ ಹರಿಕಾರ ಶಾಸಕ ವಿಜಯಾನಂದ ಕಾಶಪ್ಪನವರಿಗೆ ಮತ್ತು ಮಾಜಿ ಡಿಸಿಎಂ ಹಾಗೂ ಗಾಣಿಗ ಸಮಾಜದ ಪ್ರಭಾವಿ ನಾಯಕ ಅಥಣಿ ಮತಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ ಅವರಿಗೆ 2ನೇ ಹಂತದ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಗಾಣಿಗ ಸಮಾಜದ ಮುಖಂಡ ಶ್ರೀನಿವಾಸ ಮೇಟಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಆಗ್ರಹಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ನೀಡಿದರೆ ಬಾಗಲಕೋಟಿ ಜಿಲ್ಲೆಯ ಅನೇಕ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗುವುದರ ಜತೆಗೆ ಹುನಗುಂದ ಮತಕ್ಷೇತ್ರ ಸೇರಿ ಇಡೀ ಜಿಲ್ಲೆ ಅಭಿವೃದ್ಧಿ ಕಾಣಲು ಸಾಧ್ಯ. ಇನ್ನು ಬೆಳಗಾವಿ ವಿಭಾಗದ ಅಥಣಿ ಮತಕ್ಷೇತ್ರದ ಲಿಂಗಾಯತ ಸಮಾಜದ ಪ್ರಭಾವಿ ಶಾಸಕ ಲಕ್ಷ್ಮಣ ಸವದಿ ಅವರನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಅವರು ಸೋತರು ಅವರಿಗೆ ಬಿಜೆಪಿ ಪಕ್ಷ ಉಪಮುಖ್ಯಮಂತ್ರಿಯನ್ನಾಗಿ ಮಾಡಿದ್ದರು. ಹಾಗೆ ಈ ಸರ್ಕಾರದಲ್ಲೂ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಮುಖ್ಯಮಂತ್ರಿ ಡಿಕೆಶಿ ಅವರನ್ನು ಒತ್ತಾಯಿಸಿದರು.
ಗಾಣಿಗ ಸಮಾಜದ ಹಿರಿಯ ಮುಖಂಡರಾದ ಹನುಮಗೌಡ ಹೊಸಮನಿ ಮತ್ತು ಮಲ್ಲಪ್ಪ ನಿಡಶೇಶಿ ಮಾತನಾಡಿ, ವಿಜಯಾನಂದ ಕಾಶಪ್ಪನವರಿಗೆ ಈಗೀನ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆಯ ಮಂತ್ರಿ ಸ್ಥಾನ ನೀಡಬೇಕು. ಕಳೆದ ಅವಧಿಯಲ್ಲಿ ಮುಂದಿನ ಸಾರಿ ಕೊಡ್ತೀವಿ ಅಂತಾ ಕಾಂಗ್ರೆಸ್ ಪಕ್ಷದ ಮುಖಂಡರು ಹೇಳಿದ್ದರೂ ಈ ಬಾರಿ ಕಾಶಪ್ಪನವರಿಗೆ ಸಚಿವ ಸ್ಥಾನ ನೀಡಲೇಬೇಕೆಂದು ಗಾಣಿಗ ಸಮಾಜ ಒಕ್ಕೊರಲಿನಿಂದ ಕಾಂಗ್ರೆಸ್ ಹೈಕಮಾಂಡನ್ನು ಒತ್ತಾಯಿಸುತ್ತೇವೆ ಎಂದರು.ಮುಖಂಡ ಸಂಗನಬಸಪ್ಪ ಹುಲ್ಯಾಳ ಮಾತನಾಡಿ, ಶಾಸಕ ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ನೀಡಬೇಕೆಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಕಾಂಗ್ರೆಸ್ ಹೈಕಮಾಂಡ್ ಪ್ರಮುಖ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರಿಗೆ ಮನವಿ ಮಾಡುತ್ತೇನೆ. ಒಂದು ವೇಳೆ ನಮ್ಮ ಶಾಸಕರಿಗೆ ಮಂತ್ರಿ ಸ್ಥಾನ ನೀಡದಿದ್ದರೇ ಗಾಣಿಗ ಸಮಾಜದಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಶಂಕರಗೌಡ ಅಗಸಿಮುಂದಿನ, ವೀರನಗೌಡ ಮೇಟಿ, ನಿಂಗಪ್ಪ ಹಂಚಿನಾಳ, ಹುಲ್ಲನಗೌಡ ಪಾಟೀಲ, ವೀರಪ್ಪ ಮಾಗಿ ಇತರರು ಇದ್ದರು.