ಕನ್ನಡಪ್ರಭ ವಾರ್ತೆ ಮುಧೋಳ
ಬೆಂಗಳೂರಿನ ರಾಜಭವನದಲ್ಲಿ ಗುರುವಾರ ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಮಾಜಿ ಸಚಿವರು ಹಾಗೂ ರಾಜ್ಯ ಬಿಜೆಪಿಯ ಉಪಾಧ್ಯಕ್ಷ ಡಾ.ಮುರುಗೇಶ್ ಆರ್ ನಿರಾಣಿ ಅವರು ಸೌಜನ್ಯಯುತವಾಗಿ ಭೇಟಿ ಮಾಡಿ ಆತ್ಮೀಯವಾಗಿ ಸನ್ಮಾನಿಸಿ, ಹೂಗುಚ್ಛ ನೀಡಿ ಗೌರವಿಸಿದರು.ಇದೇ ವೇಳೆ ಬಾಗಲಕೋಟೆಯಲ್ಲಿ ಆಯೋಜಿಸಿರುವ ಎಂ.ಆರ್.ಎನ್ ಜ್ಞಾನ ಸಂಕೀರ್ಣ -2026 ಅಂತಾರಾಷ್ಟ್ರೀಯ ಸಮ್ಮೇಳನ ಮತ್ತು ಕಾರ್ಯಾಗಾರದ ಉದ್ಘಾಟನೆಗೆ ಗೌರವಾನ್ವಿತ ರಾಜ್ಯಪಾಲರನ್ನು ಅಧಿಕೃತವಾಗಿ ಆಮಂತ್ರಿಸಿದರು. ತೇಜಸ್ ಇಂಟರ್ನ್ಯಾಷನಲ್ ಎಜುಕೇಷನಲ್ ಇನ್ಸ್ಟಿಟ್ಯೂಷನ್ಸ್ ಆಶ್ರಯದಲ್ಲಿ, ಬಾಗಲಕೋಟೆಯ ನವನಗರದ ಎಂ.ಆರ್.ಎನ್. ಆಯುರ್ವೇದ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಿಂದ ಈ ಬೃಹತ್ ಅಂತಾರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.
ನವದೆಹಲಿಯ ನ್ಯಾಷನಲ್ ಕಮಿಷನ್ ಫಾರ್ ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್ (ಎನ್.ಸಿ.ಐ.ಎಸ್.ಎಂ) ಮತ್ತು ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್.ಜಿ.ಯು.ಎಚ್.ಎಸ್) ಸಹಯೋಗದೊಂದಿಗೆ ಇದೇ ಜೂನ್ 26 ಮತ್ತು 27ರಂದು ಬಾಗಲಕೋಟೆಯ ಹೇಮರಡ್ಡಿ ಮಲ್ಲಮ್ಮ ಸಭಾ ಭವನದಲ್ಲಿ ಈ ಜಾಗತಿಕ ಕಾರ್ಯಕ್ರಮ ನಡೆಯಲಿದೆ.ಭಾರತದ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಾದ ಆಯುಷ್ ಕ್ಷೇತ್ರಕ್ಕೆ ಮತ್ತು ಆಯುರ್ವೇದದ ಬೆಳವಣಿಗೆಗೆ ರಾಜ್ಯಪಾಲರು ನೀಡುತ್ತಿರುವ ನಿರಂತರ ಬೆಂಬಲ ಹಾಗೂ ದೂರದೃಷ್ಟಿಯ ನಾಯಕತ್ವವನ್ನು ಶ್ಲಾಘಿಸಿದ ನಿರಾಣಿ ಅವರು, ಈ ಜಾಗತಿಕ ವೇದಿಕೆಯನ್ನು ಉದ್ಘಾಟಿಸಿ ಕೊಡಬೇಕಾಗಿ ಅತ್ಯಂತ ಗೌರವಪೂರ್ವಕವಾಗಿ ವಿನಂತಿಸಿಕೊಂಡರು. ಆಮಂತ್ರಣವನ್ನು ಸ್ವೀಕರಿಸಿದ ರಾಜ್ಯಪಾಲರು ಕಾರ್ಯಕ್ರಮಕ್ಕೆ ಭೇಟಿ ನೀಡುವ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದರು.
ಈ ಸಮ್ಮೇಳನದಲ್ಲಿ ದೇಶ-ವಿದೇಶಗಳ ಪ್ರಮುಖ ಆಯುರ್ವೇದ ಶಿಕ್ಷಣ ತಜ್ಞರು, ಸಂಶೋಧಕರು, ವೈದ್ಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಆಯುರ್ವೇದದ ಪ್ರಮುಖ ಚಿಕಿತ್ಸಾ ಪದ್ಧತಿಗಳ ಕುರಿತು ಗಂಭೀರ ಚಿಂತನೆ ಮತ್ತು ತರಬೇತಿ ಕಾರ್ಯಾಗಾರಗಳು ನಡೆಯಲಿವೆ ಎಂದು ಈ ವೇಳೆ ಮಾಹಿತಿ ನೀಡಿದರು.